ಮುಂಬೈ: ಹಲವಾರು ವಾರಗಳಿಂದ ಅಸುರಕ್ಷಿತ ವೈಯಕ್ತಿಕ ಸಾಲಗಳ ಹೆಚ್ಚಳದ ಬಗ್ಗೆ ಸಾಲ ನೀಡುವ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ನಂತರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಿಗೆ ಬಂಡವಾಳ ಮೀಸಲು ಪ್ರಮಾಣ ಹೆಚ್ಚಿಸುವ ಮೂಲಕ ಈ ವಿಭಾಗಕ್ಕೆ ಸಾಲ ನೀಡುವುದನ್ನು ದುಬಾರಿಯಾಗಿಸಲು ಮುಂದಾಗಿದೆ.
ಗುರುವಾರ, ಆರ್ಬಿಐ ಗ್ರಾಹಕ ಸಾಲದ ಮೇಲಿನ ರಿಸ್ಕ್ ವೇಯ್ಟ್ ಅನ್ನು ನಾಲ್ಕನೇ ಒಂದು ಭಾಗದಷ್ಟು ಅಂದರೆ ಶೇ 100 ರಿಂದ 125ಕ್ಕೆ ಹೆಚ್ಚಿಸಿದೆ. ಇದರರ್ಥ ಈ ಹಿಂದೆ ಬ್ಯಾಂಕುಗಳು ತಾವು ಸಾಲ ನೀಡಿದ ಪ್ರತಿ 100 ರೂ.ಗೆ 9 ರೂ.ಗಳ ಬಂಡವಾಳ ಕಾಯ್ದುಕೊಳ್ಳಬೇಕಿತ್ತು. ಆದರೆ, ಈಗ ವು 11.25 ರೂ.ಗಳನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ಶೇ 100ಕ್ಕಿಂತ ಕಡಿಮೆ ರಿಸ್ಕ್ ವೇಯ್ಟ್ ಹೊಂದಿದ ಕ್ರೆಡಿಟ್ ಕಾರ್ಡ್ ನೀಡುವಿಕೆ ಮತ್ತು ಎನ್ಬಿಎಫ್ಸಿಗಳಿಗೆ ಬ್ಯಾಂಕ್ಗಳು ನೀಡುವ ಸಾಲದ ಮೇಲಿನ ರಿಸ್ಕ್ ವೇಯ್ಟ್ ಅನ್ನು ಆರ್ಬಿಐ ಹೆಚ್ಚಿಸಿದೆ. ಈ ನಿರ್ದೇಶನವು ಉನ್ನತ ಶ್ರೇಣಿಯ ಹಣಕಾಸು ಕಂಪನಿಗಳ ಬ್ಯಾಂಕ್ ಸಾಲದ ವೆಚ್ಚ ಹೆಚ್ಚಿಸುತ್ತದೆ. ಆದರೆ ವಸತಿ ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಂತಹ ಆದ್ಯತೆಯ ಕ್ಷೇತ್ರಗಳಿಗೆ ಸಾಲ ನೀಡುವ ಎನ್ಬಿಎಫ್ಸಿಗಳನ್ನು ಹೊಸ ನಿಯಮದಿಂದ ಹೊರಗಿಡಲಾಗಿದೆ. ಅಲ್ಲದೇ ಹೊಸ ನಿಯಮ ಗೃಹ, ವಾಹನ ಅಥವಾ ಶಿಕ್ಷಣ ಸಾಲಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಅಸುರಕ್ಷಿತ ವೈಯಕ್ತಿಕ ಸಾಲಗಳಿಗೆ ಆರ್ಬಿಐ ಅಪಾಯದ ವೇಟೇಜ್ ಅನ್ನು ಹೆಚ್ಚಿಸಿದ್ದರೂ, ಬ್ಯಾಂಕ್ ಹಲವಾರು ವಿನಾಯಿತಿಗಳನ್ನು ಕೂಡ ನೀಡಿರುವುದರಿಂದ ಚಿಲ್ಲರೆ ಸಾಲದ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿಲ್ಲ ಎಂಬುದು ಎನ್ಬಿಎಫ್ಸಿಗಳ ಅಭಿಪ್ರಾಯವಾಗಿದೆ. ಹೆಚ್ಚಿದ ಬಂಡವಾಳದ ಅವಶ್ಯಕತೆಗಳು ಸಾಲದ ಬಡ್ಡಿದರ ಹೆಚ್ಚಾಗಲು ಕಾರಣವಾಗಬಹುದು. ಇದರಿಂದ ಸಾಲ ನೀಡುವ ವೇಗ ಕುಂಠಿತವಾಗಬಹುದು. ಆದರೆ ಸಾಲದ ದರಗಳು ಕೇವಲ ನಿಯಮಗಳಿಂದ ಮಾತ್ರವಲ್ಲದೇ ಸ್ಪರ್ಧಾತ್ಮಕ ಮಾರುಕಟ್ಟೆ ಮತ್ತು ಮಾರುಕಟ್ಟೆ ಬೇಡಿಕೆಯಿಂದ ಕೂಡ ಪ್ರಭಾವಿತವಾಗುತ್ತವೆ.
ಕೆಲ ಮಾದರಿಯ ಸಾಲಗಳ ಬಗ್ಗೆ ಆರ್ಬಿಐ ಸ್ಪಷ್ಟವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ಬ್ಯಾಂಕ್ ಸಾಲಗಳ ಬೆಳವಣಿಗೆ ಸುಮಾರು 20% ರಷ್ಟು ಹೆಚ್ಚಾಗಿದ್ದರೆ, ಚಿಲ್ಲರೆ ಸಾಲಗಳು 30% ರಷ್ಟು ಹೆಚ್ಚಾಗಿದೆ. ಇದರೊಳಗೆ, ಕ್ರೆಡಿಟ್ ಕಾರ್ಡ್ ಬಾಕಿ ಸುಮಾರು ಶೇ 30ರಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಅಸುರಕ್ಷಿತ ಮತ್ತು ವೈಯಕ್ತಿಕ ಮತ್ತು ಗ್ರಾಹಕ ಸಾಲಗಳನ್ನು ನೀಡುವ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಬ್ಯಾಂಕುಗಳು ಸಾಲ ನೀಡುತ್ತಿವೆ.
ಇದನ್ನೂ ಓದಿ : ಭಾರತದ ಆರ್ಥಿಕತೆಗೆ ಖುಷಿ ಸುದ್ದಿ; ಇಳಿಕೆಯತ್ತ ಕಚ್ಚಾ ತೈಲ ಬೆಲೆ