ನವದೆಹಲಿ: ದೇಶದಲ್ಲಿನ ಹಣದುಬ್ಬರ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಬರೋಬ್ಬರಿ 2 ವರ್ಷಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ದಿಢೀರ್ ಏರಿಕೆ ಮಾಡಿದೆ. ಇದರಿಂದ ಗೃಹ ಸಾಲಗಳ ಬಡ್ಡಿ ದರ, ಆಟೋ, ಕಾರುಗಳ ಇಎಂಐ ಹೊರೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಇಷ್ಟು ದಿನ ಕನಿಷ್ಠ ಬಡ್ಡಿದರದಲ್ಲಿ ಗೃಹ ಸಾಲ, ಇಎಂಐ ಸಾಲ ಲಭ್ಯವಾಗುತ್ತಿತ್ತು. ಆದರೆ, ಇದೀಗ ರೆಪೊ ದರ ಏರಿಕೆಯಾಗಿರುವ ಕಾರಣ ಇವುಗಳ ಬಡ್ಡಿದರದಲ್ಲಿ ಏರಿಕೆ ಕಂಡು ಬರಲಿದ್ದು, ಇತರ ಸಾಲಗಳ ಬಡ್ಡಿ ದರ ಸಹ ಹೆಚ್ಚಾಗುವ ಸಾಧ್ಯತೆ ಇದೆ. ರೆಪೊ ದರ ಏರಿಕೆ ಮಾಡಿರುವುದರಿಂದ ಸಣ್ಣ ಹೂಡಿಕೆದಾರರು ಮತ್ತು ಉಳಿತಾಯ ಮನೋಭಾವ ಹೊಂದಿರುವ ಗ್ರಾಹಕರಿಗೆ ಪ್ರಯೋಜನ ಆಗುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: ಅಚ್ಚರಿಯ ರೀತಿಯಲ್ಲಿ ರೆಪೊ ದರ ಏರಿಕೆ... ಮುಂಬೈ ಷೇರು ಸೂಚ್ಯಂಕದಲ್ಲಿ 1307 ಅಂಕ ದಿಢೀರ್ ಕುಸಿತ
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿ, ರೆಪೊ ದರ ಹೆಚ್ಚಿಸುವುದಾಗಿ ಘೋಷಣೆ ಮಾಡಿದ್ದು, ಶೇ. 4ರಿಂದ 4.40ಕ್ಕೆ ಹೆಚ್ಚಿಸುವುದಾಗಿ ತಿಳಿಸಿದರು. ಇದರಿಂದ ಹೊಸ ಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಲಿದ್ದು, ಹೂಡಿಕೆ ಮಾಡುವವರ ಆದಾಯ ಹೆಚ್ಚಲಿದೆ.
ಏನಿದು ರೆಪೊ ದರ?: ಆರ್ಬಿಐ ದೇಶದ ವಾಣಿಜ್ಯ ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ ಇದಾಗಿದ್ದು, ವಾಣಿಜ್ಯ ಬ್ಯಾಂಕ್ಗಳಿಗೆ ಹಣದ ಕೊರತೆ ಉದ್ಭವವಾದ ಸಂದರ್ಭದಲ್ಲಿ ಆರ್ಬಿಐನಿಂದ ಸಾಲ ಪಡೆದುಕೊಳ್ಳುತ್ತವೆ. ಈ ಹಣಕ್ಕೆ ನೀಡುವ ಬಡ್ಡಿ ದರ ಇದಾಗಿದೆ.
ಯಾವುದರ ಮೇಲೆ ಪರಿಣಾಮ?: ರೆಪೊ ದರ ಏರಿಕೆಯಿಂದ ಗೃಹ ಸಾಲ, ಕಾರುಗಳ ಸಾಲಗಳ ಇಎಂಐ ಹೆಚ್ಚಾಗಲಿದೆ. ಜೊತೆಗೆ ಕೈಗಾರಿಕಾ ಅಭಿವೃದ್ಧಿಯ ಬಡ್ಡಿ ದರದಲ್ಲೂ ಏರಿಕೆ ಕಂಡು ಬರುವ ಸಾಧ್ಯತೆ ಇದೆ. ಉಳಿದಂತೆ ಉಳಿತಾಯ ಬ್ಯಾಂಕ್ ಖಾತೆ ಮತ್ತು ಠೇವಣಿ ಹಣದ ಮೇಲೆ ಹೆಚ್ಚಿನ ಬಡ್ಡಿ ದರ ಲಭ್ಯವಾಗಲಿದೆ.