ನವದೆಹಲಿ : ಸ್ವಾಮಿನಾಥನ್ ಜಾನಕಿರಾಮನ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಆಗಿ ಕೇಂದ್ರ ಸರ್ಕಾರ ಮಂಗಳವಾರ ನೇಮಕ ಮಾಡಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ನೇಮಕಾತಿಯು ಸೇರ್ಪಡೆಗೊಂಡ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಯಾವುದೇ ಮುಂದಿನ ಆದೇಶದವರೆಗೆ ಇರುತ್ತದೆ.
ಸದ್ಯದ ಆರ್‌ಬಿಐ ಡೆಪ್ಯೂಟಿ ಗವರ್ನರ್ ಮಹೇಶ್ ಕುಮಾರ್ ಜೈನ್ ಅವರ ಅಧಿಕಾರಾವಧಿ ಜೂನ್ 22 ರಂದು ಕೊನೆಗೊಳ್ಳಲಿದೆ. ಇದರ ನಂತರ ಜಾನಕಿರಾಮನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆರ್ಬಿಐಗೆ ಒಟ್ಟು ನಾಲ್ವರು ಡೆಪ್ಯೂಟಿ ಗವರ್ನರ್ಗಳಿದ್ದಾರೆ. ಇತರ ಮೂವರೆಂದರೆ - ಮೈಕೆಲ್ ದೇಬಬ್ರತ ಪಾತ್ರ, ಎಂ ರಾಜೇಶ್ವರ್ ರಾವ್ ಮತ್ತು ಟಿ. ರಬಿ ಶಂಕರ್.
ಸ್ವಾಮಿನಾಥನ್ ಜಾನಕಿರಾಮನ್ ಬಗ್ಗೆ ಕುತೂಹಲಕರ ಮಾಹಿತಿ: ಸ್ವಾಮಿನಾಥನ್ ಜಾನಕಿರಾಮನ್ ಅವರು ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಮತ್ತು ಬ್ಯಾಂಕ್‌ನ ಕಾರ್ಪೊರೇಟ್ ಬ್ಯಾಂಕಿಂಗ್ ಮತ್ತು ಸಬ್ಸಿಡಿಯರೀಸ್ ವಿಭಾಗದ ಜವಾಬ್ದಾರಿಯನ್ನು ಹೊಂದಿದ್ದಾರೆ. ಇದಕ್ಕೂ ಮುನ್ನ ಅವರು ಬ್ಯಾಂಕಿನ ಅಶುರೆನ್ಸ್ ವಿಭಾಗಗಳಾದ ಅಪಾಯ ನಿರ್ವಹಣೆ, ನಿಯಂತ್ರಕ ಅನುಸರಣೆ ಮತ್ತು ಒತ್ತಡದಲ್ಲಿರುವ ಆಸ್ತಿಗಳ ವಿಭಾಗದ ಜವಾಬ್ದಾರಿ ಹೊಂದಿದ್ದರು.
ಜಾನಕಿರಾಮನ್ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಅವರು ರಿಟೇಲ್ ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್, ಇಂಟರ್ ನ್ಯಾಷನಲ್ ಬ್ಯಾಂಕಿಂಗ್, ಟ್ರೇಡ್ ಫೈನಾನ್ಸ್, ಕರೆಸ್ಪಾಂಡೆಂಟ್ ಬ್ಯಾಂಕಿಂಗ್ ಮತ್ತು ಎಫ್ಐ ಉತ್ಪನ್ನಗಳು, ಡಿಜಿಟಲ್ ಬ್ಯಾಂಕಿಂಗ್ ಮತ್ತು ಟ್ರಾನ್ಸಾಕ್ಷನ್ ಬ್ಯಾಂಕಿಂಗ್ ಉತ್ಪನ್ನಗಳ ಡೊಮೇನ್ ಪರಿಣತಿಯನ್ನು ಹೊಂದಿರುವ ಬ್ಯಾಂಕರ್ ಆಗಿದ್ದಾರೆ.
ಜಾನಕಿರಾಮನ್ ಅವರು ಎಸ್‌ಬಿಐ ನ ಬಜೆಟ್ ಮತ್ತು ಕಾರ್ಯಕ್ಷಮತೆಯ ಮೇಲ್ವಿಚಾರಣೆ, ಬಂಡವಾಳ ಯೋಜನೆ ಮತ್ತು ಹೂಡಿಕೆದಾರರ ಸಂಬಂಧಗಳ ಮೇಲ್ವಿಚಾರಣೆಗಾಗಿ ಹಣಕಾಸು ಕಾರ್ಯವನ್ನು ನಿರ್ವಹಿಸಿದ್ದಾರೆ. ಡಿಜಿಟಲ್ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥರಾಗಿ ಬ್ಯಾಂಕ್‌ನ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಪ್ರಕ್ರಿಯೆಯ ಭಾಗವಾಗಿದ್ದಾರೆ. ಯೆಸ್ ಬ್ಯಾಂಕ್, ಜಿಯೋ ಪೇಮೆಂಟ್ಸ್ ಬ್ಯಾಂಕ್ ಮತ್ತು ಎನ್‌ಪಿಸಿಐ ಮತ್ತು ಎಸ್‌ಬಿಐ ಜೆವಿ ಬ್ಯಾಂಕ್ ಆಫ್ ಭೂತಾನ್‌ನ ಮಂಡಳಿಗಳಲ್ಲಿ ಎಸ್‌ಬಿಐನ ನಾಮಿನಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮಹೇಶ್ ಕುಮಾರ್ ಜೈನ್ ಬಗ್ಗೆ ಒಂದಿಷ್ಟು: ಸದ್ಯ ನಿರ್ಗಮಿಸುತ್ತಿರುವ ಮಹೇಶ್ ಕುಮಾರ್ ಜೈನ್ ಏಪ್ರಿಲ್ 2017 ರಿಂದ IDBI ಬ್ಯಾಂಕ್‌ನ ಸಿಇಒ ಮತ್ತು ಎಂಡಿ ಆಗಿದ್ದರು. ನವೆಂಬರ್ 2015 ರಿಂದ ಮಾರ್ಚ್ 2017 ರವರೆಗೆ ಇಂಡಿಯನ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ವಿವಿಧ ಕ್ಷೇತ್ರಗಳು ಮತ್ತು ಪಾತ್ರಗಳಲ್ಲಿ ಮೂವತ್ತು ವರ್ಷಗಳ ಬ್ಯಾಂಕಿಂಗ್ ಅನುಭವವನ್ನು ಹೊಂದಿದ್ದಾರೆ. ಜೈನ್ ಅವರು ಎಕ್ಸಿಮ್ ಬ್ಯಾಂಕ್, NIBM, IBPS ಇತ್ಯಾದಿ ಸೇರಿದಂತೆ ಹಲವಾರು ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. MBA ಮತ್ತು FRM ಪದವಿಯೊಂದಿಗೆ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವೀಧರರಾದ ಜೈನ್ ಅವರು ಹಲವಾರು ಬ್ಯಾಂಕಿಂಗ್ ವಲಯದ ಸಮಿತಿಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಭಾರತದಿಂದ ₹1 ಲಕ್ಷ 20 ಸಾವಿರ ಕೋಟಿ ಮೌಲ್ಯದ ಮೊಬೈಲ್ ರಫ್ತು: ಅರ್ಧಪಾಲು ಆ್ಯಪಲ್ನದ್ದು