ಹೈದರಾಬಾದ್: ಇದು ಸ್ಮಾರ್ಟ್ಫೋನ್ ಕಾಲ. ಎಲ್ಲ ಕೆಲಸಗಳು ನಿಂತ ಜಾಗದಲ್ಲೇ ಮುಗಿಸಬಹುದು. ಬ್ಯಾಂಕ್ಗೆ ಹೋಗಿ ವ್ಯವಹರಿಸುವ ದಿನಗಳು ಮಾಯವಾಗಿವೆ. ನೀವು ಬ್ಯಾಂಕಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಹಿಡಿದು ಷೇರುಗಳಲ್ಲಿ ಹೂಡಿಕೆ ಮಾಡುವವರೆಗಿನ ಬಹುತೇಕ ಎಲ್ಲ ವಹಿವಾಟುಗಳು ಬೆರಳ ತುದಿಯ ಮೊಬೈಲ್ನಲ್ಲೇ ಸಾಧ್ಯ. ಇದೆಷ್ಟು ಅನುಕೂಲವೋ ಅಷ್ಟೇ ಅಪಾಯಕಾರಿ. ನೀವು ಕಷ್ಟಪಟ್ಟು ಗಳಿಸಿದ ಹಣ ನಿಮ್ಮ ಒಂದು ಸಣ್ಣ ತಪ್ಪು ನಡೆಯಿಂದ ಕಳೆದುಕೊಳ್ಳುವ ಸಂಭವವಿರುತ್ತದೆ.
ಸೈಬರ್ ಕಳ್ಳರು, ಕಂಪ್ಯೂಟರ್ ಹ್ಯಾಕರ್ಸ್ಗಳು ಪುರಾಣ ಕಾಲದ ಮಾಂತ್ರಿಕರಲ್ಲ. ಅವರು ನಿಮ್ಮಿಂದಲೇ ಪಡೆದ ಮಾಹಿತಿಯಿಂದ ನಿಮಗೆ ಮೋಸ ಮಾಡುತ್ತಾರೆ ಅಷ್ಟೇ. ಬ್ಯಾಂಕ್ನಿಂದ ಕರೆ ಮಾಡಿದ್ದೇವೆ ಎಂದು ಹೇಳುವುದು ಅಥವಾ ಸಂದೇಶವನ್ನು ಕಳಿಸುವ ಮೂಲಕ ನಿಮ್ಮನ್ನು ವಂಚಿಸುತ್ತಾರೆ. ನಿಮ್ಮ ಬ್ಯಾಂಕ್ ಕಾರ್ಡ್‌ನಲ್ಲಿರುವ ಕೊನೆಯ ಸಂಖ್ಯೆ ಮತ್ತು ಸಿವಿವಿ, ಕಾರ್ಡ್ ಮುಕ್ತಾಯ ದಿನಾಂಕ, ಒಟಿಪಿ, ಪಿನ್ಗಳಂತಹ ಗೌಪ್ಯ ಮಾಹಿತಿಯನ್ನು ಸಂಗ್ರಹಿಸುತ್ತಾರೆ ಹುಷಾರ್.
ಸೈಬರ್ ದರೋಡೆಕೋರರು ಕಣ್ಣು ಮಿಟುಕಿಸುವುದರೊಳಗೆ ನಿಮ್ಮೆಲ್ಲಾ ಹಣವನ್ನು ಕದಿಯಲು ಈ ಮಾಹಿತಿ ಸಾಕು. ಇಂತಹ ಸೈಬರ್ ವಂಚಕರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಬಗ್ಗೆ ಬ್ಯಾಂಕ್‌ಗಳು ನಿತ್ಯ ಎಚ್ಚರಿಕೆ ನೀಡುತ್ತಿರುವುದನ್ನು ಕಡ್ಡಾಯವಾಗಿ ಅನುಸರಿಸಿದರೆ ಒಳಿತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಾಗೂ ಖಾತೆದಾರರ ಬ್ಯಾಂಕ್‌ಗಳು ಗ್ರಾಹಕರು ವಂಚಕರ ಬಲೆಗೆ ಬೀಳದಿರಲು ಆಗಾಗ ಎಚ್ಚರಿಕೆ ಸಂದೇಶ ರವಾನಿಸುತ್ತವೆ. ಮಾಧ್ಯಮಗಳಲ್ಲಿ ನಿಯಮಿತವಾಗಿ ಜಾಗೃತಿ ಅಭಿಯಾನಗಳು, ಸುದ್ದಿ ಬಿತ್ತರಿಸುವುದನ್ನು ನಾವು ಕಾಣುತ್ತೇವೆ.
ಹಿಂದೆ ಆರ್‌ಬಿಐ ಮಾತ್ರ ಈ ಕೆಲಸ ಮಾಡುತ್ತಿತ್ತು. ಇತ್ತೀಚಿನ ದಿನಮಾನಗಳಿಂದ ಖಾಸಗಿ ಬ್ಯಾಂಕ್‌ಗಳು ಸಹಿತ ತಮ್ಮ ಗ್ರಾಹಕರನ್ನು ಎಚ್ಚರಿಸಲು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆಕ್ಸಿಸ್ ಬ್ಯಾಂಕ್ ಸೈಬರ್ ಕಳ್ಳರ ವಿರುದ್ಧ ಎಚ್ಚರಿಕೆಯ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸುತ್ತವೆ. ಎಟಿಎಂ ಯಂತ್ರಗಳಲ್ಲೂ ಇವುಗಳು ಕಾಣಸಿಗುತ್ತವೆ. ಡೆಬಿಟ್, ಕ್ರೆಡಿಟ್, ಯುಪಿಐ ಮತ್ತು ಡಿಜಿಟಲ್ ವಹಿವಾಟುಗಳ ಮೇಲೆ ನಿಗಾ ಇಡುವ ಕೆಲಸ ಮಾಡುತ್ತಿವೆ.
ಆರ್ಬಿಎಲ್ನಿಂದ ಪ್ರತಿಜ್ಞೆ ಅಭಿಯಾನ: ಮುಂಬೈ ಮೂಲದ ರತ್ನಾಕರ್ ಬ್ಯಾಂಕ್ ಲಿಮಿಟೆಡ್(ಆರ್ಬಿಎಲ್) #RahoCyberSafe ಅಭಿಯಾನವನ್ನು ಪ್ರಾರಂಭಿಸಿತು. ಅನಾಮಿಕ ಲಿಂಕ್‌ಗಳನ್ನು ಕ್ಲಿಕ್ ಮಾಡದಿರಲು ಪ್ರತಿಜ್ಞೆ ತೆಗೆದುಕೊಳ್ಳುವಂತೆ ಗ್ರಾಹಕರನ್ನು ಕೋರಿತ್ತು. ಸುರಕ್ಷಿತ ಮತ್ತು ವಂಚನೆ ಮುಕ್ತ ಬ್ಯಾಂಕಿಂಗ್‌ಗಾಗಿ ಎಚ್ಡಿಎಫ್ಸಿ ಬ್ಯಾಂಕ್ 'ವಿಜಿಲ್ ಆಂಟಿ' ಎಂಬ ಅಭಿಯಾನ ಮಾಡಿತು. ಅಂದರೆ, ಸುಳ್ಳು ಮಾಹಿತಿ ಕೇಳಿದಾಗ ಈ ಬಗ್ಗೆ ಮಹಿಳೆಯ ಚಿತ್ರವುಳ್ಳ ವಿಜಿಲ್ ಆಂಟಿ ವೆಬ್‌ಸೈಟ್‌ನಲ್ಲಿ ಮಾಹಿತಿ ನಮೂದಿಸಬಹುದು. ಆಗ ಬ್ಯಾಂಕ್ ಇದಕ್ಕೆ ಉತ್ತರ ನೀಡುತ್ತದೆ.
ಸೈಬರ್ ರಕ್ಷಣೆ ಕವರ್: ಎಚ್ಡಿಎಫ್ಸಿ ಇರ್ಗೊ, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಯೂರೆನ್ಸ್, ಬಜಾಜ್ ಅಲಿಯಾಂಜ್ ಜನರಲ್ ಇನ್ಶುರೆನ್ಸ್ ಮತ್ತಿತರ ಕಂಪನಿಗಳು ವೈಯಕ್ತಿಕವಾಗಿ ನಿಮ್ಮ ಹಣಕ್ಕೆ ಸೈಬರ್ ರಕ್ಷಣೆ ಯೋಜನೆಯನ್ನು ಜಾರಿ ಮಾಡಿವೆ. ಒಂದು ವೇಳೆ ನಿಮ್ಮ ಅರಿವಿಲ್ಲದೇ ಖಾತೆಯಲ್ಲಿದ್ದ ಹಣ ಕಳ್ಳತನವಾದಲ್ಲಿ ಅದಕ್ಕೆ ಪರಿಹಾರವನ್ನು ಈ ಕವರ್ ಮೂಲಕ ಕ್ಲೇಮ್ ಮಾಡಿಕೊಳ್ಳಬಹುದು.
ವೈರಸ್ ಮೂಲಕ ಕಂಪ್ಯೂಟರ್ ಮತ್ತು ಮೊಬೈಲ್ ಹ್ಯಾಕ್ ಮಾಡುವುದರಿಂದ ಉಂಟಾಗುವ ನಷ್ಟದಿಂದಲೂ ನಿಮ್ಮ ಹಣಕ್ಕೆ ಪರಿಹಾರ ಸಿಗಲಿದೆ. ಇಷ್ಟಲ್ಲದೇ, ಕೆಲ ಬ್ಯಾಂಕ್‌ಗಳು ಹೆಚ್ಚಿನ ಭದ್ರತೆ ಕಾರಣ ಒಟಿಪಿ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು ಸಂಖ್ಯೆಯನ್ನು ಕೇಳುವ ಮೂಲಕ ಹಣಕ್ಕೆ ರಕ್ಷಣೆ ನೀಡುತ್ತಿವೆ. ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್‌ಗಾಗಿ ಆನ್‌ಲೈನ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗೆ ಒಂದೇ ಪಾಸ್‌ವರ್ಡ್ ಅನ್ನು ಬಳಸಬಾರದು. ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ಅನಧಿಕೃತ ಆ್ಯಪ್ಗಳನ್ನು ಡೌನ್ಲೋಡ್ ಮಾಡದಂತೆಯೂ ಅರಿವು ಮೂಡಿಸಲಾಗುತ್ತಿದೆ.
ವಂಚನೆ ತಡೆಯುವ ಸಲಹೆಗಳು: ಹೆಚ್ಚಿನ ಆದಾಯದ ಭರವಸೆ ನೀಡುವ ಸಂದೇಶಗಳನ್ನು ನಂಬಬೇಡಿ. QR ಕೋಡ್ ಸ್ಕ್ಯಾನ್ ಕೋರಿಕೆಗಳೂ ನಿಮ್ಮನ್ನು ವಂಚಿಸುವ ಸಾಧ್ಯತೆ ಇರುತ್ತದೆ. ಯಾವುದೇ ಮಾಹಿತಿಗಾಗಿ ಬ್ಯಾಂಕ್‌ಗಳು ನೇರವಾಗಿ ನಿಮಗೆ ಕರೆ ಮಾಡುವುದಿಲ್ಲ. ಒಂದು ವೇಳೆ ಬ್ಯಾಂಕ್ ಪರವಾಗಿ ಯಾರಾದರೂ ಕರೆ ಮಾಡಿದರೆ, ಅವರ ವಿವರಗಳು, ಫೋನ್ ಸಂಖ್ಯೆ ನಿಮ್ಮ ಆನ್‌ಲೈನ್ ಖಾತೆಯಲ್ಲಿ ಗೋಚರಿಸುತ್ತವೆ. ಅವುಗಳನ್ನು ಪರಿಶೀಲಿಸಿ. ಅಪರಿಚಿತರು ನೀಡುವ ವೈಫೈ ಅನ್ನು ಬಳಸಿಕೊಂಡು ಎಂದಿಗೂ ಮೊಬೈಲ್ ಮೂಲಕ ವಹಿವಾಟುಗಳನ್ನು ಮಾಡಬೇಡಿ.
ಓದಿ: ಬ್ಯಾಂಕ್ ಮುಂಚೂಣಿ ಸಿಬ್ಬಂದಿ ಸ್ಥಳೀಯ ಭಾಷೆ ತಿಳಿದಿರಲಿ: ನಿರ್ಮಲಾ ಸೀತಾರಾಮನ್