ನವದೆಹಲಿ : ಪ್ರಧಾನ ಮಂತ್ರಿ ಮುದ್ರಾ ಯೋಜನೆಯು 2015 ರಲ್ಲಿ ಪ್ರಾರಂಭವಾದಾಗಿನಿಂದ 40.82 ಕೋಟಿ ಸಾಲ ಖಾತೆಗಳ ಮೂಲಕ ಸುಮಾರು 23.2 ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಯೋಜನೆಯ ಅಡಿಯಲ್ಲಿ ಸುಮಾರು 68 ಪ್ರತಿಶತ ಖಾತೆಗಳು ಮಹಿಳಾ ಉದ್ಯಮಿಗಳಿಗೆ ಸೇರಿವೆ ಮತ್ತು 51 ಪ್ರತಿಶತ ಖಾತೆಗಳು ಎಸ್‌ಸಿ / ಎಸ್‌ಟಿ ಮತ್ತು ಒಬಿಸಿ ವರ್ಗಗಳ ಉದ್ಯಮಿಗಳಿಗೆ ಸೇರಿವೆ. ಮುದ್ರಾ ಯೋಜನೆಯು ದೇಶದ ಉದಯೋನ್ಮುಖ ಉದ್ಯಮಿಗಳಿಗೆ ಸುಲಭವಾಗಿ ಸಾಲ ಲಭ್ಯತೆಗೆ ಕಾರಣವಾಗಿದೆ ಮತ್ತು ಇದರಿಂದ ತಲಾ ಆದಾಯದಲ್ಲಿ ನಿರಂತರ ಹೆಚ್ಚಳವಾಗಿದೆ ಎಂದು ಯೋಜನೆಯ ಎಂಟನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಚಿವೆ ಸೀತಾರಾಮನ್ ಹೇಳಿದರು.
ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 8, 2015 ರಂದು ಪ್ರಾರಂಭಿಸಿದ್ದರು. ಮುದ್ರಾ ಇದು ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ 10 ಲಕ್ಷದವರೆಗೆ ಸುಲಭವಾಗಿ ಯಾವುದೇ ಭದ್ರತೆ ಜಾಮೀನು ಇಲ್ಲದ ಸಾಲ ನೀಡುವ ಯೋಜನೆಯಾಗಿದೆ. ಎಂಎಸ್‌ಎಂಇಗಳ ಮೂಲಕ ಸ್ಥಳೀಯ ಬೆಳವಣಿಗೆಯನ್ನು ಉಲ್ಲೇಖಿಸಿದ ಹಣಕಾಸು ಸಚಿವರು, ಎಂಎಸ್‌ಎಂಇಗಳ ಬೆಳವಣಿಗೆಯು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಭಾರಿ ಕೊಡುಗೆ ನೀಡಿದೆ. ದೃಢವಾದ ದೇಶೀಯ ಎಂಎಸ್‌ಎಂಇಗಳು ದೇಶೀಯ ಮಾರುಕಟ್ಟೆಗಳಿಗೆ ಮತ್ತು ರಫ್ತುಗಳಿಗೆ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಗಿವೆ ಎಂದರು.
ಪಿಎಂಎಂವೈ ಯೋಜನೆಯು ತಳಮಟ್ಟದಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳ ಸೃಷ್ಟಿಗೆ ಸಹಾಯ ಮಾಡಿದೆ ಮತ್ತು ಭಾರತೀಯ ಆರ್ಥಿಕತೆಯನ್ನು ಉತ್ತೇಜಿಸುವ ಜೊತೆಗೆ ವ್ಯವಸ್ಥೆಯ ಬದಲಾವಣೆಗೆ ನಾಂದಿ ಹಾಡಿದೆ ಎಂದು ಅವರು ಹೇಳಿದರು.
ವಿತ್ತ ಸಚಿವೆ ಸೀತಾರಾಮನ್ ಅಮೆರಿಕ ಪ್ರವಾಸ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರದಿಂದ ಆರಂಭವಾಗಲಿರುವ ವಿಶ್ವ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ಜಿ20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಪ್ರಮುಖ ಸಭೆಗಳಲ್ಲಿ ಭಾಗವಹಿಸಲು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.
ಅವರು ಹೂಡಿಕೆದಾರರು, ಅರ್ಥಶಾಸ್ತ್ರಜ್ಞರು ಮತ್ತು ಥಿಂಕ್ ಟ್ಯಾಂಕ್ ಗುಂಪುಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರೊಂದಿಗಿನ ಸಭೆ ಸೇರಿದಂತೆ ದ್ವಿಪಕ್ಷೀಯ ಮಾತುಕತೆಗಳಲ್ಲಿ ಭಾಗವಹಿಸಿ, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಬಲವರ್ಧನೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಕ್ರಿಪ್ಟೋ ಆಸ್ತಿಗಳಂತಹ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸಚಿವೆ ಸೀತಾರಾಮನ್ ಅವರು ಏಪ್ರಿಲ್ 10 ರಿಂದ 16 ರವರೆಗೆ ತಮ್ಮ ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಅಧಿಕೃತ ಭೇಟಿಯನ್ನು ಪ್ರಾರಂಭಿಸಲಿದ್ದಾರೆ. ಸೀತಾರಾಮನ್ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಜಂಟಿಯಾಗಿ ಏಪ್ರಿಲ್ 12-13 ರಂದು ನಡೆಯಲಿರುವ ಎರಡನೇ ಜಿ 20 ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಇದನ್ನೂ ಓದಿ : ರೆಪೋದರ ಯಥಾಸ್ಥಿತಿ: ಶೇ 6.5ರಲ್ಲಿ ಮುಂದುವರಿಸಲು ಆರ್ಬಿಐ ನಿರ್ಧಾರ