ಹೈದರಾಬಾದ್ : ದೇಶದ ಆರ್ಥಿಕ ವಲಯದಲ್ಲಿ ಉಂಟಾಗುವ ಏರುಪೇರುಗಳು ಹಲವು ವಲಯಗಳ ಮೇಲೆ ಪ್ರಭಾವ ಬೀರುತ್ತದೆ. ಸದ್ಯ ದೇಶದಲ್ಲಿ ಉಂಟಾಗಿರುವ ಹಣದುಬ್ಬರವನ್ನು ಸರಿಪಡಿಸಲು ಬ್ಯಾಂಕ್ಗಳು ಬಡ್ಡಿದರವನ್ನು ಏರಿಕೆ ಮಾಡುತ್ತಿವೆ. ಈ ಆರ್ಥಿಕ ಅಸಮತೋಲನವನ್ನು ಸರಿದೂಗಿಸಲು ಬ್ಯಾಂಕ್ಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ.
ಇನ್ನು, ಹೊಸ ಸಾಲ ನೀಡುವ ನಿಯಮಗಳನ್ನು ಬ್ಯಾಂಕ್ಗಳು ಬಿಗಿಗೊಳಿಸುತ್ತಿವೆ. ಇದರಿಂದ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರು ಸಮಸ್ಯೆ ಎದುರಿಸಬೇಕಾಗುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರು ಸಾಲ ಪಡೆಯುವಾಗ ಬ್ಯಾಂಕುಗಳು ಇನ್ನೂ ಹೆಚ್ಚಿನ ಬಡ್ಡಿದರಗಳನ್ನು ವಿಧಿಸುತ್ತವೆ. ಉತ್ತಮ ಪಾವತಿ ಮತ್ತು ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಶೇಕಡಾ ಅರ್ಧದಷ್ಟು ರಿಯಾಯಿತಿಯನ್ನು ಬಡ್ಡಿದರಗಳಲ್ಲಿ ಬ್ಯಾಂಕ್ಗಳು ನೀಡುತ್ತವೆ. ಈ ಕ್ರೆಡಿಟ್ ಸ್ಕೋರ್ ಅನ್ನು ಮರಳಿ ಟ್ರ್ಯಾಕ್ಗೆ ತರಲು, ನೀವು ನಿಮ್ಮ ಹಣಕಾಸಿನ ಅಭ್ಯಾಸಗಳನ್ನು ಬದಲಾಯಿಸಬೇಕಾಗುತ್ತದೆ. ಉಳಿತಾಯವನ್ನು ಹೆಚ್ಚಿಸಿ ಮತ್ತು ಸಾಲದ ಹೊರೆಯನ್ನು ಕಡಿಮೆ ಮಾಡಬೇಕಾಗುತ್ತದೆ.
ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಎಂದರೇನು ? : ಈ ಕ್ರೆಡಿಟ್ ಸ್ಕೋರ್ ಅನ್ನು ಸಾಮಾನ್ಯವಾಗಿ ಸಿಬಿಲ್ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಇಂಡಿಯಾ ಲಿಮಿಟೆಡ್) ಎಂದು ಕರೆಯುತ್ತಾರೆ. ಈ ಕ್ರೆಡಿಟ್ ಸ್ಕೋರ್ ಅನ್ನು 300 ರಿಂದ 900 ಅಂಕಗಳವರೆಗೆ ಲೆಕ್ಕಹಾಕಲಾಗುತ್ತದೆ. ಅಂದರೆ 750ಕ್ಕಿಂತ ಹೆಚ್ಚು ಅಂಕಗಳನ್ನು ಹೊಂದುವುದನ್ನು ಉತ್ತಮ ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಆರ್ಥಿಕವಾಗಿ ಸ್ಥಿರವಾಗಿರುವಿರಿ. ಅಲ್ಲದೆ ನಿಮ್ಮ ಸಾಲದ ಕಂತುಗಳನ್ನು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿರುವಿರಿ ಎಂದು ಅರ್ಥ. ಈ ರೀತಿ ಉತ್ತಮ ಅಂಕ ಪಡೆದವರು ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದು. ಸಾಮಾನ್ಯವಾಗಿ ಬಡ್ಡಿ ದರಗಳು ಏರುತ್ತಿರುವಾಗ ಸಾಲ ನೀಡುವ ಸಂಸ್ಥೆಗಳು ಇಂತಹ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತವೆ.
ಕಳಪೆ ಸ್ಕೋರ್ : 300ರಿಂದ 550 ಅಂಕಗಳ ನಡುವಿನ ಕ್ರೆಡಿಟ್ ಸ್ಕೋರ್ ಅನ್ನು 'ಕಳಪೆ' ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ನಾವು ನಮ್ಮ ಕ್ರೆಡಿಟ್ ಸ್ಕೋರ್ಗಳನ್ನು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಒಂದು ದಿನದ ಕೆಲಸವಲ್ಲ. ಇದನ್ನು ಸಾಧಿಸಲು ವರ್ಷಗಳ ಆರ್ಥಿಕ ಶಿಸ್ತು ಹೊಂದಬೇಕಾಗುತ್ತದೆ. ನೀವು ನಿಮ್ಮ ಕ್ರೆಡಿಟ್ ಸ್ಕೋರ್ನ್ನು ಹೆಚ್ಚಿಸಲು ಬಯಸಿದಾಗ, ಅದರ ಇಳಿಕೆಗೆ ಕಾರಣಗಳನ್ನು ಕಂಡುಹಿಡಿಯಬೇಕು. ಕ್ರೆಡಿಟ್ ವರದಿಯನ್ನು ಕ್ರೆಡಿಟ್ ಬ್ಯೂರೋಗಳು ಅಥವಾ ಆನ್‌ಲೈನ್ ಬ್ಯಾಂಕಿಂಗ್ ಅಗ್ರಿಗೇಟರ್‌ಗಳಿಂದ ನಾವು ಪಡೆಯಬಹುದು.
ನಾವು ಪಡೆದಂತಹ ಕ್ರೆಡಿಟ್ ವರದಿಯನ್ನು ಬಹಳ ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು. ನಂತರ ನಮ್ಮ ಹಣಕಾಸು ನಿರ್ವಹಣೆಯಲ್ಲಿ ದೋಷ ಎಲ್ಲಿದೆ ಎಂಬುದನ್ನು ಕಂಡು ಹಿಡಿಯಬೇಕು. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಕಾರಣಗಳಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯಬಹುದು.
ಹೆಚ್ಚಿನ ಸಂದರ್ಭಗಳಲ್ಲಿ, ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಾವು ಸಮಯಕ್ಕೆ ಸರಿಯಾಗಿ ಪಾವತಿಸದೇ ಇರುವುದು ಮತ್ತು ಸಾಲದ ಕಂತುಗಳನ್ನು ಪಾವತಿಸದೇ ಬಾಕಿ ಉಳಿಸಿರುವುದು ಸ್ಕೋರ್ ವೇಗವಾಗಿ ಕುಸಿಯಲು ಕಾರಣವಾಗುತ್ತದೆ. ಒಟ್ಟು ಸಾಲದ ಕಂತುಗಳ ಪಾವತಿಗಳಲ್ಲಿ ವಿಳಂಬ, ಹೆಚ್ಚಿನ ಸಾಲದ ಬಳಕೆಯ ಅನುಪಾತ, ಅಸುರಕ್ಷಿತ ಸಾಲ, ಕ್ರೆಡಿಟ್ ಬ್ಯೂರೋಗಳಿಗೆ ಸುಳ್ಳು ಮಾಹಿತಿ ನೀಡುವುದು, ಇತರರಿಗೆ ಗ್ಯಾರಂಟಿ ನೀಡುವುದು ಇತ್ಯಾದಿಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು.
ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾದಾಗ, ಬ್ಯಾಂಕ್‌ಗಳಿಂದ ಅಸುರಕ್ಷಿತ ಸಾಲಗಳು ಲಭ್ಯವಾಗುವುದಿಲ್ಲ. ಸಾಲ ಕೊಟ್ಟರೂ ಬಡ್ಡಿ ಹೊರೆ ಜಾಸ್ತಿಯಾಗುತ್ತದೆ. ಹೆಚ್ಚಿನ ಬಡ್ಡಿ ದರಗಳನ್ನು ವಿಧಿಸುವ ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳಿಂದ (NBFC) ಸಾಲ ಪಡೆಯಲು ನೀವು ಪ್ರಯತ್ನಿಸಬಹುದು. ಈ ಸಾಲಗಳನ್ನು ಸಮಯಕ್ಕೆ ಮರುಪಾವತಿ ಮಾಡುವ ಮೂಲಕ, ಒಬ್ಬರು ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಬಹುದು.
ಅನುಸರಿಬೇಕಾದ ಕ್ರಮಗಳೇನು : ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಕೆಲವು ಕೆಲವು ಮಾರ್ಗಗಳಿವೆ. ನೀವು ತೆಗೆದುಕೊಂಡಿರುವ ಸಾಲಗಳ ಕಂತುಗಳನ್ನು ನಿಯಮಿತವಾಗಿ ಪಾವತಿಸಿ. ಕ್ರೆಡಿಟ್ ಕಾರ್ಡ್‌ಗಳ ಸಾಲದ ಬಳಕೆಯ ಮಿತಿಯು ಶೇ. 30ಕ್ಕಿಂತ ಕಡಿಮೆಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಗತ್ಯವಿಲ್ಲದ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ಗಳಿಂದ ದೂರವಿರಿ. ಇನ್ನು ಕ್ರೆಡಿಟ್ ವರದಿಯಲ್ಲಿ ಯಾವುದೇ ತಪ್ಪು ಮಾಹಿತಿ ಕಂಡುಬಂದರೆ ತಕ್ಷಣವೇ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಯನ್ನು ಸಂಪರ್ಕಿಸಿ ಇಂದೇ ಸರಿಪಡಿಸಿಕೊಳ್ಳಿ.
ಇದನ್ನೂ ಓದಿ : ವಿದೇಶಿ ವಿನಿಮಯ ಮೀಸಲು 5.681 ಶತಕೋಟಿ ಡಾಲರ್ಗೆ ಇಳಿಕೆ: ಸತತ ಮೂರನೇ ವಾರ ಕುಸಿತ