ನವದೆಹಲಿ: ಈಗಾಗಲೇ ಭಾರತದಲ್ಲಿ ಯುಪಿಐ ಡಿಜಿಟಲ್ ಪಾವತಿಗಳು ಜನಪ್ರಿಯಗೊಂಡಿದೆ. ಭಾರತೀಯ ಚಿಲ್ಲರೆ ಮಾರಾಟದಲ್ಲಿ ಅತ್ಯಂತ ಯಶಸ್ವಿಯಾಗಿರುವ ಈ ಯುಪಿಐ ವಹಿವಾಟನ್ನು ಇದೀಗ ಹೊರ ದೇಶಗಳೊಂದಿಗೆ ನಡೆಸಬಹುದಾಗಿದೆ. ಇದೇ ಮೊದಲ ಬಾರಿಗೆ ಇಂತಹ ವರ್ಗಾವಣೆ ಭಾರತ ಮತ್ತು ಸಿಂಗಾಪೂರದ ನಡುವೆ ನಡೆಯಲಿದೆ. ಎರಡು ದೇಶಗಳ ಸಹಕಾರದಿಂದಾಗಿ ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಪೇನೌ (Paynow) ಮೂಲಕ ಎರಡು ದೇಶಗಳ ನಡುವೆ ಯುಪಿಐ ಬಳಕೆ ಮಾಡಿ ಹಣದ ವಹಿವಾಟು ಮಾಡಬಹುದಾಗಿದೆ.
ಪ್ರಧಾನಿ ಚಾಲನೆ: ಅಂತರ ದೇಶಗಳ ಮಧ್ಯೆ ಆರಂಭವಾಗಿತುವ ಈ ವಹಿವಾಟಿಗೆ ವರ್ಚುಯಲ್ ಮೂಲಕ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪೂರ್ ತಮ್ಮ ಸಹವರ್ತಿ ಲೀ ಹಸೀನ್ ಲೂನ್ಗ್ ಅವರೊಂದಿಗೆ ಚಾಲನೆ ನೀಡಿದರು. ಈ ವ್ಯವಸ್ಥೆ ಬಳಸಿಕೊಂಡು ಎರಡು ದೇಶಗಳ ನಡುವೆ ಸುಲಭ ವ್ಯವಹಾರಗಳನ್ನು ನಡೆಸಬಹುದಾಗಿದೆ. ಎರಡು ದೇಶದ ಜನರು ಶೀಘ್ರಮ ಮತ್ತು ಸುಲಭ ವೆಚ್ಚದಲ್ಲಿ ಹಣದ ವರ್ಗಾವಣೆ ಮಾಡಬಹುದಾಗಿದೆ. ಎರಡು ದೇಶಗಳ ಜನರು ಕ್ಯೂಆರ್ ಕೋಡ್ ಅಥವಾ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬಳಸಿ ಹಣದ ವಹಿವಾಟು ಮಾಡಬಹುದಾಗಿದೆ.
ಎರಡು ದೇಶಗಳ ನಡುವೆ ಸಹಕಾರ ಸಂಪರ್ಕ: ಇನ್ನು ಭಾರತ ಮತ್ತು ಸಿಂಗಾಪೂರದ ನಡುವೆ ಈ ಹಣದ ವಾಹಿವಾಟಿಗೆ ಫಿನ್‌ಟೆಕ್ ಸರ್ವಿಸ್ ಕಾರ್ಯ ನಿರ್ವಹಿಸಿದ್ದು, ಇದು ತಂತ್ರಜ್ಞಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಕಡಿಮೆ ವೆಚ್ಚದಲ್ಲಿ ಎರಡು ದೇಶಗಳ ಜನರು ರಿಯಲ್ ಟೈಮ್ನಲ್ಲಿ ಹಣದ ವಹಿವಾಟು ಮಾಡಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಉದ್ಘಾಟನೆ ವೇಳೆ ತಿಳಿಸಿದ್ದಾರೆ.
ಇನ್ನು ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಶಕ್ತಿಕಾಂತ್ ದಾಸ್ ಹಾಗೂ ಸಿಂಗಾಪೂರ್ನ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರವಿ ಮೆನಸ್, ದೇಶದ ಉನ್ನತ ಆರ್ಥಿಕ ಅಧಿಕಾರಿಗಳು ಕೂಡ ಹಾಜರಿದ್ದರು.
ಫಿನ್‌ಟೆಕ್ ಆವಿಷ್ಕಾರ ಈ ಪೇನೌ: ಫಿನ್‌ಟೆಕ್ ಆವಿಷ್ಕಾರಕ್ಕಾಗಿ ಭಾರತವು ವೇಗವಾಗಿ ಬೆಳೆಯುತ್ತಿರುವ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯದ ಜಾಗತೀಕರಣವನ್ನು ಚಾಲನೆ ಮಾಡುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಪ್ರಮುಖ ಪಾತ್ರ ವಹಿಸಿದೆ. ಭಾರತಕ್ಕೆ ಮಾತ್ರ ಈ ಯುಪಿಐ ಸಿಮೀತವಾಗಿಲ್ಲ. ಇತರ ದೇಶಗಳು ಕೂಡ ಇದರಿಂದ ಲಾಭ ಪಡೆಯುತ್ತಿದೆ. ಭಾರತ ಮತ್ತು ಸಿಂಗಾಪೂರ ನಡುವಿನ ಈ ಸಹಕಾರದಿಂದಾಗಿ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಲಾಭ ಪಡೆಯಲಿದ್ದಾರೆ ಎಂದರು. ಎರಡು ದೇಶಗಳಲ್ಲಿ ಇರುವ ಜನರು ಇದೀಗ ಕಡಿಮೆ ವೆಚ್ಚದಲ್ಲಿ ಹಣ ವರ್ಗಾವಣೆ ಮಾಡಬಹುದಾಗಿದೆ.
ಯುಪಿಐ ಪೇಮೆಂಟ್ ವ್ಯವಸ್ಥೆಯ ಪ್ರಖ್ಯಾತಿಯಿಂದಾಗಿ ಭಾರತಕ್ಕೆ ಬರುವ ವಿದೇಶಿಯರು ದೇಶದೊಳಗೆ ಯುಪಿಐ ಬಳಸಿ ಡಿಜಿಟಲ್ ಪಾವತಿ ಮಾಡುವ ಅವಕಾಶಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಭಾರತದಲ್ಲಿ ರಿಟೇಲ್ ಡಿಜಿಟಲ್ ಪೇಮೆಂಟ್ ಹೆಚ್ಚು ಪ್ರಖ್ಯಾತಿ ಪಡೆದಿದ್ದು, ಇದರ ಅಳವಡಿಕೆ ಬಲು ಬೇಗ ನಡೆಯುತ್ತಿದೆ.
ಇದನ್ನೂ ಓದಿ: ಡಿಸೆಂಬರ್ 2022ರಲ್ಲಿ ಸುಮಾರು 15 ಲಕ್ಷ ಸದಸ್ಯರು ಇಪಿಎಫ್ಒಗೆ ಸೇರ್ಪಡೆ.. ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ?