ದುಬಾರಿ ಸ್ಮಾರ್ಟ್ ಟಿವಿ, ಪ್ರೀಮಿಯಂ ಮೊಬೈಲ್ ಫೋನ್ ಖರೀದಿಸಬೇಕೆಂದುಕೊಂಡಿದ್ದೀರಿ. ಆದರೆ ಅದನ್ನು ಖರೀದಿಸುವಷ್ಟು ಹಣ ನಿಮ್ಮ ಬಳಿಯಿಲ್ಲ ಎಂದು ಚಿಂತಿಸುತ್ತೀದ್ದೀರಾ? ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಈ ಪ್ರೀಮಿಯಂ ಉತ್ಪನ್ನ ಖರೀದಿಸುವ ಆಸೆಗಳನ್ನು ನೋ ಕಾಸ್ಟ್ EMI ತಕ್ಷಣವೇ ಪೂರೈಸುತ್ತದೆ. ಇಲ್ಲಿ ನೀವು ಬಯಸುವ ಉತ್ಪನ್ನಗಳನ್ನು ಯಾವುದೇ ಹಣ ನೀಡದೆ ಖರೀದಿಸುವ ಅವಕಾಶ ನಿಮಗಿದೆ.
ಆದರೆ ಒಂದೇ ಸಮಸ್ಯೆ ನೋ ಕಾಸ್ಟ್ EMI ಅಡಿಯಲ್ಲಿ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಾಗುವುದಿಲ್ಲ. ಇಲ್ಲಿ ಅವರು ರಿಯಾಯಿತಿಗಳನ್ನು ನೀಡುವುದಿಲ್ಲ. ಉತ್ಪನ್ನದ ಬೆಲೆಯಲ್ಲೇ ಬಡ್ಡಿದರವನ್ನು ಸರಿಹೊಂದಿಸಿ ಮಾರಾಟ ಮಾಡುತ್ತಾರೆ. ಗ್ರಾಹಕರು ಕಂತುಗಳ ಮೂಲಕ ಪಾವತಿಸಿ ಉತ್ಪನ್ನಗಳನ್ನು ಖರೀದಿಸಬಹುದು ಎನ್ನುವ ಅನುಕೂಲವನ್ನು ಪರಿಗಣಿಸಿ ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಸಾಮಾನ್ಯವಾಗಿ ಹಬ್ಬದ ಸೀಸನ್ ಮತ್ತು ವಿಶೇಷ ಸಂದರ್ಭಗಳಲ್ಲಿ ಆನ್‌ಲೈನ್ ಮಾರ್ಕೆಟ್ ಮಾತ್ರವಲ್ಲದೆ ಆಫ್ಲೈನ್ ಮಾರ್ಕೆಟ್ಗಳೂ ಸಾಕಷ್ಟು ರಿಯಾಯಿತಿ ನೀಡುತ್ತವೆ. ಇನ್ನೇನು ಕ್ರಿಸ್ಮಸ್, ಹೊಸವರ್ಷ ಹತ್ತಿರವಾಗುತ್ತಿದೆ. ರಿಯಾಯಿತಿ ದರ, ಆಫರ್ಗಳಲ್ಲಿ ವಸ್ತುಗಳ ಮಾರಾಟ ಹಬ್ಬ ಪ್ರಾರಂಭವಾಗುತ್ತದೆ. ಉನ್ನತ ಮಟ್ಟದ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು ಇದಕ್ಕೆ ಹೊರತಾಗಿಲ್ಲ.
ಇತ್ತೀಚಿನ ದಿನಗಳಲ್ಲಿ ವೇಗದ ಗತಿಯ ಡಿಜಿಟಲೈಸ್ಡ್ ಜೀವನದ ಜೊತೆ ಜೊತೆಗೆ ಹೆಜ್ಜೆ ಹಾಕಲು ಪ್ರತಿಯೊಬ್ಬರೂ ಹೈಟೆಕ್ ಸರಕುಗಳಿಗೆ ಅಪ್ಗ್ರೇಡ್ ಆಗಲು ಪ್ರಯತ್ನಿಸುತ್ತಿದ್ದಾರೆ. ಹಾಗಿರುವಾಗ ಆನ್‌ಲೈನ್‌ನಲ್ಲಿ ನೋ ಕಾಸ್ಟ್ EMI ಖರೀದಿ ಮಾಡುವ ಮುನ್ನ ಯಾವ ಅಂಶಗಳನ್ನು ಪರಿಗಣಿಸಬೇಕು ಎಂಬುದಕ್ಕೆ ಇಲ್ಲಿದೆ ಕೆಲವು ಸಲಹೆಗಳು.
ಮೊದಲಿಗೆ, ಕೆಲವನ್ನು ಪಡೆಯಬೇಕಾದರೆ ಕೆಲವನ್ನು ಕಳೆದುಕೊಳ್ಳಲು ನಾವು ಸಿದ್ಧರಾಗಿರಬೇಕು. ನಾವು ಯಾವುದಾದರೂ ಉತ್ಪನ್ನದ ಒಟ್ಟು ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿ ಖರೀದಿಸುತ್ತೇವೆ ಎಂದರೆ ಸಾಮಾನ್ಯವಾಗಿ ರಿಯಾಯಿತಿಗಳನ್ನು ನೀಡಲಾಗುತ್ತದೆ. ನೋ ಕಾಸ್ಟ್ EMI ಸೌಲಭ್ಯವನ್ನು ಬೇಕು ಅಂತಿದ್ದರೆ, ನಾವು ರಿಯಾಯಿತಿಗಳನ್ನು ಕಳೆದುಕೊಳ್ಳಲು ಸಿದ್ಧರಾಗಿರಬೇಕು. ಉದಾಹರಣೆಗೆ, ರೂ. 5,000 ಬೆಲೆಯ ಉಪಕರಣವೊಂದು 10 ಶೇ ರಿಯಾಯಿತಿಯಲ್ಲಿ ಮಾರಾಟಕ್ಕಿದೆ ಎಂದರೆ ನಾವು ರೂ. 4,500 ಕೊಟ್ಟು ಖರೀದಿಸಬಹುದು. ಈ ರಿಯಾಯಿತಿ ಅಥವಾ ಆಫರ್ ನೋ ಕಾಸ್ಟ್ EMI ಅಡಿಯಲ್ಲಿ ನೀಡಲಾಗುವುದಿಲ್ಲ.
ಯಾಕೆಂದರೆ ಕಂಪೆನಿಗಳು ಯಾವುದಾದರೂ ರೀತಿಯಲ್ಲಿ ಆ ವೆಚ್ಚವನ್ನು ಹಿಂಪಡೆಯುತ್ತವೆ. ಒಂದು ವಸ್ತುವಿನ ಉತ್ಪಾದನಾ ವೆಚ್ಚ 5000 ಆಗಿದ್ದರೆ ನಾವು ತಿಂಗಳಿಗೆ 500 EMI ಯಂತೆ 12 ತಿಂಗಳು ಪಾವತಿಸಬೇಕಾಗಬಹುದು. ನಾವು 1000 ರೂ ಹೆಚ್ಚು ಅಂದರೆ ಶೇ 20 ಹೆಚ್ಚು ಪಾವತಿ ಮಾಡಿರುತ್ತೇವೆ. ಆಗ ಆ ವಸ್ತುವಿನ ಬೆಲೆ 6000 ಎಂದಾಗುತ್ತದೆ. ಆದರೂ ಅವರು ಅದನ್ನು ನೋ ಕಾಸ್ಟ್ EMI ಎಂದು ಹೇಳಿದರೂ, ಅವರಿಗಾಗುವ ನಷ್ಟವನ್ನು ರಿಯಾಯಿತಿ ದರ ನೀಡದೇ ಇರುವ ಮೂಲಕ ಅಥವಾ ಸಂಸ್ಕರಣಾ ವೆಚ್ಚವನ್ನು ಸಂಗ್ರಹಿಸುವ ಮೂಲಕ ಸರಿದೂಗಿಸಿಕೊಳ್ಳುತ್ತಾರೆ.
ಇನ್ನೊಂದು ವಿಷಯವೆಂದರೆ ಕಂಪೆನಿಗಳು EMI ಮೂಲಕ ಖರೀದಿಸುವ ವೇಳೆ ಬಡ್ಡಿದರವನ್ನು ಪ್ರತ್ಯೇಕವಾಗಿ ತೋರಿಸುತ್ತಾರೆ. ಆದರೆ ನೋ ಕಾಸ್ಟ್ EMI ಸಮಯದಲ್ಲಿ ಯಾವುದೇ ಬಡ್ಡಿದರವನ್ನು ಪ್ರತ್ಯೇಕವಾಗಿ ನಮೂದಿಸುವುದಿಲ್ಲ. ಅದಾಗ್ಯೂ ಉತ್ಪನ್ನದ ವೆಚ್ಚ ಹೆಚ್ಚು ಕಡಿಮೆ ಒಂದೇ ರೀತಿ ಆಗಿರುತ್ತದೆ. ಈ ನೋ ಕಾಸ್ಟ್ EMI ಯ ಪ್ರಯೋಜನವೆಂದರೆ ಗ್ರಾಹಕರು ಒಂದೇ ಬಾರಿಗೆ ಉತ್ಪನ್ನದ ಒಟ್ಟು ವೆಚ್ಚವನ್ನು ಒಂದೇ ಬಾರಿಗೆ ಪಾವತಿಸಲು ವ್ಯವಸ್ಥೆ ಮಡಿಕೊಳ್ಳಬೇಕು ಎಂದು ಚಿಂತಿಸಬೇಕಾಗಿಲ್ಲ.
ದೊಡ್ಡ ಮೊತ್ತದ ಉತ್ಪನ್ನವನ್ನು ಖರೀದಿಸುವ ಸಮಯದಲ್ಲಿ, ಒಟ್ಟು ಮೊತ್ತವನ್ನು ವ್ಯವಸ್ಥೆಗೊಳಿಸಲು ಸಾಧ್ಯವಾಗದಿರುವ ಸಂದರ್ಭದಲ್ಲಿ ಈ ನೋ ಕಾಸ್ಟ್ EMI ಬಹಳ ಉಪಯುಕ್ತವಾಗಿದೆ. ಇದಲ್ಲದೆ, ಇ-ಕಾಮರ್ಸ್ ಸಂಸ್ಥೆಗಳು ಮತ್ತು ವ್ಯಾಪಾರಿಗಳು ಅಂತಹ ಖರೀದಿಗಳನ್ನು ನಿರ್ದಿಷ್ಟ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡಿದರೆ ವಿಶೇಷ ರಿಯಾಯಿತಿಗಳನ್ನು ನೀಡುತ್ತವೆ. ಈ ಸೌಲಭ್ಯಗಳ ಅಡಿಯಲ್ಲಿ ಗರಿಷ್ಠ ಲಾಭ ಪಡೆಯಲು ಈ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.
ಕಂತು ಪಾವತಿಗಳಿಗೆ ಸಂಬಂಧಿಸಿದ ನಿಯಮಗಳು ನೋ ಕಾಸ್ಟ್ EMI ಖರೀದಿಗಳಿಗೂ ಅನ್ವಯಿಸುತ್ತವೆ. ಯಾವುದೇ ಡಿಫಾಲ್ಟ್‌ಗಳು ಕ್ರೆಡಿಟ್ ಸ್ಕೋರ್‌ನಲ್ಲಿ ಕೆಟ್ಟ ಪರಿಣಾಮ ಬೀರುತ್ತವೆ. ಒಂದು ಅಥವಾ ಹೆಚ್ಚಿನ ಕಂತುಗಳು ಬಾಕಿ ಇರುವಾಗ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸಿ. ನೋ ಕಾಸ್ಟ್ EMI ಕೊಡುಗೆಗಳ ಅಡಿಯಲ್ಲಿ ನೀವು ಮುಂಗಡ ಪಾವತಿಗಳನ್ನು ಅಥವಾ ತಡವಾಗಿ ಪಾವತಿಯ ಪೆನಾಲ್ಟಿಗಳನ್ನು ಪರಿಶೀಲಿಸಬೇಕು. ಎಲ್ಲವೂ ನಿಮ್ಮ ಅಗತ್ಯಗಳಿಗೆ ಸರಿಹೊಂದಿದಾಗ ಮಾತ್ರ ಅದನ್ನು ಆಯ್ಕೆ ಮಾಡಿಕೊಳ್ಳಿ.
ನೀವು ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಅಥವಾ ಯಾವುದೇ ಉಪಕರಣವನ್ನು ನೋ ಕಾಸ್ಟ್ EMI ನಲ್ಲಿ ಖರೀದಿಸಬಹುದು. ಕಂಪನಿಗಳು ಮತ್ತು ಆನ್‌ಲೈನ್ ವಾಣಿಜ್ಯ ಸಂಸ್ಥೆಗಳು ಎಲ್ಲಾ ರೀತಿಯ ಗ್ರಾಹಕ ವಸ್ತುಗಳ ಮೇಲೆ ಈ ಸೌಲಭ್ಯವನ್ನು ನೀಡುತ್ತಿವೆ. ನಿಮ್ಮ ಬಳಿ ನಗದು ಇರಲಿ ಅಥವಾ ಇಲ್ಲದಿರಲಿ, ಯಾವುದೇ ಸಾಧನ ಅಥವಾ ಸಾಧನವನ್ನು ಕೇವಲ ಒಂದು ಬಟನ್ ಕ್ಲಿಕ್‌ನಲ್ಲಿ ಖರೀದಿಸುವ ಅವಕಾಶ ಇಂದಿನ ಎಲೆಕ್ಟ್ರಾನಿಕ್ ಜಗತ್ತಿನಲ್ಲಿದೆ.
ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಪಡೆಯುವ ಸಣ್ಣ ಸಾಲ ದೊಡ್ಡ ಸಮಸ್ಯೆಗೆ ಕಾರಣವಾದೀತು, ಎಚ್ಚರ!