ನವದೆಹಲಿ : ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) ಅಡಿಯಲ್ಲಿ ಹೆಚ್ಚುವರಿ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಅಕ್ಕಿ ಮತ್ತು ಗೋಧಿಯ ಬೆಲೆಗಳನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.
ಆಗಸ್ಟ್ 7 ರ ಹೊತ್ತಿಗೆ ಕಳೆದ ಒಂದು ವರ್ಷದಲ್ಲಿ ಗೋಧಿ ಬೆಲೆಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇಕಡಾ 6.77 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡಾ 7.37 ರಷ್ಟು ಹೆಚ್ಚಾಗಿವೆ. ಹಾಗೆಯೇ ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಶೇಕಡಾ 10.63 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡಾ 11.12 ರಷ್ಟು ಏರಿಕೆಯಾಗಿವೆ. ಆಗಸ್ಟ್ 9 ರಂದು ರಾಜಧಾನಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಅಕ್ಕಿಯ ಮೀಸಲು ಬೆಲೆಯನ್ನು ಪ್ರತಿ ಕೆ.ಜಿ.ಗೆ 2 ರೂ. ಇಳಿಸಿ 29 ರೂ. ಗೆ ನಿಗದಿಪಡಿಸಲಾಗುತ್ತಿದೆ ಎಂದು ಹೇಳಿದರು.
ಭಾರತೀಯ ಆಹಾರ ನಿಗಮದ ವತಿಯಿಂದ ಒಎಂಎಸ್ಎಸ್ ಮೂಲಕ ಮಾರಾಟ ಮಾಡಲಾಗುತ್ತಿರುವ ಅಕ್ಕಿಯನ್ನು ಖರೀದಿಸಲು ಸಾಕಷ್ಟು ಸಂಸ್ಥೆಗಳು ಮುಂದೆ ಬಾರದ ಕಾರಣದಿಂದ ಕೇಂದ್ರವು ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರ ನೀಡಿದ ಒಟ್ಟು 5 ಲಕ್ಷ ಟನ್ ಅಕ್ಕಿಯಲ್ಲಿ ಕೇವಲ 0.38 ಪ್ರತಿಶತ (19,000 ಟನ್) ಮಾತ್ರ ಮಾರಾಟ ಮಾಡಲು ಸಾಧ್ಯವಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಏತನ್ಮಧ್ಯೆ ಒಎಂಎಸ್ಎಸ್ ಮೂಲಕ ನೀಡಲಾಗುವ ಒಟ್ಟು 55 ಪ್ರತಿಶತದಷ್ಟು ಗೋಧಿಯನ್ನು ಮಾರಾಟ ಮಾಡಲಾಗಿದೆ. ಜೂನ್ 23 ರಂದು 15 ಲಕ್ಷ ಟನ್ ಗೋಧಿ ನೀಡಲಾಗಿದ್ದು, ಇಲ್ಲಿಯವರೆಗೆ ನಡೆದ ಏಳು ಇ-ಹರಾಜಿನಲ್ಲಿ 8.2 ಲಕ್ಷ ಟನ್ ಗೋಧಿ ಮಾರಾಟವಾಗಿದೆ. "ಪ್ರತಿ ಹರಾಜಿನಲ್ಲಿ ಗೋಧಿಗೆ ನಿರಂತರ ಬೇಡಿಕೆ ಕಂಡು ಬಂದಿದ್ದು, ಗೋಧಿಯ ಸರಾಸರಿ ಮಾರಾಟ ಬೆಲೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರದ ಈ ಕ್ರಮಗಳು ಆಹಾರ ಹಣದುಬ್ಬರವನ್ನು ಕಡಿಮೆ ಮಾಡಲಿವೆ" ಎಂದು ಚೋಪ್ರಾ ಹೇಳಿದರು.
ಜೂನ್ 28 ರಂದು ನಡೆದ ಮೊದಲ ಹರಾಜಿನಲ್ಲಿ ಗೋಧಿಯ ಸರಾಸರಿ ಮಾರಾಟ ಬೆಲೆ ಕ್ವಿಂಟಾಲ್ಗೆ 2,136 ರೂ.ಗಳಿಂದ ಆಗಸ್ಟ್ 9 ರಂದು ಕ್ವಿಂಟಾಲ್ಗೆ 2,254 ರೂ.ಗೆ ಏರಿದರೆ, ಅಕ್ಕಿಯ ಸರಾಸರಿ ಮಾರಾಟ ಬೆಲೆ ಜುಲೈ 5 ರಂದು ಮೊದಲ ಹರಾಜಿನಲ್ಲಿ 3,175 ರೂ.ಗಳಿಂದ ಆಗಸ್ಟ್ 9 ರಂದು 3,163 ರೂ.ಗೆ ಇಳಿದಿದೆ.
ಫೆಬ್ರವರಿ 2022ರಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮಾಡಿದ ನಂತರ ಧಾನ್ಯಗಳ ಬೆಲೆಯಲ್ಲಿ ನಿರಂತರವಾಗಿ ಮತ್ತು ತೀವ್ರವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಪ್ರಮುಖ ಆಹಾರ ಪದಾರ್ಥಗಳ ಬೆಲೆಗಳನ್ನು ನಿಯಂತ್ರಿಸಲು ಭಾರತ ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದರೂ, ಅಕಾಲಿಕ ಮತ್ತು ಕಡಿಮೆ ಮಳೆಯು ಉತ್ಪಾದನೆಯ ಮೇಲೆ ಪರಿಣಾಮ ಬೀರಿರುವುದರಿಂದ ಧಾನ್ಯಗಳ ಬೆಲೆಗಳು ಏರುತ್ತಲೇ ಇವೆ.
ಇದನ್ನೂ ಓದಿ : Sensex Today: ಸೆನ್ಸೆಕ್ಸ್ 150 & ನಿಫ್ಟಿ 60 ಅಂಕ ಏರಿಕೆ; ಮೆಟಲ್, ಆಟೊ ವಲಯ ಶೇರು ಚೇತರಿಕೆ