ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಭಾರತದ ಸ್ಟಾರ್ಟಪ್ ಕಂಪನಿಗಳು 35,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿವೆ ಮತ್ತು ಈ ವಜಾ ಪ್ರಕ್ರಿಯೆ 2024ರ ಆರಂಭದಲ್ಲಿಯೂ ಮುಂದುವರಿಯಲಿದೆ ಎಂದು ವರದಿ ಹೇಳಿದೆ. 2022ರಲ್ಲಿ ಬೈಜುಸ್, ಓಲಾ, ಅನ್ಅಕಾಡೆಮಿ, ಬ್ಲಿಂಕಿಟ್ ಮತ್ತು ವೈಟ್ ಹ್ಯಾಟ್ ಜೂನಿಯರ್, ಸ್ಕಿಲ್-ಲಿಂಕ್, ಗೋ ಮೆಕಾನಿಕ್, ಶೇರ್ ಚಾಟ್ ಮತ್ತು ಜೆಸ್ಟ್ ಮನಿ ಮುಂತಾದ ಭಾರತೀಯ ಸ್ಟಾರ್ಟಪ್ ಕಂಪನಿಗಳು 18,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ.
2023 ರಲ್ಲಿ 17,000ಕ್ಕೂ ಹೆಚ್ಚು ಜನ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಈ ಪಟ್ಟಿ ಬೆಳೆಯುತ್ತಿದೆ ಎಂದು ಇಂಕ್ 42 ವರದಿ ತಿಳಿಸಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಶೇರ್ ಚಾಟ್ ಕಂಪನಿಯ ಪುನರ್ರಚನೆಯ ಭಾಗವಾಗಿ 200 ಉದ್ಯೋಗಿಗಳನ್ನು ಅಥವಾ ತನ್ನ ಶೇಕಡಾ 15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಗೇಮ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಲೋಕೋ ತನ್ನ ಒಟ್ಟು 110 ಸಿಬ್ಬಂದಿಯ ಪೈಕಿ ಸುಮಾರು 36 ಪ್ರತಿಶತ ಅಥವಾ 40 ಉದ್ಯೋಗಿಗಳನ್ನು ವಜಾಗೊಳಿಸಿದೆ. ಗೂಗಲ್ ಬೆಂಬಲಿತ ಎಜುಟೆಕ್ ಪ್ಲಾಟ್ಫಾರ್ಮ್ ಅಡ್ಡಾ 247 ಸುಮಾರು 250ರಿಂದ 300 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಮಾನ್ಯತೆ ಪಡೆದ ಸ್ಟಾರ್ಟಪ್ಗಳ ಸಂಖ್ಯೆ ಹೆಚ್ಚಳ: 2022 ರಲ್ಲಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ)ಯು 2,263 ಸ್ಟಾರ್ಟಪ್ಗಳನ್ನು ಲಿಸ್ಟ್ ಮಾಡಿದ್ದು, ದೇಶದಲ್ಲಿ ಗುಜರಾತ್ ಐದನೇ ಅತಿ ಹೆಚ್ಚು ಸ್ಟಾರ್ಟಪ್ಗಳನ್ನು ಹೊಂದಿದೆ ಎಂದು ಲೋಕಸಭೆಗೆ ನೀಡಿದ ಅಂಕಿ ಅಂಶಗಳು ತಿಳಿಸಿವೆ. ಮಹಾರಾಷ್ಟ್ರ (4,768), ಉತ್ತರ ಪ್ರದೇಶ (2,559), ದೆಹಲಿ (2,558) ಮತ್ತು ಕರ್ನಾಟಕ (2,547) ನಂತರದ ಸ್ಥಾನಗಳಲ್ಲಿವೆ. ಎರಡು ವರ್ಷಗಳಲ್ಲಿ ಮಾನ್ಯತೆ ಪಡೆದ ಸ್ಟಾರ್ಟಪ್ಗಳ ಸಂಖ್ಯೆ ಶೇಕಡಾ 167ರಷ್ಟು ಅಥವಾ ಅದಕ್ಕಿಂತ ಹೆಚ್ಚು ಅಂದರೆ 847 ರಿಂದ 2,263 ಕ್ಕೆ ಹೆಚ್ಚಾಗಿದೆ.
ವರ್ಷವಾರು ಮಾನ್ಯತೆ ಪಡೆದ ಸ್ಟಾರ್ಟಪ್ಗಳ ಸಂಖ್ಯೆ 2018 ರಲ್ಲಿ 395, 2019 ರಲ್ಲಿ 566, 2020ರಲ್ಲಿ 847, 2021 ರಲ್ಲಿ 1,657 ಮತ್ತು 2022 ರಲ್ಲಿ 2,263 ಆಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ಲೋಕಸಭೆಗೆ ಈ ಅಂಕಿಅಂಶಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ವಿಂಡೋಸ್ 10ಗೆ ಮೈಕ್ರೊಸಾಫ್ಟ್ ಸಪೋರ್ಟ್ ಅಂತ್ಯ: ನಿರುಪಯುಕ್ತವಾಗಲಿವೆ 240 ಮಿಲಿಯನ್ ಪಿಸಿಗಳು