ನವದೆಹಲಿ: ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ (IRCTC), ತನ್ನ ಅಪ್ಲಿಕೇಶನ್, ಐಆರ್ಸಿಟಿಸಿ ರೈಲ್ ಕನೆಕ್ಟ್‌ನಲ್ಲಿ ಟ್ರಾವೆಲ್ ನೌ ಪೇ ಲೇಟರ್ (TNPL) ಪಾವತಿ ಆಯ್ಕೆ ನೀಡಿದೆ. ಅಲ್ಲದೇ ಇದಕ್ಕಾಗಿ CASHe ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ರೈಲ್ವೆ ಇಲಾಖೆ ಅಕ್ಟೋಬರ್ 19, 2022 ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಇದರಿಂದಾಗಿ ಭಾರತೀಯ ರೈಲ್ವೆಯನ್ನು ಬಳಸುವ ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ಗಳನ್ನು ತ್ವರಿತವಾಗಿ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಮೂರರಿಂದ ಆರು ತಿಂಗಳವರೆಗೆ ಇರುವ ಕೈಗೆಟುಕುವ ಇಎಂಐಗಳನ್ನು ಬಳಸಿಕೊಂಡು ಪಾವತಿಸಬಹುದಾಗಿದೆ. CASHe ನ TNPL ಪಾವತಿ ಆಯ್ಕೆಯಿಂದಾಗಿ ಭಾರತೀಯ ರೈಲ್ವೆಯಲ್ಲಿ ಲಕ್ಷಾಂತರ ಪ್ರಯಾಣಿಕರು ಐಆರ್ಸಿಟಿಸಿ ಟ್ರಾವೆಲ್ ಅಪ್ಲಿಕೇಶನ್‌ನಲ್ಲಿ ರೈಲು ಟಿಕೆಟ್ ಸುಲಭವಾಗಿ ಖರೀದಿಸಬಹುದಾಗಿದೆ.
ಇಎಂಐ (EMI) ಪಾವತಿ: ಇಎಂಐ ಪಾವತಿ ಆಯ್ಕೆಯು IRCTC ಟ್ರ್ಯಾವೆಲ್ ಅಪ್ಲಿಕೇಶನ್‌ನ ಚೆಕ್‌ಔಟ್ ಪುಟದಲ್ಲಿ ಇರುತ್ತದೆ. ಇದರಲ್ಲಿ ಪ್ರಯಾಣಿಕರು ಕಾಯ್ದಿರಿಸಿದ ಮತ್ತು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. CASHe ನ TNPL EMI ಪಾವತಿ ಆಯ್ಕೆಗೆ ಯಾವುದೇ ದಾಖಲಾತಿಗಳ ಅವಶ್ಯಕತೆ ಇರುವುದಿಲ್ಲ. ಹಾಗಾಗಿ TNPL ಸೌಲಭ್ಯವನ್ನು ಎಲ್ಲ ಬಳಕೆದಾರರು ಪಡೆಯಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಟ್ರಾವೆಲ್ ನೌ ಪೇ ಲೇಟರ್(TNPL) ಎಂದರೇನು?: ಟ್ರಾವೆಲ್ ನೌ ಪೇ ಲೇಟರ್ ಎಂಬುದು 'ಈಗ ಖರೀದಿಸಿ, ನಂತರ ಪಾವತಿಸಿ' ಯೋಜನೆಯ ಆವೃತ್ತಿಯಾಗಿದೆ. ನೀವು ಹೇಗೆ ಒಂದು ವಸ್ತು ಖರೀದಿಸಿ ಅದರ ಮೊತ್ತವನ್ನು EMI ಮೂಲಕ ಪಾವತಿಸುತ್ತೀರೋ, ಹಾಗೆ ಇದಾಗಿದೆ. ಐಆರ್ ಟಿಸಿ ಆ್ಯಪ್ 9 ಕೋಟಿ ಬಾರಿ ಡೌನ್ ಲೋಡ್ ಆಗಿದೆ. ಇದರ ಮೂಲಕ ನಿತ್ಯ 15 ಲಕ್ಷ ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸಲಾಗುತ್ತಿದೆ.
ಇದನ್ನೂ ಓದಿ: ರೈಲ್ವೆ ಸಹಾಯವಾಣಿ ನಂಬರ್ಗೆ ಟಿಕ್ ಮಾರ್ಕ್ ನೀಡಿದ ಟ್ರೂಕಾಲರ್
ಆನ್‌ಲೈನ್ ಟ್ರಾವೆಲ್ ಅಗ್ರಿಗೇಟರ್‌ಗಳು ಅಥವಾ ಇತರ ಪ್ರಯಾಣ ಸಂಸ್ಥೆಗಳು ಬ್ಯಾಂಕ್, ಫಿನ್‌ಟೆಕ್ ಕಂಪನಿಗಳು, ಲೋನ್ ಆ್ಯಪ್‌ಗಳು ಮತ್ತು ಥರ್ಡ್-ಪಾರ್ಟಿ ಸಾಲದಾತರು ಅಥವಾ ಅವರದೇ ಆದ ಫಿನ್‌ಟೆಕ್ ಆರ್ಮ್ಸ್ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಇವು ಸಾಲವನ್ನು ನೀಡುತ್ತವೆ. ಯೋಜನೆಗಾಗಿ ಇವುಗಳ ಬಳಿ ಪ್ರಯಾಣಿಕರು ಸಾಲ ಕೇಳಬಹುದಾಗಿದೆ.
ಕಾಯ್ದಿರಿಸುವಾಗ ನೀವು ಭಾಗಶಃ ಅಥವಾ ಪಾವತಿಸದೇ ಇರಬಹುದು, ನಿರ್ದಿಷ್ಟ ಅವಧಿಯಲ್ಲಿ ಅದನ್ನು ನೀವು ನಂತರ ಕಟ್ಟಬಹುದು. ನೀವು ಯಾವುದೇ ವೆಚ್ಚವಿಲ್ಲದ EMI ಗಳನ್ನು ಪಡೆಯಬಹುದು ಅಥವಾ ನೀವು ತೆಗೆದುಕೊಂಡ ಹಣದ ಆಧಾರದ ಮೇಲೆ ಬಡ್ಡಿಯನ್ನು ಪಾವತಿಸಬೇಕಾಗಬಹುದು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.