ನವದೆಹಲಿ: ಕೇಂದ್ರ ಸರ್ಕಾರವು ತೊಗರಿ ಮತ್ತು ಉದ್ದಿನ ಬೇಳೆಗೆ ನೀಡಲಾಗುವ ಆಮದು ಸುಂಕ ವಿನಾಯಿತಿಯನ್ನು 2025ರ ಮಾರ್ಚ್ 31ರವರೆಗೆ ಮತ್ತೊಂದು ವರ್ಷ ವಿಸ್ತರಿಸಿದೆ. ಈ ಬಗ್ಗೆ ವಿದೇಶಿ ವ್ಯಾಪಾರ ಮಹಾನಿರ್ದೇಶಕರ (ಡಿಜಿಎಫ್ಟಿ) ಕಚೇರಿ ಅಧಿಕೃತ ಆದೇಶ ಹೊರಡಿಸಿದೆ. ಅಕ್ಟೋಬರ್ 2021ರಿಂದ ಜಾರಿಗೆ ಬಂದ ಈ ಸಡಿಲಿಕೆ ಈಗ ಮಾರ್ಚ್ 31, 2025ರವರೆಗೆ ಮುಂದುವರಿಯಲಿದೆ.
ಅಕ್ಟೋಬರ್ನಲ್ಲಿ ಶೇ 6.61ರಷ್ಟಿದ್ದ ಆಹಾರ ಹಣದುಬ್ಬರವು ನವೆಂಬರ್ನಲ್ಲಿ ಶೇ 8.7ಕ್ಕೆ ಏರಿಕೆಯಾಗಿದೆ. ಬೇಳೆಕಾಳುಗಳ ಬೆಲೆಗಳು ನವೆಂಬರ್ನಲ್ಲಿ ಶೇಕಡಾ 20ರಷ್ಟು ಏರಿಕೆಯಾಗಿವೆ. ಇತ್ತೀಚೆಗೆ, ಕೇಂದ್ರವು ಮಸೂರ್ ದಾಲ್ ಮೇಲಿನ ಆಮದು ಸುಂಕ ವಿನಾಯಿತಿಯನ್ನು ಮಾರ್ಚ್ 2025ರವರೆಗೆ ಒಂದು ವರ್ಷ ವಿಸ್ತರಿಸಿತ್ತು.
ಕೇಂದ್ರ ಸರ್ಕಾರದ ಉಚಿತ ಧಾನ್ಯ ವಿತರಣಾ ಕಾರ್ಯಕ್ರಮವಾದ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಕೂಡ ಐದು ವರ್ಷಗಳ ಅವಧಿಗೆ ಅಂದರೆ 2028ರವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯಡಿ, ಬಡ ಕುಟುಂಬಗಳಿಗೆ ಮಾಸಿಕ 5 ಕೆ.ಜಿ ಧಾನ್ಯ ನೀಡಲಾಗುತ್ತದೆ.
ಹವಾಮಾನ ವ್ಯತ್ಯಾಸ ಹಾಗೂ ಮಳೆ ಕೊರತೆಯಿಂದ ದೇಶದಲ್ಲಿ ತೊಗರಿ ಉತ್ಪಾದನೆ ಕುಸಿತವಾಗಿರುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ. ನವೆಂಬರ್ನಲ್ಲಿ ಇದ್ದ ಪ್ರತಿ ಕೆ.ಜಿ ತೊಗರಿಯ ಬೆಲೆ 156.5 ರೂ.ಗಳಿಂದ ಡಿಸೆಂಬರ್ನಲ್ಲಿ ಕೊಂಚ ಇಳಿದು ಪ್ರತಿ ಕೆ.ಜಿ.ಗೆ 154 ರೂ. ಆಗಿದೆ. ದೇಶೀಯ ಉತ್ಪಾದನೆಯಲ್ಲಿನ ಕುಸಿತವನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ತೊಗರಿ ಮತ್ತು ಉದ್ದಿನ ಬೇಳೆಗೆ ಸುಂಕ ರಹಿತ ಆಮದು ನೀತಿಯನ್ನು ಮಾರ್ಚ್ 31, 2024ರವರೆಗೆ ವಿಸ್ತರಿಸಿದೆ. ಈ ಖಾರಿಫ್ ಋತುವಿನಲ್ಲಿ ತೊಗರಿ ಮತ್ತು ಉದ್ದಿನ ಉತ್ಪಾದನೆಯು ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿಯಬಹುದು ಎಂದು ಅಕ್ಟೋಬರ್ನಲ್ಲಿ ಮಾಧ್ಯಮ ವರದಿಗಳು ಹೇಳಿದ್ದವು.
2022-23ರ ಋತುವಿನ 3.31 ಮಿಲಿಯನ್ ಟನ್ಗಳಿಗೆ ಹೋಲಿಸಿದರೆ 2023 ರ ಖಾರಿಫ್ ಋತುವಿನಲ್ಲಿ ತೊಗರಿ ಉತ್ಪಾದನೆಯು ಸುಮಾರು 3.22-3.27 ಮಿಲಿಯನ್ ಟನ್ಗಳಷ್ಟಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 2.7 ರಷ್ಟು ಕುಸಿತವಾಗಿದೆ ಎಂದು ವಿಶ್ಲೇಷಣೆ ತೋರಿಸಿದೆ. ಉದ್ದಿನ ಉತ್ಪಾದನೆಯು ಪ್ರಸಕ್ತ ವರ್ಷ ಸುಮಾರು 1.5-1.6 ಮಿಲಿಯನ್ ಟನ್ ಆಗಿದ್ದು, ಕಳೆದ ವರ್ಷ 1.77 ಮಿಲಿಯನ್ ಟನ್ ಆಗಿತ್ತು.
ಇದನ್ನೂ ಓದಿ: ಹಡಗುಗಳ ಮೇಲಿನ ದಾಳಿ ಇಳಿಕೆ; ಕಚ್ಚಾ ತೈಲ ಬೆಲೆಗಳಲ್ಲಿ ಸ್ಥಿರತೆ