ಹೈದರಾಬಾದ್: ಈಗ ಎಲ್ಲೆಲ್ಲೂ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದ್ದರೂ, ದೊಡ್ಡ ಪ್ರಮಾಣದ ಪಾವತಿಗೆ ಈಗಲೂ ಚೆಕ್ಗಳನ್ನೇ ಬಳಸಲಾಗುತ್ತಿದೆ. ಆದರೆ ಚೆಕ್ ಮೇಲೆ ನಮೂದಿಸಲಾದ ಮೊತ್ತವನ್ನು ಅಥವಾ ಸಹಿಯನ್ನು ತಿದ್ದುವುದು ಹಾಗೂ ಆ ಮೂಲಕ ಫೋರ್ಜರಿ ಮಾಡುವ ಸಮಸ್ಯೆಗಳು ಸವಾಲಾಗಿ ಉಳಿದಿವೆ. ಈಗ ಈ ವಂಚನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಸಿಟಿವ್ ಪೇ ಸಿಸ್ಟಮ್ (ಧನಾತ್ಮಕ ಪಾವತಿ ವ್ಯವಸ್ಥೆ) (Positive Pay System -PPS) ಎಂಬ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಲಾಗಿದೆ. ಇದರಿಂದ ಚೆಕ್ ವ್ಯವಹಾರಗಳು ಮತ್ತಷ್ಟು ಸುರಕ್ಷಿತವಾಗಲಿವೆ.
ಹೊಸ ವ್ಯವಸ್ಥೆಯ ಪ್ರಕಾರ- ಚೆಕ್ ನಲ್ಲಿ ನಮೂದಿಸಲಾದ ಮೊತ್ತ ಹಾಗೂ ಯಾರ ಹೆಸರಿಗೆ ಚೆಕ್ ನೀಡಲಾಗಿದೆ ಎಂಬ ವಿವರಗಳನ್ನು ಮೊದಲೇ ಬ್ಯಾಂಕಿಗೆ ನೀಡಬೇಕಾಗುತ್ತದೆ. ಹೀಗೆ ಚೆಕ್ ಮಾಹಿತಿ ನೀಡದಿದ್ದರೆ ಅಂಥ ಚೆಕ್‌ಗಳನ್ನು ಬ್ಯಾಂಕ್ ಪಾಸ್ ಮಾಡುವುದಿಲ್ಲ.
5 ಲಕ್ಷ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ಚೆಕ್‌ಗಳನ್ನು ಕ್ಲಿಯರ್ ಮಾಡುವ ಮುನ್ನ ಬ್ಯಾಂಕ್ಗಳು ಗ್ರಾಹಕರಿಂದ ಪಾಸಿಟಿವ್ ಪೇ ಸಿಸ್ಟಮ್ ಖಾತರಿಯನ್ನು ಪಡೆದುಕೊಳ್ಳುತ್ತವೆ. ಈ ನಿಯಮಗಳು ಆಗಸ್ಟ್ 1 ರಿಂದಲೇ ಜಾರಿಯಾಗಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ. ಇದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದೆ. ಚೆಕ್ ಪಾವತಿಯಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ಚೆಕ್ ಟ್ಯಾಂಪರಿಂಗ್ ನಿಂದ ವಂಚನೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್ ಬಿಐ ತಿಳಿಸಿದೆ. ಗ್ರಾಹಕರು ಎಲ್ಲಾ ಚೆಕ್‌ಗಳಿಗೆ ಈ ಸೌಲಭ್ಯವನ್ನು ಬಳಸುವ ವಿವೇಚನೆಯನ್ನು ಹೊಂದಿರುತ್ತಾರೆ. ಆದಾಗ್ಯೂ, 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಇದು ಕಡ್ಡಾಯವಾಗಿದೆ.
ಧನಾತ್ಮಕ ಪಾವತಿ ವ್ಯವಸ್ಥೆಯ ದೃಢೀಕರಣದ ಅಡಿಯಲ್ಲಿ, ಗ್ರಾಹಕರು ಚೆಕ್ ಸಂಖ್ಯೆ, ದಿನಾಂಕ, ಸಂಖ್ಯೆಗಳು ಮತ್ತು ಅಕ್ಷರಗಳಲ್ಲಿನ ಮೊತ್ತ, ಚೆಕ್ ಅನ್ನು ತೆಗೆದುಕೊಂಡ ವ್ಯಕ್ತಿಯ ಹೆಸರು ಮತ್ತು ವಹಿವಾಟು ಕೋಡ್ ಅನ್ನು ಬ್ಯಾಂಕ್‌ಗೆ ತಿಳಿಸಬೇಕು. ವಿವರಗಳನ್ನು SMS, ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್, ATM ಮೂಲಕ ಅಥವಾ ಸಂಬಂಧಪಟ್ಟ ಬ್ಯಾಂಕ್ ಶಾಖೆ ಅಥವಾ ಸೇವಾ ಕೇಂದ್ರದಲ್ಲಿ (ಕೆಲಸದ ಸಮಯದಲ್ಲಿ) ನಮೂದಿಸಬಹುದು.
ಚೆಕ್ ಕ್ಲಿಯರೆನ್ಸ್ಗೆ ಬಂದಾಗ ಬ್ಯಾಂಕ್ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತದೆ ಮತ್ತು ಯಾವುದೇ ವ್ಯತ್ಯಾಸವಿದ್ದರೆ ಪಾವತಿಯನ್ನು ತಡೆ ಹಿಡಿಯುತ್ತದೆ. ಒಮ್ಮೆ ವಿವರಗಳನ್ನು ನೋಂದಾಯಿಸಿದ ನಂತರ ಅವುಗಳನ್ನು ಬದಲಾಯಿಸಲಾಗುವುದಿಲ್ಲ. ಆದರೆ ಖಾತೆದಾರನಿಗೆ ಚೆಕ್ ಪಾವತಿಯನ್ನು ನಿಲ್ಲಿಸುವ ಹಕ್ಕಿದೆ. ಚೆಕ್‌ಗಳನ್ನು ನೀಡುವ ಗ್ರಾಹಕರು ಚೆಕ್ ಕ್ಲಿಯರೆನ್ಸ್ಗೆ ಬರುವ ಮುನ್ನ ತಮ್ಮ ಖಾತೆಯಲ್ಲಿ ಸಾಕಷ್ಟು ಹಣವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಓದಿ: ಚೆಕ್ ಬೌನ್ಸ್ ಕೇಸ್ನಲ್ಲಿ ಮಧ್ಯಂತರ ಪರಿಹಾರ ಪಾವತಿ ಕಡ್ಡಾಯವಲ್ಲ: ಹೈಕೋರ್ಟ್