ಹೈದರಾಬಾದ್: ಕಡಿಮೆ ಬಂಡವಾಳ, ಅಧಿಕ ಲಾಭದ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಮಾರ್ಕೆಟ್ ಬಾಕ್ಸ್ ಆ್ಯಪ್ ಪ್ರಕರಣಕ್ಕೆ ಹೈದರಾಬಾದ್ ನಂಟಿರುವುದು ತಿಳಿದುಬಂದಿದೆ. ಆ್ಯಪ್ ರೂಪಿಸಿ ಕೊಟ್ಟ ವ್ಯಕ್ತಿ ಹೈದರಾಬಾದ್ ಮೂಲದವ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ವಿಪರ್ಯಾಸವೆಂದರೆ ಆ್ಯಪ್‌ನಲ್ಲಿ ಹೂಡಿಕೆ ಮಾಡಿ ಮೋಸ ಹೋದ ವ್ಯಕ್ತಿಯೂ ಹೈದರಾಬಾದ್ಗೆ ಸೇರಿದವರು.
ಆ್ಯಪ್ ರೂಪಿಸಿ ನಿರ್ವಹಣೆ ಮಾಡುತ್ತಿದ್ದ ಮಾಲೀಕ ಉತ್ತರಪ್ರದೇಶ ಮೂಲದ ಅಭಿಷೇಕ್ ಜೈನ್ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಕಡಿಮೆ ಬಂಡವಾಳ ಹೂಡಿದರೆ ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಸಾವಿರಾರು ಜನರನ್ನು ವಂಚಿಸಿರುವುದು ತನಿಖೆಯಲ್ಲಿ ಬಯಲಾಗಿದೆ.
ಉತ್ತರಪ್ರದೇಶದ ಅಭಿಷೇಕ್ ಜೈನ್ ಸೂಚನೆಯಂತೆ ಹೈದರಾಬಾದ್ನ ಭನ್ವರ್ಲಾಲ್ ಎಂಬಾತ ಆ್ಯಪ್ ರೂಪಿಸಿಕೊಟ್ಟಿದ್ದಾನೆ. ಭನ್ವರ್ಲಾಲ್ ಕೆಲ ವರ್ಷಗಳ ಹಿಂದೆ ಹೈದರಾಬಾದ್ಗೆ ಬಂದು ನೆಲೆಸಿ ಇಲ್ಲಿಯೇ ಉಳಿದುಕೊಂಡಿದ್ದಾರೆ. ವ್ಯವಹಾರದ ಕಾರಣಕ್ಕಾಗಿ ಆ್ಯಪ್ ರೂಪಿಸಿಕೊಟ್ಟಿದ್ದು, ವಂಚನೆ ನಡೆಸುವ ಬಗ್ಗೆ ಈತನಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಾಂತ್ರಿಕವಾಗಿ ಸಹಕರಿಸಿರುವ ಭನ್ವರ್ಲಾಲ್ ಈ ಪ್ರಕರಣದಲ್ಲಿ ಹೊಂದಿರುವ ಪಾತ್ರದ ಬಗ್ಗೆ ಇನ್ನಷ್ಟು ತನಿಖೆ ನಡೆಸುತ್ತಿರುವ ಸೈಬರಾಬಾದ್ ಸೈಬರ್ಕ್ರೈಮ್ ಪೊಲೀಸರು, ಆರೋಪ ಸಾಬೀತಾದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸುವ ಸಾಧ್ಯತೆ ಇದೆ. ಮಾರ್ಕೆಟ್ ಬಾಕ್ಸ್ ಮಾದರಿಯಲ್ಲಿ ಬೇರೆ ಆ್ಯಪ್ಗಳು, ವೆಬ್ಸೈಟ್ಗಳು ಚಾಲ್ತಿಯಲ್ಲಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?: ಉತ್ತರ ಪ್ರದೇಶದ ಮೊಗಲ್ಸರಾಯ್‌ನ ಅಭಿಷೇಕ್ ಜೈನ್ ಎಂಬುವರು ಮಾರ್ಕೆಟ್ ಬಾಕ್ಸ್ ಆ್ಯಪ್ ಮತ್ತು ವೆಬ್‌ಸೈಟ್ ಅನ್ನು ಆರಂಭಿಸಿದ್ದರು. ಇದರಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ನೀಡಲಾಗುತ್ತದೆ ಎಂದು ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಹೀರಾತು ನೀಡಿ ಪ್ರಚಾರ ಮಾಡಿದ್ದರು.
ಅದರಂತೆ ಹೈದರಾಬಾದ್ನ ವ್ಯಕ್ತಿಯೊಬ್ಬರು 10 ಲಕ್ಷ ರೂ.ಗಳನ್ನು ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದರು. ಬಳಿಕ 14.9 ಲಕ್ಷ ರೂಪಾಯಿ ವಾಪಸ್ ಪಡೆದಿದ್ದರು. ನಂತರ ಅವರು ಟ್ರೇಡಿಂಗ್ ಮೂಲಕ 62.6 ಲಕ್ಷ ರೂಪಾಯಿ ಮರು ಹೂಡಿಕೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಆ್ಯಪ್ 34.7 ಲಕ್ಷ ರೂಪಾಯಿ ಮಾತ್ರ ವಾಪಸ್ ನೀಡಿತ್ತು.
ಆ್ಯಪ್ನಿಂದ ತನಗೆ 27.9 ಲಕ್ಷ ರೂಪಾಯಿ ಮೋಸ ಹೋಗಿದ್ದಾಗಿ ಕಳೆದ ವರ್ಷ ಸೈಬರಾಬಾದ್‌ನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿದ ಪೊಲೀಸರು ಮೊಗಲ್ಸ್ರಾಯ್ಗೆ ತೆರಳಿ ಅಭಿಷೇಕ್ ಜೈನ್ ಸೇರಿದಂತೆ ಮೂವರನ್ನು ಆಗಸ್ಟ್ನಲ್ಲಿ ಬಂಧಿಸಿದ್ದರು. ಆ್ಯಪ್‌ನಲ್ಲಿ ದೇಶದ ವಿವಿಧ ರಾಜ್ಯಗಳ 3 ಸಾವಿರಕ್ಕೂ ಅಧಿಕ ಮಂದಿ ನೋಂದಣಿಯಾಗಿ ಹೂಡಿಕೆ ಮಾಡಿದ್ದು, ಸುಮಾರು 9.81 ಕೋಟಿ ರೂಪಾಯಿ ವಂಚನೆ ಮಾಡಿದ್ದು ತನಿಖೆಯಲ್ಲಿ ಪತ್ತೆಯಾಗಿದೆ.
ಓದಿ: ಬೀಟ್ನಲ್ಲಿದ್ದ ಪೊಲೀಸರಿಗೆ ಸಿಕ್ಕಿ ಬಿದ್ದ ಹುಡುಗ - ಹುಡುಗಿ... ಬಾಲಕಿ ಪೋಷಕರಿಂದ ಅತ್ಯಾಚಾರ ಆರೋಪ