ಹೈದರಾಬಾದ್: ಹಣಕಾಸು ನಿರ್ವಹಣೆಯ ವಿಚಾರದಲ್ಲಿ ವ್ಯಕ್ತಿಯೊಬ್ಬ ಎಷ್ಟು ಶಿಸ್ತುಬದ್ಧನಾಗಿದ್ದಾನೆ ಎಂಬುದನ್ನು ಆತನ ಕ್ರೆಡಿಟ್ ಸ್ಕೋರ್ ಸೂಚಿಸುತ್ತದೆ. ಅಗತ್ಯವಿದ್ದಾಗ ತಕ್ಷಣಕ್ಕೆ ಸಾಲ ಪಡೆಯಲು ಈ ಸ್ಕೋರ್ ನಿಮಗೆ ಸಹಾಯ ಮಾಡುತ್ತದೆ. ಆದರೆ, ಕೆಲವೊಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್ ಇಳಿಕೆಯಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಹೀಗೆ ಏಕಾಗುತ್ತದೆ? ಹೀಗಾದಾಗ ನಾವು ಏನು ಮಾಡಬಹುದು? ಕ್ರೆಡಿಟ್ ಸ್ಕೋರ್ ಇಳಿದಾಗ ಏನು ಮಾಡಬೇಕೆಂಬುದನ್ನು ತಿಳಿಯಲು ಮುಂದೆ ಓದಿ.
ನಿಮ್ಮ ಖಾತೆಗೆ ನಿಮಗೆ ತಿಳಿಯದಂತೆಯೇ ಯಾವುದಾದರೂ ಹೊಸ ಸಾಲ ಸೇರಿಸಲ್ಪಟ್ಟಿದೆಯೇ ಚೆಕ್ ಮಾಡಿ. ಲೋನ್ ಇಎಂಐಗಳು ತಡವಾಗುವುದನ್ನು ತಪ್ಪಿಸಿ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪೂರ್ಣವಾಗಿ ಪಾವತಿ ಮಾಡಿ. ಯಾವುದೋ ಒಂದೆರಡು ಕಾರಣಗಳಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಿರಬಹುದು. ಕ್ರೆಡಿಟ್ ರಿಪೋರ್ಟ್ ಅನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿದರೆ ಎಲ್ಲವೂ ತಿಳಿಯುತ್ತದೆ. ಎಲ್ಲಿ ತಪ್ಪಾಗುತ್ತಿದೆ ಎಂಬುದನ್ನು ತಿಳಿದು ಅವನ್ನು ಸರಿಮಾಡಿದರೆ ಕ್ರೆಡಿಟ್ ಸ್ಕೋರ್ ಇಳಿಕೆಯಾಗುವುದನ್ನು ನಿಲ್ಲಿಸಬಹುದು.
ಕಂತುಗಳ ವಿಳಂಬ ಪಾವತಿ: ಸಾಮಾನ್ಯವಾಗಿ ಇಎಂಐಗಳ ವಿಳಂಬ ಪಾವತಿ ಅಥವಾ ದೀರ್ಘಕಾಲದವರೆಗೆ ಅವುಗಳನ್ನು ನಿರ್ಲಕ್ಷಿಸಿದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಯಾವಾಗಲೋ ಒಮ್ಮೆ ಇಎಂಐ ಸಕಾಲದಲ್ಲಿ ಪಾವತಿಸದಿದ್ದರೆ ಮತ್ತೆ ನಿಯಮಿತವಾಗಿ ಪಾವತಿಸಿ ಸ್ಕೋರ್ ಸರಿಪಡಿಸಬಹುದು. ಆದರೆ, ಯಾವಾಗಲೂ ತಡ ಮಾಡುತ್ತಿದ್ದರೆ ಸ್ಕೋರ್ ಹೆಚ್ಚಿಸುವುದು ಅಸಾಧ್ಯ. ಈ ಬಗ್ಗೆ ಗಮನ ಹರಿಸದಿದ್ದರೆ ಭವಿಷ್ಯದಲ್ಲಿ ಸಮಸ್ಯೆಗಳು ಎದುರಾಗಬಹುದು.
ಕ್ರೆಡಿಟ್ ಕಾರ್ಡ್ ಮಿತಿಯಲ್ಲಿ ಬಳಸಿ: ಕ್ರೆಡಿಟ್ ಕಾರ್ಡ್‌ಗಳನ್ನು ಯಾವಾಗಲೂ ಮಿತಿಯಲ್ಲಿ ಬಳಸಬೇಕು. ನೀವು ಕಾರ್ಡ್ ಮಿತಿಯ ಶೇಕಡಾ 30 ಕ್ಕಿಂತ ಹೆಚ್ಚು ಬಳಸಿದ್ದರೆ ನೀವು ಸಾಲವನ್ನು ಅವಲಂಬಿಸಿರುವಿರಿ ಎಂದು ಬ್ಯಾಂಕ್‌ಗಳು ಅರ್ಥಮಾಡಿಕೊಳ್ಳುತ್ತವೆ. ಆದ್ದರಿಂದ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯ ಶೇಕಡಾ 30 ಕ್ಕಿಂತ ಹೆಚ್ಚು ಬಳಸಬೇಡಿ. ಶೇ 90 ರಷ್ಟು ಬಳಸಿದರೆ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಅತಿಯಾದ ಕ್ರೆಡಿಟ್ ಕಾರ್ಡ್ ಬಳಕೆಯಿಂದಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದೆ ಎಂದು ನೀವು ಭಾವಿಸಿದರೆ, ತಕ್ಷಣವೇ ಕಾರ್ಡ್ ಬಳಕೆಯ ಅನುಪಾತವನ್ನು ಶೇಕಡಾ 30 ಕ್ಕಿಂತ ಕಡಿಮೆ ಮಾಡಿಕೊಳ್ಳಿ. ಇದರಿಂದ ಕ್ರಮೇಣ ಸ್ಕೋರ್ ಸುಧಾರಿಸುತ್ತದೆ.
ಬಹಳಷ್ಟು ಸಾಲದ ಬದಲಿಗೆ ಒಂದೇ ಸಾಲ ತೆಗೆದುಕೊಳ್ಳಿ: ಸಾಲಗಳ ಸಂಖ್ಯೆ ಹೆಚ್ಚಿದ್ದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ನೀವು ಹಲವಾರು ಬ್ಯಾಂಕ್ಗಳಿಂದ ಚಿಕ್ಕ ಚಿಕ್ಕ ಅನೇಕ ಸಾಲಗಳನ್ನು ಪಡೆದರೆ ಸ್ಕೋರ್ ಕಡಿಮೆಯಾಗುವುದು ನಿಶ್ಚಿತ. ಅಲ್ಲದೆ ಬ್ಯಾಂಕ್, ಆ್ಯಪ್ಗಳು ಮತ್ತು ಎನ್ಬಿಎಫ್ಸಿಗಳ ಬಳಿ ಸಾಲಕ್ಕಾಗಿ ಪದೇ ಪದೆ ವಿಚಾರಣೆ ಮಾಡುವುದು ತಪ್ಪು. ಹೀಗೆ ಸಾಲಕ್ಕಾಗಿ ಪದೇ ಪದೆ ವಿಚಾರಿಸಿ, ನೀವು ಸಾಲ ಪಡೆಯದಿದ್ದರೂ ಅದೆಲ್ಲವೂ ರಿಪೋರ್ಟ್ನಲ್ಲಿ ದಾಖಲಾಗಿರುತ್ತದೆ. ಇದರಿಂದಲೂ ನಿಮಗೆ ಸಾಲ ಸಿಗುವುದು ದುಸ್ತರವಾಗಬಹುದು.
ಸೈಬರ್ ವಂಚನೆಗಳಿಂದ ಎಚ್ಚರವಾಗಿರಿ: ಹಲವಾರು ವರ್ಷಗಳಿಂದ ಬಳಕೆಯಲ್ಲಿರುವ ಕ್ರೆಡಿಟ್ ಕಾರ್ಡ್ ಅನ್ನು ರದ್ದುಗೊಳಿಸುವುದು ಸ್ಕೋರ್ ಮೇಲೆ ತಾತ್ಕಾಲಿಕವಾಗಿ ಪರಿಣಾಮ ಬೀರುತ್ತದೆ. ಇದು ನಿಮ್ಮ ಕಡಿಮೆ ಕ್ರೆಡಿಟ್ ಅರ್ಹತೆ ಮತ್ತು ನಿಮ್ಮ ಕ್ರೆಡಿಟ್ ಇತಿಹಾಸದಲ್ಲಿ ಹಳೆಯ ಕಾರ್ಡ್ ವಿವರಗಳ ಕೊರತೆಯಿಂದಾಗಿರಬಹುದು. ಆದ್ದರಿಂದ, ನಿಮ್ಮ ಮೊದಲ ಕ್ರೆಡಿಟ್ ಕಾರ್ಡ್ ಅನ್ನು ರದ್ದುಗೊಳಿಸಬೇಡಿ. ಏತನ್ಮಧ್ಯೆ, ಸೈಬರ್ ವಂಚಕರು ಪ್ಯಾನ್ ಮತ್ತು ಆಧಾರ್ ಕಾರ್ಡ್ ಬಳಸಿ ಸಾಲ ಪಡೆಯುತ್ತಿದ್ದಾರೆ.
ಆದ್ದರಿಂದ, ಅಂತಹ ಯಾವುದೇ ವಂಚನೆ ನಡೆದಿದೆಯೇ ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ನಿಮ್ಮ ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸಿ. ನಿಮಗೆ ಸಂಬಂಧವಿಲ್ಲದ ಸಾಲಗಳು ನಿಮ್ಮ ರಿಪೋರ್ಟ್ನಲ್ಲಿ ಕಾಣಿಸಿದರೆ ತಕ್ಷಣ ಅವುಗಳನ್ನು ಬ್ಯಾಂಕ್/ಸಾಲ ಸಂಸ್ಥೆಗಳ ಗಮನಕ್ಕೆ ತರಬೇಕು. ನಂತರ ಕ್ರೆಡಿಟ್ ಬ್ಯೂರೋಗಳು ಅವುಗಳನ್ನು ಸರಿಪಡಿಸುತ್ತವೆ. ಹೀಗೆ ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಸುಧಾರಿಸಬಹುದು.
ಇದನ್ನು ಓದಿ: ಪುಸ್ತಕ ಓದಿ ಅರ್ಥಶಾಸ್ತ್ರ ಹೇಳಬೇಡಿ, ವಾಸ್ತವ ನೋಡಿ ಅರ್ಥಶಾಸ್ತ್ರ ತಿಳಿದುಕೊಳ್ಳಿ: ಅಮಿತ್ ಶಾ