ಮುಂಬೈ: ಸಾಲದ ಸುಳಿಗೆ ಸಿಲುಕಿರುವ ಅನಿಲ್ ಅಂಬಾನಿ ಒಡೆತನದ ಕಂಪನಿ ರಿಲಯನ್ಸ್ ಕ್ಯಾಪಿಟಲ್ ಖರೀದಿಗೆ ಎರಡನೇ ಸುತ್ತಿನ ಹರಾಜು ಪ್ರಕ್ರಿಯೆ ನಡೆದಿದೆ. ಇದನ್ನು ಖರೀದಿಸಲು ಹಲವು ಕಂಪನಿಗಳು ಬಿಡ್‌ದಾರರ ರೇಸ್‌ನಲ್ಲಿದ್ದವು. ಆದರೆ, ಹಿಂದೂಜಾ ಗ್ರೂಪ್ ಕಂಪನಿಯಾಗಿರುವ ಇಂಡಸ್‌ಇಂಡ್ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್ (ಐಐಎಚ್‌ಎಲ್) ಮಾತ್ರ ಬಿಡ್ ಮಾಡಿದೆ ಎಂದು ವರದಿಯೊಂದು ಹೇಳಿದೆ. ಕಂಪನಿಯು ರಿಲಯನ್ಸ್‌ಗೆ 9,650 ಕೋಟಿ ರೂಪಾಯಿಗಳ ಮುಂಗಡ ಹಣ ನೀಡುವ ಆಫರ್ ನೀಡಿದೆ ಎನ್ನಲಾಗಿದೆ. ಇನ್ನೆರಡು ಬಿಡ್ಡರ್ಗಳಾದ ಟೊರೆಂಟ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಓಕ್ ಟ್ರೀ ಎರಡನೇ ಸುತ್ತಿನ ಹರಾಜಿನಲ್ಲಿ ಭಾಗವಹಿಸಲಿಲ್ಲ. ಹರಾಜಿನಲ್ಲಿ ಭಾಗವಹಿಸುವುದಾಗಿ ಇವೆರಡೂ ಕಂಪನಿಗಳು ಈ ಹಿಂದೆಯೇ ಹೇಳಿದ್ದವು.
ರಿಲಯನ್ಸ್ ಕ್ಯಾಪಿಟಲ್ಗಾಗಿ ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಮೊದಲ ಹಂತದ ಬಿಡ್ಡಿಂಗ್ನಲ್ಲಿ ಟಾರೆಂಟ್ ಟೆಕ್ನಾಲಜಿಯು 8,640 ಕೋಟಿ ರೂಪಾಯಿಯ ಬಿಡ್ ಮಾಡಿತ್ತು. ಐಐಎಚ್‌ಎಲ್ ಕಂಪನಿಯು ಇದಕ್ಕೂ ಹೆಚ್ಚು ಅಂದರೆ 9650 ಕೋಟಿ ರೂಪಾಯಿ ಬಿಡ್ ಮಾಡಿತ್ತು. ಮಾಧ್ಯಮ ವರದಿಗಳ ಪ್ರಕಾರ, ಸಾಲಗಾರರ ಸಮಿತಿಯು (CoC) ಮೊದಲ ಸುತ್ತಿಗೆ 9500 ಕೋಟಿ ರೂಪಾಯಿ ಮತ್ತು ಎರಡನೇ ಸುತ್ತಿಗೆ 10000 ಕೋಟಿ ರೂಪಾಯಿಗಳ ಕನಿಷ್ಠ ಬಿಡ್ ಮೊತ್ತವನ್ನು ನಿಗದಿಪಡಿಸಿದೆ. CoC ಮತ್ತೊಂದು ಷರತ್ತನ್ನು ಹಾಕಿದೆ. ಅದರ ಪ್ರಕಾರ ಎಲ್ಲಾ ಬಿಡ್‌ಗಳಲ್ಲಿ ಕನಿಷ್ಠ 8000 ಕೋಟಿ ರೂಪಾಯಿಗಳ ಮುಂಗಡ ನಗದು ಪಾವತಿ ಮಾಡುವುದು ಅಗತ್ಯವಾಗಿದೆ. ಆದರೆ ಐಐಎಚ್‌ಎಲ್ ಸಂಪೂರ್ಣ ಬಿಡ್ ಮೊತ್ತವಾದ 9650 ಕೋಟಿ ರೂಪಾಯಿಗಳನ್ನು ಮುಂಗಡ ಪಾವತಿ ಮಾಡಿದೆ.
ಹಿಂದೂಜಾ ಗ್ರೂಪ್ ಹಿನ್ನೆಲೆ: ಹಿಂದೂಜಾ ಗ್ರೂಪ್ ಅನ್ನು ಉದ್ಯಮಿ ಪರ್ಮಾನಂದ್ ದೀಪ್‌ಚಂದ್ ಹಿಂದುಜಾ ಅವರು ಪ್ರಾರಂಭಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಕಂಪನಿಯನ್ನು ಸ್ಥಾಪಿಸಲಾಯಿತು. ಹಿಂದೂಜಾ ಗ್ರೂಪ್ ಪ್ರಾಥಮಿಕವಾಗಿ ಮರ್ಚೆಂಟ್ ಬ್ಯಾಂಕಿಂಗ್ ಮತ್ತು ವ್ಯಾಪಾರ ಉದ್ಯಮವಾಗಿ ಪ್ರಾರಂಭವಾಯಿತು. ಆದರೆ, ನಂತರ ವಿಶ್ವದ ಎಲ್ಲಾ ಖಂಡಗಳಲ್ಲಿ ಹರಡಿ ಬಹುರಾಷ್ಟ್ರೀಯ ಸಂಘಟಿತ ಕಂಪನಿಗಳಲ್ಲಿ ಒಂದಾಗಿ ಬೆಳೆದಿದೆ. 1914 ರಲ್ಲಿ ಬಾಂಬೆಯಲ್ಲಿ ಸ್ಥಾಪನೆಯಾದ ಹಿಂದೂಜಾ ಕಂಪನಿಯು 1919 ರಲ್ಲಿ ಇರಾಕ್‌ನಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಸ್ಥಾಪಿಸಿತು. ವರ್ಷಗಳ ಕಾಲ ಇರಾಕ್‌ನಿಂದ ಕೆಲಸ ಮಾಡಿದ ನಂತರ, ಹಿಂದೂಜಾ ಸಹೋದರರು ರಫ್ತು ವ್ಯವಹಾರವನ್ನು ಅಭಿವೃದ್ಧಿಪಡಿಸಲು 1979 ರಲ್ಲಿ ಲಂಡನ್‌ನಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿದರು. ಇಲ್ಲಿಂದ ಕಂಪನಿಯ ವ್ಯವಹಾರಗಳು ಪ್ರಪಂಚದಾದ್ಯಂತ ಹರಡಲಾರಂಭಿಸಿದವು.
ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಇದು ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್‌ನಿಂದ ಸ್ಥಾಪಿಸಲ್ಪಟ್ಟ ಭಾರತೀಯ ವೈವಿಧ್ಯಮಯ ಹಣಕಾಸು ಸೇವೆಗಳ ಕಂಪನಿಯಾಗಿದೆ. ರಿಲಯನ್ಸ್ ಕ್ಯಾಪಿಟಲ್, ನಿಫ್ಟಿ ಮಿಡ್‌ಕ್ಯಾಪ್ 50 ಮತ್ತು MSCI ಗ್ಲೋಬಲ್ ಸ್ಮಾಲ್ ಕ್ಯಾಪ್ ಇಂಡೆಕ್ಸ್‌ನ ಒಂದು ಭಾಗವಾಗಿದೆ. ಇದು ರಿಲಯನ್ಸ್ ಗ್ರೂಪ್‌ನ ಒಂದು ಭಾಗವಾಗಿದೆ. ಇದು ಖಾಸಗಿ ವಲಯದಲ್ಲಿ ಭಾರತದ ಪ್ರಮುಖ ಹಣಕಾಸು ಸೇವೆಗಳ ಕಂಪನಿಗಳಲ್ಲಿ ಒಂದಾಗಿದೆ.
ಇದನ್ನೂ ಓದಿ : ನಾಸ್ಕಾಮ್ ಚೇರಮನ್ರಾಗಿ ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಅನಂತ್ ಮಹೇಶ್ವರಿ ನೇಮಕ