ಹೈದರಾಬಾದ್: ದಶಕಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ ನಂತರ ನಿವೃತ್ತಿಯಾಗುವ ಜನರ ಮನಸ್ಸಿನಲ್ಲಿ ಉಳಿತಾಯದ ಪ್ರಶ್ನೆಗಳು ಉಳಿದುಕೊಂಡಿರುತ್ತವೆ. ತಾವು ನಿವೃತ್ತಿಯಾದ ಬಳಿಕ ಮುಂದಿನ ಜೀವನ, ಮಕ್ಕಳ ಶಿಕ್ಷಣ, ಹೂಡಿಕೆ ಮಾಡುವುದು ಹೇಗೆ, ಯಾವ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ನನ್ನ ಉತ್ತರಾಧಿಕಾರಿಗಳ ಜೀವನಕ್ಕಾಗಿ ಹಣ ಕೂಡಿಡುವುದು ಹೇಗೆ ಎಂಬೆಲ್ಲಾ ಯೋಚನೆಗಳು ಸುಳಿದಾಡುತ್ತವೆ.
ನಿಮ್ಮ ಹಣಕಾಸಿನ ಮೌಲ್ಯವನ್ನು ಲೆಕ್ಕ ಹಾಕಿ: ಕಷ್ಟವಾದರೂ ಸರಿಯೇ, ನಿಮ್ಮ ಹಣದ ಮೌಲ್ಯವನ್ನು ನೀವು ಲೆಕ್ಕ ಹಾಕಲೇಬೇಕು. ಅದಕ್ಕಾಗಿ ನೀವು ಗಳಿಸಿದ ಪ್ರತಿ ರೂಪಾಯಿಯನ್ನು ಲೆಕ್ಕ ಹಾಕಬೇಕು. ನೀವು ಹೂಡಿಕೆ ಮಾಡಿದ ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಜೀವ ವಿಮಾ ಪಾಲಿಸಿಗಳು, ರಿಯಲ್ ಎಸ್ಟೇಟ್, ಠೇವಣಿ ಮತ್ತು ಕೈಯಲ್ಲಿರುವ ನಗದು ಮುಂತಾದ ಹಣಕಾಸಿನ ವಿವರಗಳನ್ನು ಬರೆದು ಲೆಕ್ಕ ಹಾಕಿಕೊಳ್ಳಬೇಕು.
ಇದಲ್ಲದೇ, ನೀವು ಪೂರೈಸಬೇಕಾದ ಜವಾಬ್ದಾರಿಗಳನ್ನು ನೆನಪಿಟ್ಟುಕೊಳ್ಳಿ. ನಿಮಗೆ ಬರುವ ಪಿಂಚಣಿ, ಮನೆ ಬಾಡಿಗೆ ಮತ್ತು ದೀರ್ಘಕಾಲದ ಯೋಜನೆಗಳಂತಹ ನಿಯಮಿತ ಆದಾಯವನ್ನು ಲೆಕ್ಕ ಹಾಕಿ. ಈ ಎಲ್ಲಾ ಗಳಿಕೆಗಳನ್ನು ನೀವು ಸಂಯೋಜಿಸಿದಾಗ, ನಿವ್ವಳ ಆರ್ಥಿಕ ಮೌಲ್ಯವನ್ನು ನೀವು ಗೊತ್ತು ಮಾಡಿಕೊಳ್ಳಬಹುದು. ಈ ವೇಳೆ ನಿಮಗೆ ಬರುವ ಆದಾಯವು ಹೆಚ್ಚಿದ್ದು, ಖರ್ಚು ಕಡಿಮೆಯಾಗಿದ್ದರೆ ಶಾಂತಿಯುತ, ನೆಮ್ಮದಿಯ ನಿವೃತ್ತಿಯ ಜೀವನವನ್ನು ಕಳೆಯಬಹುದಾಗಿದೆ.
ಹೂಡಿಕೆಯಲ್ಲಿ ಆತುರ ಬೇಡ: ಅನೇಕ ಜನರು ತಮ್ಮ ಎಲ್ಲಾ ನಿವೃತ್ತಿ ಪ್ರಯೋಜನಗಳನ್ನು ಉಳಿತಾಯ ಯೋಜನೆಗೆ ತಳುಕು ಹಾಕುತ್ತಾರೆ. ಇದು ಉತ್ತಮ ಅಭ್ಯಾಸವಲ್ಲ. ಮೊದಲಿಗೆ ನೀವು 15 ರಿಂದ 20 ವರ್ಷಗಳವರೆಗೆ ನಿಮ್ಮ ಅವಶ್ಯಕತೆಗಳನ್ನು ಅಂದಾಜು ಮಾಡಬೇಕು. ಅದಕ್ಕೆ ಅನುಗುಣವಾಗಿ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿಯ ಹೂಡಿಕೆಗಳನ್ನು ಯೋಜಿಸಬೇಕು. 15 ವರ್ಷಗಳ ನಂತರದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ದೀರ್ಘಾವಧಿಯ ಈಕ್ವಿಟಿ ಅಥವಾ ಹೈಬ್ರಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಮಾಡಿದ ಹೂಡಿಕೆಗಳು ಉತ್ತಮ ಆದಾಯವನ್ನು ದೊರಕಿಡಿಕೊಡುತ್ತವೆ ಎಂಬುದನ್ನು ಮರೆಯಬಾರದು.
ದೀರ್ಘಾವಧಿಯ ಲಾಭವನ್ನು ಪಡೆಯಲು ನಿಮ್ಮ ಆದಾಯದ ಮೊತ್ತದಲ್ಲಿ 25% ಅನ್ನು ನೀವು ಇದಕ್ಕಾಗಿ ಮೀಸಲಿಡಲು ಪ್ರಯತ್ನಿಸಬಹುದು. ನಿಮ್ಮ ಎಲ್ಲಾ ಹಣವನ್ನು ನೀರಲ್ಲಿ ಹೋಮ ಮಾಡಿದಂತೆ ನಷ್ಟ ಉಂಟು ಮಾಡುವ ಷೇರುಗಳ ತ್ವರಿತ ಖರೀದಿ ಮತ್ತು ಮಾರಾಟದಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ದೀರ್ಘಾವಧಿಗೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಉತ್ತಮವಾದ ಆಯ್ಕೆಯಾಗಿದೆ.
ಪರಿಪೂರ್ಣ ಯೋಜನೆ ರೂಪಿಸಿ: ಹಣದುಬ್ಬರ ಗಗನಕ್ಕೇರುತ್ತಿದೆ. ಆದ್ದರಿಂದ ನಿಮ್ಮ ಖರ್ಚುಗಳನ್ನು ಪೂರೈಸಲು ಆದಾಯದ ಹರಿವನ್ನು ಉತ್ತಮವಾಗಿ ನಿರ್ವಹಿಸಬೇಕಿದೆ. ವೃಥಾ ಖರ್ಚು ಮಾಡುವುದಕ್ಕೆ ಈಗಲೇ ಕಡಿವಾಣ ಹಾಕಿ. ಈಗಿನ ನಿಮ್ಮ ಅಗತ್ಯಗಳು ಮುಖ್ಯವಾಗಿದ್ದರೂ, ಕೆಲವು ವಾರ್ಷಿಕ ವೆಚ್ಚಗಳಿಗೆ ಯೋಜನೆ ರೂಪಿಸಿಕೊಳ್ಳಲೇಬೇಕು. ಉದಾಹರಣೆಗೆ, ವರ್ಷಾಂತ್ಯದ ರಜಾದಿನಗಳು, ಇತರ ಮೋಜಿನ ಚಟುವಟಿಕೆಗಳು ಮತ್ತು ಮಕ್ಕಳಿಗೆ ಉಡುಗೊರೆಗಳು ನೀಡುವುದಕ್ಕೆ ಈಗನ ಸಣ್ಣಪುಟ್ಟ ಖರ್ಚುಗಳನ್ನು ಮೊಟಕುಗೊಳಸಬೇಕು.
ಆರೋಗ್ಯ ವಿಮೆ ಮಾಡಿಸಬೇಕು: ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸಲು, ಆರೋಗ್ಯ ವಿಮೆಯ ಆಯ್ಕೆಯು ಉತ್ತಮ ಮತ್ತು ಅಗತ್ಯವಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಆರೋಗ್ಯ ವಿಮಾ ಪಾಲಿಸಿ ಸ್ವಲ್ಪ ದುಬಾರಿಯಾಗಿದೆ. ಕಾಯಿಲೆಗಳಿದ್ದರೂ ಸಹ ಕೆಲ ಪಾಲಿಸಿಗಳು ಲಭ್ಯವಿವೆ. ಇದು ಆಯಾ ವಿಮಾ ಕಂಪನಿಯ ವಿವೇಚನೆ ಬಿಟ್ಟಿದ್ದಾಗಿದೆ.
ಅಲ್ಲದೇ, ನೀವೀಗಾಗಲೇ ಪಾಲಿಸಿಯನ್ನು ಹೊಂದಿದ್ದರೆ ಪ್ರೀಮಿಯಂಗಳನ್ನು ಪಾವತಿಸುವುದನ್ನು ಮುಂದುವರಿಸಿ. ನೀವು ಏನೇ ಪಾಲಿಸಿಗಳನ್ನು ಹೊಂದಿದ್ದರೂ, ಅವುಗಳ ಹೊರತಾಗಿ ವೈದ್ಯಕೀಯ ತುರ್ತು ಖರ್ಚಿಗೆಂದೇ 5 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ಶೇಖರಿಸಿಟ್ಟುಕೊಳ್ಳುವುದು ಉತ್ತಮ.
ಓದಿ: ರಾತ್ರೋರಾತ್ರಿ ಕೋಟ್ಯಧಿಪತಿಗಳಾದ ತೆಲಂಗಾಣದ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆದಾರರು!