ನವದೆಹಲಿ: ಹಿಂಡನ್‌ಬರ್ಗ್ ವರದಿಯ ಬಳಿಕ ಭಾರಿ ಸಂಪತ್ತಿನ ನಷ್ಟ ಹೊಂದಿದ್ದ ಅದಾನಿ ಸಮೂಹಗಳ ಅಧ್ಯಕ್ಷ ಗೌತಮ್ ಅದಾನಿ ಮತ್ತೆ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದಾನಿ ಗ್ರೂಪ್ಗಳ ವಿರುದ್ಧ ವಿಶೇಷ ತನಿಖೆ ಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ಸಂಪತ್ತಿನ ಏರಿಕೆ ಕಂಡು ದೇಶದ ನಂಬರ್ 1 ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿ ನಿವ್ವಳ ಮೌಲ್ಯವು ಒಂದೇ ದಿನದಲ್ಲಿ 7.7 ಬಿಲಿಯನ್ ಡಾಲರ್ ಏರಿಕೆ ಕಂಡು 97.6 ಬಿಲಿಯನ್ ಡಾಲರ್ಗೆ ತಲುಪಿದೆ. ಇದರಿಂದ ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿದ್ದಾರೆ. ಮುಖೇಶ್ ಅವರು ಸದ್ಯ 97 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ.
ನಷ್ಟ ತಂದಿದ್ದ ಹಿಂಡನ್‌ಬರ್ಗ್ ವರದಿ: 1980 ರ ದಶಕದಲ್ಲಿ ವಜ್ರದ ವ್ಯಾಪಾರಿಯಾಗಿ ಉದ್ಯಮ ಆರಂಭಿಸಿದ್ದ ಗೌತಮ್ ಅದಾನಿ, ಬಳಿಕ ಬಂದರು ಉದ್ಯಮದಲ್ಲಿ ಭಾರಿ ಯಶಸ್ಸು ಸಾಧಿಸಿ ಸಿರಿವಂತ ವ್ಯಕ್ತಿಯಾಗಿ ಬೆಳೆದರು. 2023 ರಲ್ಲಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಅಮೆರಿಕದ ಕಾರ್ಪೋರೇಟ್ ಸಂಸ್ಥೆಯಾದ ಹಿಂಡನ್‌ಬರ್ಗ್ ವಂಚನೆಯ ಆರೋಪಗಳನ್ನು ಮಾಡಿತ್ತು. ಅದಾನಿ ಸಮೂಹವು ಷೇರುಗಳ ದರವನ್ನು ಕೃತಕವಾಗಿ ಏರಿಸಿ, ದೇಶದ ಆರ್ಥಿಕತೆಗೆ ನಷ್ಟ ತಂದಿದ ಎಂದು ವರದಿಯಲ್ಲಿ ದೂರಿತ್ತು.
ಇದರ ಬಳಿಕ ಟೀಕೆಗೆ ಗುರಿಯಾದ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯವು ಪಾತಾಳಕ್ಕೆ ಕುಸಿಯಿತು. ಸರಿಸುಮಾರು 150 ಬಿಲಿಯನ್ ಡಾಲರ್ ನಷ್ಟಕ್ಕೀಡಾಯಿತು. ಹೂಡಿಕೆದಾರರು, ಸಾಲದಾತರು ಹಾಗೂ ಸಾಲ ಮರುಪಾವತಿಯ ಹೊಡೆತ ಬಿದ್ದಿತ್ತು.
2023 ರಲ್ಲಿ ವಿಶ್ವದ ಅತಿದೊಡ್ಡ ಸಂಪತ್ತಿನ ನಷ್ಟವನ್ನು ಕಂಡಿದ್ದ ಅದಾನಿ ಸಮೂಹ, ಸುಪ್ರೀಂ ಕೋರ್ಟ್ನ ತೀರ್ಪಿನಿಂದಾಗಿ 13.3 ಬಿಲಿಯನ್ ಡಾಲರ್ ಸಂಪತ್ತನ್ನು ಮರುಗಳಿಸಿದೆ. ಇದು ಕೂಡ ಒಂದೇ ವರ್ಷದಲ್ಲಿ ಗಳಿಸಿದ ವಿಶ್ವದ ಅತಿ ದೊಡ್ಡ ಸಂಪತ್ತಾಗಿದೆ. ಹಸಿರು ಪರಿವರ್ತನೆಗಾಗಿ 100 ಬಿಲಿಯನ್ ಡಾಲರ್ ಬಂಡವಾಳ ಹೂಡಿರುವ ಅದಾನಿ, ಕಲ್ಲಿದ್ದಲು ವ್ಯಾಪಾರದ ಜೊತೆಗೆ ಡಾಟಾ ಸೆಂಟರ್‌ಗಳು, ಕೃತಕ ಬುದ್ಧಿಮತ್ತೆ, ನಗರಾಭಿವೃದ್ಧಿ, ವಿಮಾನ ನಿಲ್ದಾಣಗಳು ಮತ್ತು ಮಾಧ್ಯಮಗಳಲ್ಲಿ ಬಂಡವಾಳ ಹೂಡಿಕೆಯನ್ನು ಮುಂದುವರೆಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪೇನು?: ಅದಾನಿ- ಹಿಂಡನ್‌ಬರ್ಗ್ ವಿವಾದದಲ್ಲಿ ಸೆಬಿ ನಡೆಸುತ್ತಿರುವ ಪ್ರಕರಣಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಬಾಕಿ ಉಳಿದ ಮೂರು ಕೇಸ್ಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ವರದಿ ನೀಡಬೇಕು. ಈ ಪ್ರಕರಣಗಳ ವಿಚಾರವಾಗಿ ಸಿಬಿಐ ಅಥವಾ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸುವ ಅಗತ್ಯ ಕಾಣಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಇದಕ್ಕೆ ಗೌತಮ್ ಅದಾನಿ ಹರ್ಷ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಅದಾನಿ ಹಿಂಡನ್‌ಬರ್ಗ್ ವಿವಾದ: 3 ತಿಂಗಳಲ್ಲಿ ತನಿಖೆ ಮುಗಿಸಲು ಸೆಬಿಗೆ ಸುಪ್ರೀಂ ಕೋರ್ಟ್ ಆದೇಶ