ನವದೆಹಲಿ: ಹಿಂಡೆನ್‌ಬರ್ಗ್ ವರದಿಯ ಬಳಿಕ ಅದಾನಿ ಸಮೂಹದ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡು ಬಂದಿತ್ತು. ಇದರ ಪರಿಣಾಮ ಅದಾನಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಭಾರಿ ಕುಸಿತ ಕಂಡಿದ್ದಾರೆ. ಈ ವಿಚಾರ ಈಗ ದೇಶಾದ್ಯಂತ ಸದ್ದು ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ವಿಶ್ವದ ಟಾಪ್-20 ಶ್ರೀಮಂತರ ಪಟ್ಟಿಯಿಂದಲೂ ಅದಾನಿ ಹೊರ ಹಾಕಲ್ಪಟ್ಟಿದ್ದರು. ಈ ಸುದ್ದಿಯ ನಡುವೆ ಉದ್ಯಮಿ ಗೌತಮ್ ಅದಾನಿ ಅವರ ಕಂಪನಿಗಳ ಷೇರುಗಳು ನಿಧಾನವಾಗಿ ಚೇತರಿಕೆ ಹಾದಿ ಹಿಡಿದಿವೆ. ಇದು ಈಗ ಹೂಡಿಕೆದಾರರ ಮೊಗದಲ್ಲಿ ಮಂದಹಾಸಕ್ಕೂ ಕಾರಣವಾಗಿದೆ.
ಇನ್ನೊಂದೆಡೆ ಏರುತ್ತಿರುವ ಷೇರು ಬೆಲೆಗಳ ಹಿನ್ನೆಲೆಯಲ್ಲಿ ಗೌತಮ್ ಅದಾನಿ ನಿವ್ವಳ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ. ಅವರ ಸಂಪತ್ತು $ 59 ಶತಕೋಟಿಯಿಂದ ಈಗ $ 64.9 ಶತಕೋಟಿಗೆ ಏರಿಕೆ ಕಂಡಿದೆ. ಇದರೊಂದಿಗೆ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಗೌತಮ್ ಅದಾನಿ 18ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆದರೆ, ಬುಧವಾರಕ್ಕೆ (ಫೆಬ್ರವರಿ 8) ಹೋಲಿಸಿದರೆ ಅವರ ನಿವ್ವಳ ಮೌಲ್ಯದಲ್ಲಿ ತುಸು ಇಳಿಕೆ ಕಂಡು ಬಂದಿದೆ.
ವಿಶ್ವದ ಪ್ರತಿಷ್ಟಿತ ಫೋರ್ಬ್ಸ್ ಪಟ್ಟಿಯಲ್ಲಿ 130 ಶತಕೋಟಿ ಆದಾಯ ಹೊಂದಿದ್ದ ಅದಾನಿ ಮೂರನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದರು. ಹಿಂಡನ್ಬರ್ಗ್ ವರದಿ ಹೊರಬಿದ್ದ ಮೇಲೆ ಅದಾನಿ ಕಂಪನಿಗಳ ಷೇರುಗಳ ಮೇಲೆ ಭಾರಿ ಪರಿಣಾಮ ಬೀರಿತು. ಹೀಗಾಗಿ 10 ದಿನಗಳಲ್ಲಿ ಅವರ ಸಂಪತ್ತು 58 ಬಿಲಿಯನ್ ಡಾಲರ್‌ಗೆ ಕುಸಿಯಿತು. ಈಗ ಮತ್ತೊಮ್ಮೆ ಗೌತಮ್ ಅದಾನಿ ಪುನರಾಗಮನ ಮಾಡುತ್ತಿದ್ದಾರೆ.
ಸಮೂಹ ಸಂಸ್ಥೆಗಳ ಷೇರು ಮೌಲ್ಯಗಳ ಏರಿಕೆ ಹಿನ್ನೆಲೆಯಲ್ಲಿ ಗೌತಮ ಅದಾನಿ ಮತ್ತೆ ಪೋರ್ಬ್ಸ್ ಪಟ್ಟಿಯಲ್ಲಿ ಏರಿಕೆ ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಅಂದರೆ ಫೆಬ್ರವರಿ 8 ರ ಷೇರು ವಹಿವಾಟಿನಲ್ಲಿ ಗೌತಮ್ ಅದಾನಿ ಹೆಚ್ಚು ಆದಾಯ ಗಳಿಸಿದ್ದಾರೆ. ಒಂದೇ ದಿನದಲ್ಲಿ ಅವರ ಖಾತೆಗೆ ಗರಿಷ್ಠ ಸಂಪತ್ತು ಹರಿದು ಬಂದಿದೆ ಎಂದು ವರದಿಯಾಗಿದೆ. ಫೆಬ್ರವರಿ 8 ರಂದು ಗೌತಮ್ ಅದಾನಿ $ 4.3 ಬಿಲಿಯನ್ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಅವರ ಒಟ್ಟು ನಿವ್ವಳ ಮೌಲ್ಯವು $ 64.9 ಶತಕೋಟಿ ತಲುಪಿದೆ.
ಇನ್ನೊಂದೆಡೆ ದೇಶದ ಅತಿದೊಡ್ಡ ಉದ್ಯಮಿ ರಿಲಯನ್ಸ್ ಇಂಡಸ್ಟ್ರಿಯ ಮುಕೇಶ್ ಅಂಬಾನಿ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಇನ್ನು ಗೌತಮ್ ಅದಾನಿ ಟಾಪ್ - 20 ಶ್ರೀಮಂತರ ಪಟ್ಟಿಯಿಂದ ಹೊರ ಬಿದ್ದು ಈಗ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇನ್ನು ಮುಕೇಶ್ ಅಂಬಾನಿ ಇಂದು $ 83.2 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಶ್ರೀಮಂತರ ಟಾಪ್ 10 ಗೆ ಸೇರಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 12ನೇ ಸ್ಥಾನದಲ್ಲಿದ್ದರು.
ಬುಧವಾರ ವಿಶ್ವಾದ್ಯಂತ ನಡೆದ ವ್ಯವಹಾರಗಳಲ್ಲಿ ಮುಕೇಶ್ ಅಂಬಾನಿ ಅವರ ಸಂಪತ್ತು 1.6 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಮುಖೇಶ್ ಅಂಬಾನಿ ಇಂದು Forbes winner listನಲ್ಲಿ ಸುಮಾರು $ 2 ಬಿಲಿಯನ್ ಲಾಭದೊಂದಿಗೆ ಎರಡನೇ ಸ್ಥಾನಕ್ಕೆ ಏರಿಕೆ ಕಂಡರೆ, ಎಲೋನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ: ಏರಿಕೆ ಹಾದಿ ಹಿಡಿದ ಅದಾನಿ ಸಮೂಹ ಸಂಸ್ಥೆಗಳ ಷೇರು ಬೆಲೆ.. ಶೇ 13 ರಷ್ಟು ಏರಿಕೆ ದಾಖಲಿಸಿದ ಸ್ಟಾಕ್ಸ್!