ನವದೆಹಲಿ : ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ವರದಿಯ ನಂತರ ಕುಸಿದು ಹೋಗಿದ್ದ ಅದಾನಿ ಸಮೂಹದ ಸಾಮ್ರಾಜ್ಯವು ಮತ್ತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದರ ಪರಿಣಾಮದಿಂದ ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ ಮತ್ತೊಮ್ಮೆ ಭಾರಿ ಏರಿಕೆ ಕಾಣತೊಡಗಿದೆ. ವಿಶ್ವದ ಅತಿ ಶ್ರೀಮಂತರ ಪಟ್ಟಿಗೆ ಅವರು ಮತ್ತೆ ಸೇರ್ಪಡೆಯಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. 64.2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅವರು ಬ್ಲೂಮ್‌ಬರ್ಗ್ ಬಿಲಿಯನೇರ್ ಪಟ್ಟಿಯಲ್ಲಿ ಟಾಪ್-20 ಗೆ ಸೇರಿಕೊಂಡಿದ್ದಾರೆ.
ಹಿಂಡೆನ್‌ಬರ್ಗ್ ವರದಿಯ ನಂತರ, ಅದಾನಿ ಗ್ರೂಪ್‌ನ ಷೇರುಗಳು ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಿವೆ. ಕಳೆದ ಎರಡು ದಿನಗಳಿಂದ ಅದರ ಷೇರುಗಳಲ್ಲಿ ಏರಿಳಿತದ ಟ್ರೆಂಡ್ ಇಂದಿಗೂ ಮುಂದುವರಿದಿದೆ. ಹಿಂದಿನ ವಹಿವಾಟಿನ ದಿನವಾದ ಮಂಗಳವಾರ ಗುಂಪಿನ ಐದು ಷೇರುಗಳು ಮೇಲ್ಮಟ್ಟದಲ್ಲಿ ವ್ಯವಹಾರ ನಿರತವಾಗಿದ್ದವು.
ಇದರಲ್ಲಿ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ 14 ಪ್ರತಿಶತ ಮತ್ತು ಅದಾನಿ ವಿಲ್ಮಾರ್‌ನಲ್ಲಿ 10 ಪ್ರತಿಶತದಷ್ಟು ದೊಡ್ಡ ಮಟ್ಟದ ಬೆಳವಣಿಗೆ ಕಂಡುಬಂದಿದೆ. ಇದಲ್ಲದೆ, ಅದಾನಿ ಪವರ್ ಮತ್ತು ಅದಾನಿ ಗ್ರೂಪ್‌ನ ಅದಾನಿ ಗ್ರೀನ್ ಸೇರಿದಂತೆ ಇತರ ಕಂಪನಿಗಳ ಷೇರುಗಳು ಸಹ ಏರಿಕೆಯಲ್ಲಿ ಬಂದ್ ಆಗಿದ್ದವು. ಷೇರುಗಳ ಏರಿಕೆಯಿಂದಾಗಿ, ಸಮೂಹದ ಮಾರುಕಟ್ಟೆ ಬಂಡವಾಳವು ಈಗಾಗಲೇ 10 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ. ಇದರೊಂದಿಗೆ ಗೌತಮ್ ಅದಾನಿ 64.2 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಶ್ರೀಮಂತರ ಪಟ್ಟಿಯಲ್ಲಿ 24ನೇ ಸ್ಥಾನದಿಂದ 18ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಗೌತಮ್ ಅದಾನಿ ಮತ್ತೊಮ್ಮೆ ಶ್ರೀಮಂತರ ಪಟ್ಟಿಯಲ್ಲಿ ಪುನರಾಗಮನ ಮಾಡುತ್ತಿದ್ದಾರೆ. ಸಮೂಹದ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಇದಕ್ಕೆ ದೊಡ್ಡ ಕೊಡುಗೆ ನೀಡಿದೆ. ಕಳೆದ 3 ದಿನಗಳಲ್ಲಿ, ಈ ಪ್ರಮುಖ ಷೇರಿನ ಬೆಲೆಯು ಶೇಕಡಾ 45 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಅದೇ ಸಮಯದಲ್ಲಿ, Adani Ports & Special Economic Zone (APSEZ) ಷೇರುಗಳು ಎರಡು ದಿನಗಳಲ್ಲಿ 15 ಶೇಕಡಾಕ್ಕಿಂತ ಹೆಚ್ಚು ಹೆಚ್ಚಾಗಿದೆ.
ವಿಶೇಷವೆಂದರೆ ಈ ಕಂಪನಿಯ ಷೇರು ಹಿಂಡನ್ ಬರ್ಗ್ ವರದಿಯಿಂದ ಅನುಭವಿಸಿದ ನಷ್ಟಕ್ಕಿಂತ ಹೆಚ್ಚಿನ ಮಟ್ಟಕ್ಕೆ ಮರಳಿದೆ. ಇದಲ್ಲದೇ, ಅದಾನಿ ಗ್ರೂಪ್‌ನ ಇತರ ಷೇರುಗಳು ಕೂಡ ಅಪ್ಪರ್ ಸರ್ಕ್ಯೂಟ್‌ನೊಂದಿಗೆ ವಹಿವಾಟು ನಡೆಸುತ್ತಿವೆ. ಇದರಿಂದಾಗಿ ಸಮೂಹದ ಮಾರುಕಟ್ಟೆ ಮೌಲ್ಯ ಮತ್ತೊಮ್ಮೆ 10 ಲಕ್ಷ ಕೋಟಿ ರೂ. ಆಗಿದೆ. ಇದರಲ್ಲಿ 7.37 ಲಕ್ಷ ಕೋಟಿ ಅಂದರೆ ಸುಮಾರು ಶೇ 65 ರಷ್ಟು ಟಾಪ್-4 ಕಂಪನಿಗಳ ಕೊಡುಗೆಯಾಗಿದೆ.
2023 ರ ಆರಂಭಿಕ ಸಮಯವು ಅದಾನಿ ಸಮೂಹಕ್ಕೆ ಉತ್ತಮವಾಗಿರಲಿಲ್ಲ. ಜನವರಿ 24 ರಂದು ಅಮೇರಿಕನ್ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ಕುರಿತು ತನ್ನ ವರದಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಸ್ಟಾಕ್ ಮ್ಯಾನಿಪ್ಯುಲೇಷನ್, ಷೇರುಗಳಲ್ಲಿ ಹಸ್ತಕ್ಷೇಪ ಸೇರಿದಂತೆ 86 ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ಹೀಗಾಗಿ ಅದಾನಿ ಗ್ರೂಪ್ ಭಾರಿ ನಷ್ಟ ಅನುಭವಿಸಿದೆ. ಗೌತಮ್ ಅದಾನಿ ಅವರ ನಿವ್ವಳ ಮೌಲ್ಯ 45 ಬಿಲಿಯನ್ ಡಾಲರ್‌ಗೆ ಇಳಿದಿತ್ತು. ಆದರೆ, ಮಾರ್ಚ್ ತಿಂಗಳಿನಿಂದ ಗೌತಮ್ ಅದಾನಿ ಮತ್ತೊಮ್ಮೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಇದನ್ನೂ ಓದಿ : ಕ್ವಿಕ್ ಕಾಮರ್ಸ್ ವಿಸ್ತಾರ: ಡೆಲಿವರಿ ಬಾಯ್ಗಳಿಗೆ ಹೆಚ್ಚುತ್ತಿರುವ ಬೇಡಿಕೆ