ನವದೆಹಲಿ: ಇಪಿಎಫ್‌ಒ ಸಂಸ್ಥೆಯು ತನ್ನ 73 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿ(ಮುಖ ದೃಢೀಕರಣ ತಂತ್ರಜ್ಞಾನ) ಬಳಸಿಕೊಂಡು ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸುವ ಅವಕಾಶ ಕಲ್ಪಿಸುವ ಸೌಲಭ್ಯವನ್ನು ಶನಿವಾರ ಆರಂಭಿಸಿದೆ. ಬಯೋಮೆಟ್ರಿಕ್ಗಳನ್ನು (ಫಿಂಗರ್ ಪ್ರಿಂಟ್ ಮತ್ತು ಐರಿಸ್) ಸೆರೆಹಿಡಿಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿರುವ ವಯಸ್ಸಾದ ಪಿಂಚಣಿದಾರರು ತಮ್ಮ ಜೀವಿತ ಪ್ರಮಾಣಪತ್ರಗಳನ್ನು ಸಲ್ಲಿಸಲು ಈ ಮುಖ ದೃಢೀಕರಣ ತಂತ್ರಜ್ಞಾನ ಸಹಾಯಕವಾಗಲಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಹಾಗೂ ಇಪಿಎಫ್‌ಒದ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಅಧ್ಯಕ್ಷ ಭೂಪೇಂದರ್ ಯಾದವ್ ಅವರು ಪಿಂಚಣಿದಾರರ ಮುಖ ದೃಢೀಕರಣ ತಂತ್ರಜ್ಞಾನ ಉದ್ಘಾಟಿಸಿದರು. ಜೊತೆಗೆ, ಯಾದವ್ ಅವರು ಪಿಂಚಣಿ ಮತ್ತು ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ ಕ್ಯಾಲ್ಕುಲೇಟರ್ಗೆ ಚಾಲನೆ ನೀಡಿದ್ದಾರೆ ಎಂದು ಕಾರ್ಮಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.
ಪಿಂಚಣಿದಾರರು ಮತ್ತು ಕುಟುಂಬದ ಸದಸ್ಯರಿಗೆ ಅವರು ಅರ್ಹರಾಗಿರುವ ಪಿಂಚಣಿ ಮತ್ತು ಮರಣ ಸಂಬಂಧಿತ ವಿಮಾ ಪ್ರಯೋಜನಗಳನ್ನು ಲೆಕ್ಕಾಚಾರ ಮಾಡಲು ಆನ್‌ಲೈನ್ ಸೌಲಭ್ಯವನ್ನು ಒದಗಿಸುತ್ತದೆ. ಹಿಂದಿನ ದಿನದಲ್ಲಿ, ಸಿಬಿಟಿ ತನ್ನ 231 ನೇ ಸಭೆಯಲ್ಲಿ ಪಿಂಚಣಿದಾರರಿಗೆ EPFO ಸೇವೆಗಳನ್ನು ಮತ್ತಷ್ಟು ಸುಧಾರಿಸಲು ಪಿಂಚಣಿ ಕೇಂದ್ರೀಕೃತ ವಿತರಣೆಗೆ ತಾತ್ವಿಕ ಅನುಮೋದನೆಯನ್ನು ನೀಡಿತ್ತು.
ಇದೀಗ ಪಿಂಚಣಿದಾರರಿಗೆ ಕೇಂದ್ರ ಪಿಂಚಣಿ ಪಾವತಿ ವ್ಯವಸ್ಥೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಇದೇ ವೇಳೆ ಪಿಂಚಣಿ ಮಾಹಿತಿಗಾಗಿ ಡಿಜಿಟಲ್ ಕ್ಯಾಲ್ಕುಲೇಟರ್ ಅನ್ನು ಸಹ ಅನುಮೋದಿಸಲಾಗಿದೆ. ಜೊತೆಗೆ, ಪಿಂಚಣಿ ಮೊತ್ತವನ್ನು ನೇರ ಖಾತೆಗೆ ವರ್ಗಾವಣೆಯಾಗಲಿದೆ, ಇದು ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲಿದೆ. ಅಲ್ಲದೆ, ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ESIC ಅನ್ನು ಲಿಂಕ್ ಮಾಡಲು ಕೂಡ ನಿರ್ಧಾರ ಕೈಗೊಳ್ಳಲಾಗಿದೆ.
ಮೂರು ವರ್ಷಗಳ ಕಾಲ ಇಪಿಎಫ್‌ಒ ಸೆಕ್ಯುರಿಟೀಸ್‌ನ ಕಸ್ಟೋಡಿಯನ್ ಆಗಿ ಸಿಐಟಿಐ ಬ್ಯಾಂಕ್‌ನ ನೇಮಕವನ್ನು CBT ಅನುಮೋದಿಸಿದೆ. ಈಗಿನ ಕಸ್ಟೋಡಿಯನ್ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಅಧಿಕಾರಾವಧಿಯನ್ನು ಹೊಸ ಕಸ್ಟೋಡಿಯನ್ ಅಧಿಕಾರ ವಹಿಸಿಕೊಳ್ಳುವವರೆಗೆ ವಿಸ್ತರಿಸುವ ಪ್ರಸ್ತಾವನೆಯನ್ನು ಸಹ ಅನುಮೋದಿಸಲಾಗಿದೆ.
ಇದನ್ನೂ ಓದಿ: ಉದ್ಯೋಗಿಗಳ ಪಿಎಫ್ ಬಡ್ಡಿದರ ಕಡಿತ ನಿರ್ಧಾರ ಈಗಿನ ಅಗತ್ಯ: ಕೇಂದ್ರ ಸರ್ಕಾರ