ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಪರಿಸ್ಥಿತಿ ತಲೆದೋರಿದ್ದರೂ, ಜಾಗತಿಕ ತೈಲ ಬೆಲೆಗಳಲ್ಲಿ ಕುಸಿತವಾಗಿರುವುದು ಭಾರತೀಯ ಆರ್ಥಿಕತೆಗೆ ಬಹುದೊಡ್ಡ ಉತ್ತೇಜನ ಸಿಕ್ಕಂತಾಗಿದೆ. ತನ್ನ ಕಚ್ಚಾ ತೈಲ ಅಗತ್ಯದ ಶೇಕಡಾ 85 ಕ್ಕಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವ ಭಾರತಕ್ಕೆ ಈ ಬೆಳವಣಿಗೆ ಸಕಾರಾತ್ಮಕವಾಗಿದೆ.
ದುಬಾರಿ ವೆಚ್ಚದ ಆಮದುಗಳು ದೇಶೀಯ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಆಮದು ಪಾವತಿಗೆ ಹೆಚ್ಚಾಗಿ ಯುಎಸ್ ಡಾಲರ್ ಬಳಸುವುದರಿಂದ ರೂಪಾಯಿ ದುರ್ಬಲಗೊಳ್ಳುತ್ತದೆ. ಹೀಗಾಗಿ ತೈಲ ಬೆಲೆಗಳಲ್ಲಿನ ಏರಿಳಿತ ದೇಶದ ಆರ್ಥಿಕತೆಗೆ ಹಾನಿಯುಂಟು ಮಾಡುತ್ತದೆ.
ಒಪೆಕ್ ಮತ್ತು ತೈಲ ಕಾರ್ಟೆಲ್ ಕಂಪನಿಗಳು ಉತ್ಪಾದನೆ ಕಡಿತಕ್ಕೆ ಮುಂದಾದ ನಂತರ 2023 ರ ಜುಲೈ-ಅಕ್ಟೋಬರ್ ಅವಧಿಯಲ್ಲಿ ಭಾರತೀಯ ಕಚ್ಚಾ ತೈಲ ಆಮದಿನ ಬೆಲೆ ಏರಿಕೆಯಾಗಿದೆ. ಆದರೆ ಈಗ ಕಾಣಿಸಿಕೊಂಡಿರುವ ಜಾಗತಿಕ ಆರ್ಥಿಕ ಕುಸಿತದ ನಂತರ ತೈಲಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಕಚ್ಚಾ ತೈಲ ಬೆಲೆಗಳು ಮತ್ತೆ ಕುಸಿಯುತ್ತಿವೆ.
ಭಾರತೀಯ ಕಚ್ಚಾ ತೈಲ ಆಮದಿನ ಬೆಲೆ ಅಕ್ಟೋಬರ್ 2023 ರಲ್ಲಿ ಬ್ಯಾರೆಲ್ಗೆ ಸರಾಸರಿ 90.08 ಡಾಲರ್ ಮತ್ತು ಸೆಪ್ಟೆಂಬರ್ 2023 ರಲ್ಲಿ ಬ್ಯಾರೆಲ್ಗೆ 93.54 ಡಾಲರ್ ಆಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲದ ಬೆಲೆ ಈಗ ಬ್ಯಾರೆಲ್ ಗೆ 77 ಡಾಲರ್ ಗೆ ಇಳಿದಿದೆ. ಹೀಗಾಗಿ ಭಾರತೀಯ ತೈಲ ಆಮದಿನ ಬೆಲೆ ಇದಕ್ಕಿಂತಲೂ ಕಡಿಮೆಯಾಗಿರುತ್ತದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ, ಇಸ್ರೇಲ್-ಹಮಾಸ್ ಯುದ್ಧದಿಂದ ಉಂಟಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ತೈಲ ಬೆಲೆಗಳು ಹೆಚ್ಚಾಗಬಹುದು. ಆದರೆ ಬೇಡಿಕೆ ಕಡಿಮೆಯಾಗುವುದರಿಂದ ಕೊನೆಗೆ ತೈಲ ಬೆಲೆಗಳು ಕಡಿಮೆಯಾಗುತ್ತವೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಜಾಗತಿಕವಾಗಿ ಕಚ್ಚಾ ತೈಲಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ 2022 ರ ಮಾರ್ಚ್ನಲ್ಲಿ ಬೆಲೆಗಳು ಬ್ಯಾರೆಲ್ಗೆ 139 ಡಾಲರ್ಗೆ ಏರಿಕೆಯಾಗಿದ್ದವು. ಆದಾಗ್ಯೂ ದೇಶಗಳ ಕೇಂದ್ರ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿದ್ದರಿಂದ ಮತ್ತು ಆರ್ಥಿಕ ಹಿಂಜರಿತದ ಭೀತಿ ಎದುರಾಗಿದ್ದರಿಂದ ವರ್ಷದ ದ್ವಿತೀಯಾರ್ಧದಲ್ಲಿ ಬೆಲೆಗಳು ತೀವ್ರವಾಗಿ ಕುಸಿದವು.
ಮುಂದಿನ ಹಣಕಾಸು ವರ್ಷದಲ್ಲಿ (2024-25) ತೈಲ ಬೆಲೆಗಳು ಭಾರತೀಯ ಆರ್ಥಿಕತೆಗೆ ಪ್ರಮುಖ ಅಪಾಯವಾಗಿದೆ ಎಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅಭಿಪ್ರಾಯಪಟ್ಟಿದ್ದಾರೆ.
"ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಕೆಂಪು ಸಮುದ್ರದಲ್ಲಿ ಸರಕು ಸಾಗಣೆಯ ಅಡ್ಡಿ ವಿಚಾರ ಒಂದಕ್ಕೊಂದು ಸಂಬಂಧಿತ ಅಂಶಗಳಾಗಿವೆ. ಆದಾಗ್ಯೂ, ಬೇಡಿಕೆಯನ್ನು ನಿಧಾನಗೊಳಿಸುವ ಸವಾಲನ್ನು ಇದು ಎದುರಿಸಲಿದೆ. ಬೆಲೆಗಳು ಏರಿಕೆಯಾದರೆ, ಅವು ಆರ್ಥಿಕ ಚಟುವಟಿಕೆಯನ್ನು ಮತ್ತಷ್ಟು ಮಂದವಾಗಿಸುತ್ತವೆ" ಎಂದು ನಾಗೇಶ್ವರನ್ ಕಳೆದ ವಾರ ಮುಂಬೈನಲ್ಲಿ ನಡೆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕಿಂಗ್ ಮತ್ತು ಆರ್ಥಿಕ ಸಮಾವೇಶದಲ್ಲಿ ಸಂವಾದದಲ್ಲಿ ಹೇಳಿದರು. "2024 ರ ಅವಧಿಯಲ್ಲಿ ತೈಲ ಬೆಲೆಗಳು ಹೆಚ್ಚಾಗುವಷ್ಟು ಅದಕ್ಕೆ ಬೇಡಿಕೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ" ಎಂದು ಅವರು ಹೇಳಿದರು.
ಬ್ಯಾರೆಲ್ಗೆ 85 ಡಾಲರ್ನಿಂದ ಶೇಕಡಾ 10 ರಷ್ಟು ತೈಲ ಬೆಲೆ ಏರಿಕೆಯು ದೇಶೀಯ ಆರ್ಥಿಕ ಬೆಳವಣಿಗೆಯನ್ನು 15 ಬೇಸಿಸ್ ಪಾಯಿಂಟ್ಗಳಷ್ಟು ದುರ್ಬಲಗೊಳಿಸಬಹುದು ಮತ್ತು ಹಣದುಬ್ಬರವನ್ನು 30 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಬಹುದು ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಪ್ರಮುಖ ಜಾಗತಿಕ ಹೂಡಿಕೆ ಬ್ಯಾಂಕ್ ಮೋರ್ಗನ್ ಸ್ಟಾನ್ಲಿ ಅಂದಾಜಿನ ಪ್ರಕಾರ, ತೈಲ ಬೆಲೆಗಳಲ್ಲಿ ಪ್ರತಿ 10 ಡಾಲರ್ ಹೆಚ್ಚಳವು ಭಾರತದ ಹಣದುಬ್ಬರವನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸುತ್ತದೆ ಮತ್ತು ಚಾಲ್ತಿ ಖಾತೆ ಕೊರತೆಯನ್ನು 30 ಬೇಸಿಸ್ ಪಾಯಿಂಟ್ಗಳಷ್ಟು ವಿಸ್ತರಿಸುತ್ತದೆ.
ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡವನ್ನು ಎದುರಿಸಲು ಆರ್ಬಿಐ ಮೇ 2022 ಮತ್ತು ಫೆಬ್ರವರಿ 2023 ರ ನಡುವೆ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಅಂದಿನಿಂದ ಅದು ದರವನ್ನು ಶೇಕಡಾ 6.50 ಕ್ಕೆ ಸ್ಥಿರವಾಗಿರಿಸಿದೆ. ಆದರೆ ಹಣದುಬ್ಬರವನ್ನು ಶೇಕಡಾ 4 ರ ಗುರಿಗೆ ಇಳಿಸುವತ್ತ ಗಮನ ಹರಿಸಿದೆ.
ಅಕ್ಟೋಬರ್-ಮಾರ್ಚ್ನಲ್ಲಿ ಸರಾಸರಿ ಕಚ್ಚಾ ತೈಲ ಬೆಲೆ 85 ಡಾಲರ್ ಆಧಾರದ ಮೇಲೆ 2023-24ರ ಹಣಕಾಸು ವರ್ಷದಲ್ಲಿ ಹಣದುಬ್ಬರವನ್ನು ಶೇಕಡಾ 5.4 ಕ್ಕೆ ಆರ್ಬಿಐ ಅಂದಾಜಿಸಿದೆ. ಕಚ್ಚಾ ತೈಲ ಬೆಲೆ ಹೆಚ್ಚಾದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಬಡ್ಡಿದರ ಕಡಿಮೆ ಮಾಡಬೇಕಾಗುತ್ತದೆ. ಮತ್ತೊಂದೆಡೆ, ಕಚ್ಚಾ ಬೆಲೆಗಳ ಕುಸಿತವು ದೇಶೀಯ ಹಣದುಬ್ಬರವನ್ನು ಸಹ ಕಡಿಮೆ ಮಾಡುತ್ತದೆ. ಇದು ಆರ್ಥಿಕ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸಲು ಪೂರ್ವಭಾವಿಯಾಗಿ ಬಡ್ಡಿದರ ಕಡಿತಕ್ಕೆ ಕಾರಣವಾಗುತ್ತದೆ.
(ಎಸ್.ಪಿ.ಎಸ್. ಪನ್ನು) (IANS)
ಇದನ್ನೂ ಓದಿ : ಭಾರತದಲ್ಲಿ $50 ಶತಕೋಟಿ ಮೌಲ್ಯದ ಮೊಬೈಲ್ ಫೋನ್ ಉತ್ಪಾದನೆ