ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂಪಾಯಿಗೆ ಏರಿಸಲಾಗಿದೆ. ಗೃಹಬಳಕೆಯ ಸಿಲಿಂಡರ್ ದರವನ್ನು ಪರಿಷ್ಕರಿಸಲಾಗಿಲ್ಲ. ಇದು ವಾಣಿಜ್ಯೋದ್ದೇಶದ ಗ್ರಾಹಕರ ಕೈ ಸುಡಲಿದೆ.
ವಾಣಿಜ್ಯ ಸಿಲಿಂಡರ್‌ಗಳ ಪರಿಷ್ಕೃತ ದರ ಜನವರಿ 1 ರಿಂದಲೇ ಜಾರಿಗೆ ಬರಲಿದೆ ಎಂದು ಒಎಂಸಿ ತಿಳಿಸಿದೆ. ಪ್ರತಿ ಸಿಲಿಂಡರ್ಗೆ 25 ರೂಪಾಯಿ ಏರಿಕೆ ಮಾಡಿದ್ದು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಸೇರಿದಂತೆ ವಿವಿಧ ವಾಣಿಜ್ಯೋದ್ಯಮಗಳು ಬೆಲೆ ಏರಿಕೆ ಬಿಸಿ ಅನುಭವಿಸಲಿವೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಊಟದ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜನಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಏರಿಕೆ ಮಾಡದೇ ಇರುವುದು ಜನರಲ್ಲಿ ಸಮಾಧಾನ ತಂದಿದೆ.
ದೇಶದ ಮಹಾನಗರಗಳಲ್ಲಿ ದರ ಹೇಗಿದೆ(ವಾಣಿಜ್ಯ)?:
ದೆಹಲಿ- 1,768 ರೂಪಾಯಿ
ಮುಂಬೈ- 1721 ರೂಪಾಯಿ
ಕೋಲ್ಕತ್ತಾ- 1870 ರೂಪಾಯಿ
ಚೆನ್ನೈ- 1917 ರೂಪಾಯಿ
ಗೃಹಬಳಕೆಯ LPG ಸಿಲಿಂಡರ್ ಬೆಲೆ:
ದೆಹಲಿ- 1053 ರೂ
ಮುಂಬೈ- 1052.5 ರೂ
ಕೋಲ್ಕತ್ತಾ- 1079 ರೂ
ಚೆನ್ನೈ- 1068.5 ರೂ
ಗೃಹಬಳಕೆ ಸಿಲಿಂಡರ್‌ಗಳ ದರವನ್ನು ಕಳೆದ ವರ್ಷ ನಾಲ್ಕು ಬಾರಿ ಏರಿಕೆ ಮಾಡಲಾಗಿತ್ತು. ಮಾರ್ಚ್ನಲ್ಲಿ 50 ರೂಪಾಯಿ, ಮೇ ತಿಂಗಳಲ್ಲಿ 50 ಮತ್ತು 3.50 ರೂಪಾಯಿ, ಬಳಿಕ ಜುಲೈನಲ್ಲಿ 50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಅಲ್ಲದೇ ಸಂಚಿತ ನಿಧಿ(ಡೆಪಾಸಿಟ್)ಯನ್ನು 153.5ಕ್ಕೆ ಹೆಚ್ಚಿಸಲಾಗಿದೆ.
ಕಳೆದ ಸೆಪ್ಟೆಂಬರ್ 1ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 91.50 ಪೈಸೆ ಇಳಿಕೆ ಮಾಡಿದ್ದವು. ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆ ಗಮನದಲ್ಲಿಟ್ಟುಕೊಂಡು ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಆಹಾರ ಭದ್ರತಾ ಕಾಯ್ದೆಯಡಿ ಒಂದು ವರ್ಷ ಉಚಿತ ಪಡಿತರ: ಇಂದಿನಿಂದಲೇ ಜಾರಿ