ಹೈದರಾಬಾದ್: ಸಮಯ ಯಾರಿಗೂ ಕಾಯುವುದಿಲ್ಲ. ನಮ್ಮ ಜೀವನದ ಹಲವು ಹಂತಗಳಂತೆ, ನಿವೃತ್ತಿಯೂ ಕೂಡಾ ಒಂದು ಹಂತವೇ ಆಗಿದೆ. ಎಲ್ಲ ಹಂತಗಳಲ್ಲಿ ಜೀವನ ಅನುಭವವನ್ನು ಆನಂದಿಸುವ ಅವಕಾಶ ನಮ್ಮ ಕೈಯಲ್ಲೇ ಇದೆ . ಎಲ್ಲವನ್ನೂ ಮೊದಲೇ ತಯಾರಿ ಮಾಡಿಕೊಂಡವರಿಗೆ ಇದು ದೊಡ್ಡ ವಿಷಯವಲ್ಲ. ಒಂದು ವರ್ಷದ ವಿಳಂಬ ಕೂಡ ನಿವೃತ್ತಿ ನಿಧಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ಸಾಧ್ಯವಾದಷ್ಟು ಬೇಗ ನಿವೃತ್ತಿ ಯೋಜನೆಯನ್ನು ಪ್ರಾರಂಭಿಸುವುದು ಉತ್ತಮ.
ಕಡಿಮೆ ಅಂದಾಜು: ನಿವೃತ್ತಿಗಾಗಿ ಯೋಜನೆ ರೂಪಿಸುವಾಗ ಅನೇಕ ಜನರು ವೆಚ್ಚಗಳನ್ನು ಕಡಿಮೆ ಅಂದಾಜು ಮಾಡುತ್ತಾರೆ. ನಿಮ್ಮ ನಿವೃತ್ತಿ ಜೀವನವನ್ನು ನೀವು ಹೇಗೆ ಕಳೆಯಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ ವೆಚ್ಚಗಳನ್ನು ಲೆಕ್ಕ ಹಾಕಬೇಕು. ವಯಸ್ಸಾದಂತೆ ಆರೋಗ್ಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಇವೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ನಿಮ್ಮ ನಿವೃತ್ತಿಯ ನಿರೀಕ್ಷೆಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಅಗತ್ಯವಿರುವಂತೆ ಹೂಡಿಕೆಗಳನ್ನು ಹೊಂದಿಸುವುದು ಬಹಳಾನೇ ಮುಖ್ಯವಾಗಿದೆ. ಹೆಚ್ಚಿನ ಜನರು ನಿವೃತ್ತಿಯನ್ನು ತಮ್ಮ ವೈಯಕ್ತಿಕ ಅಜೆಂಡಾ ಎಂದು ಭಾವಿಸುತ್ತಾರೆ, ಆದರೆ ಸಂಗಾತಿಯ ಅಗತ್ಯತೆಗಳು ಮತ್ತು ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡಾಗ ಯೋಜನೆಯು ಸರಿಯಾಗಿದೆ ಎಂದು ನಾವು ಹೇಳಬಹುದು.
ಪ್ರತಿ ಹೂಡಿಕೆಯನ್ನೂ ಪರಿಶೀಲಿಸಬೇಕು: ಪ್ರತಿ ಹೂಡಿಕೆ ಯೋಜನೆಯನ್ನು ವರ್ಷಕ್ಕೊಮ್ಮೆಯಾದರೂ ಪರಿಶೀಲಿಸಬೇಕು. ಯಾವುದೇ ಸಂದರ್ಭದಲ್ಲಿ ಒಂದೇ ರೀತಿಯ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ಸುರಕ್ಷಿತ ಹೂಡಿಕೆ ಯೋಜನೆಗಳ ಜೊತೆಗೆ ಕೆಲವು ಹೆಚ್ಚು ಲಾಭ ನೀಡುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಿವೃತ್ತಿಯ ನಂತರ ನಿಯಮಿತ ಆದಾಯವನ್ನು ಪಡೆಯಲು ಆಯ್ಕೆಮಾಡಿದ ಯೋಜನೆಗಳು ವಿಭಿನ್ನವಾಗಿರಬೇಕು. ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಮತ್ತು ಸಾಲ ನಿಧಿಯಿಂದ ನಿಯತಕಾಲಿಕವಾಗಿ ಹಿಂಪಡೆಯುವಿಕೆಯಂತಹ ವಿಷಯಗಳನ್ನು ಈ ವೇಳೆ ಪರಿಗಣಿಸುವುದು ಉತ್ತಮ.
ಹಣದುಬ್ಬರವನ್ನ ನಿರ್ಲಕ್ಷಿಸಬೇಡಿ: ಹಣದುಬ್ಬರವು ನಮ್ಮ ಹಣದ ಮೌಲ್ಯವನ್ನು ಕುಗ್ಗಿಸುತ್ತದೆ. ಇಂದು ನಿಮ್ಮ ಮನೆಯ ವೆಚ್ಚವು 25,000 ರೂ ಆಗಿದ್ದರೆ, 20 ವರ್ಷಗಳ ನಂತರ ಎಂಟು ಶೇಕಡಾದಷ್ಟು ಹಣದುಬ್ಬರವನ್ನು ಊಹಿಸಿದರೆ, ನಿಮಗೆ 1,16,524 ರೂ. ಬೇಕಾಗುತ್ತದೆ. ಆದ್ದರಿಂದ, ನಿವೃತ್ತಿ ಹೂಡಿಕೆಗಳು ಈ ಲೆಕ್ಕಾಚಾರದ ಅನುಗುಣವಾಗಿಯೇ ಇರಬೇಕು. ಹಣದುಬ್ಬರದ ಪರಿಣಾಮಗಳು ನಿವೃತ್ತಿಯ ನಂತರವೂ ಇರುತ್ತವೆ. ಆದ್ದರಿಂದ ಆದಾಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಹೆಚ್ಚಿದ ವೈದ್ಯಕೀಯ ಜ್ಞಾನದಿಂದಾಗಿ, ನಾವು 100 ವರ್ಷಗಳವರೆಗೆ ಬದುಕುತ್ತೇವೆ ಎಂಬ ನಿರೀಕ್ಷೆಯೊಂದಿಗೆ ವೆಚ್ಚವನ್ನು ಲೆಕ್ಕಾಚಾರ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಯಾವುದೇ ಹಂತದಲ್ಲೂ ಹಣದುಬ್ಬರವನ್ನು ನಿರ್ಲಕ್ಷಿಸಬೇಡಿ. ಹೂಡಿಕೆ ಮಾಡುವಾಗ, ಇದಕ್ಕಿಂತ ಹೆಚ್ಚಿನ ಆದಾಯವನ್ನು ನೀಡುವ ಯೋಜನೆಗಳಿಗೆ ಆದ್ಯತೆ ನೀಡಬೇಕು.
ನೀವು ಸುರಕ್ಷಿತ ಯೋಜನೆಗಳನ್ನು ಆಯ್ಕೆ ಮಾಡಿಕೊಂಡರೆ: ಅನೇಕರು ತಮ್ಮ ನಿವೃತ್ತಿಯ ಅಗತ್ಯಗಳಿಗಾಗಿ ಉದ್ಯೋಗದ ಭವಿಷ್ಯ ನಿಧಿ, ಸಾರ್ವಜನಿಕ ಭವಿಷ್ಯ ನಿಧಿ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ನಂತಹ ಯೋಜನೆಗಳನ್ನು ಆರಿಸಿಕೊಳ್ಳುತ್ತಾರೆ. NPS ಹೊರತುಪಡಿಸಿ, ಇತರ ಎರಡು ಯೋಜನೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಇವುಗಳ ಮೂಲಕ ಮಾತ್ರ ನಿವೃತ್ತಿ ನಿಧಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲ. ನೀವು ಗಣನೀಯ ಮೊತ್ತವನ್ನು ಗಳಿಸಲು ಬಯಸಿದರೆ, ದೀರ್ಘಾವಧಿಯವರೆಗೆ ತುಲನಾತ್ಮಕವಾಗಿ ಹೆಚ್ಚಿನ ಆದಾಯವನ್ನು ನೀಡುವ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಕು.
ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಂತಹ ವಿಷಯಗಳನ್ನು ಇದಕ್ಕಾಗಿ ಪರಿಗಣಿಸಬಹುದು. ಯುನಿಟ್ ಆಧಾರಿತ ವಿಮಾ ಪಾಲಿಸಿಗಳು ಮತ್ತು ಸಾಂಪ್ರದಾಯಿಕ ಪಾಲಿಸಿಗಳಿವೆ. ವಿಮಾ ಉದ್ದೇಶಗಳಿಗಾಗಿ ಇವುಗಳನ್ನು ಆಯ್ಕೆ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಸಾಧ್ಯವಾದಷ್ಟು, ಕಡಿಮೆ ಪ್ರೀಮಿಯಂನೊಂದಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುವ ಪಾಲಿಸಿಗಳನ್ನು ಆಯ್ಕೆಮಾಡಿ.
ನಿವೃತ್ತಿ ನಿಧಿಯಿಂದ ಹಣ ಹಿಂಪಡೆಯುವುದನ್ನು ತಪ್ಪಿಸಿ: ನಿವೃತ್ತಿ ಎಂದರೆ ಕೆಲಸದಿಂದ ನಿವೃತ್ತಿಗೆ ಪರಿವರ್ತನೆ ಆಗುವುದು. ಇದು ಗಳಿಕೆಯ ಅಂತ್ಯ ಮತ್ತು ವೆಚ್ಚಗಳ ಆರಂಭವನ್ನು ಸೂಚಿಸುತ್ತದೆ. ನೀವು ಸರಿಯಾದ ಯೋಜನೆಯನ್ನು ಹೊಂದಿಲ್ಲದಿದ್ದರೆ, ನೀವು ಹಣವನ್ನು ಕಳೆದುಕೊಳ್ಳಬಹುದು. ಸಾಧ್ಯವಾದಷ್ಟು ನಿವೃತ್ತಿ ನಿಧಿಯಿಂದ ಹಣವನ್ನು ಹಿಂಪಡೆಯುವುದನ್ನು ತಪ್ಪಿಸಿ. ನಿಧಿಯ ಮೇಲೆ ಗಳಿಸಿದ ಆದಾಯದಿಂದ ಮಾತ್ರ ವೆಚ್ಚವನ್ನು ಭರಿಸಬೇಕು. ಕಡ್ಡಾಯ ಅವಶ್ಯಕತೆ ಇದ್ದರೂ ಎರಡರಿಂದ ಮೂರು ಶೇಕಡಾಕ್ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಳ್ಳಬೇಡಿ. ಹಿಂಪಡೆಯುವಿಕೆಗೆ ಸ್ವಯಂ ಮಿತಿ ಇರಲೇಬೇಕು.
ಹೊಸ ಸಾಲಗಳು: ನಿವೃತ್ತಿಗೆ ಎರಡು ವರ್ಷಗಳ ಮೊದಲು ಸಾಲವನ್ನು ಮುಕ್ತಗೊಳಿಸಿ. ಹೊಸ ಸಾಲಕ್ಕೆ ಹೋಗಬೇಡಿ. ಕೆಲವರು 50 ವರ್ಷಗಳ ನಂತರ ಗೃಹ ಸಾಲವನ್ನು ತೆಗೆದುಕೊಳ್ಳುತ್ತಾರೆ. ಬಡ್ಡಿದರಗಳು ಏರಿದಾಗ ಅವಧಿಯು ಹೆಚ್ಚಾಗುತ್ತದೆ. ಅಂದರೆ ನಿವೃತ್ತಿಯ ನಂತರವೂ ಇಎಂಐ ಕಟ್ಟಬೇಕಾಗುತ್ತದೆ. ವೈಯಕ್ತಿಕ ಸಾಲದಂತಹವುಗಳನ್ನು ತಪ್ಪಿಸಬೇಕು. ನಿಮ್ಮ ಉಳಿತಾಯವನ್ನು ಸಾಲ ತೀರಿಸಲು ಯಾವುದೇ ಕಾರಣಕ್ಕೂ ಬಳಸಬೇಡಿ.
ಆರೋಗ್ಯ ವೆಚ್ಚ: ವಯಸ್ಸು ಹೆಚ್ಚಾದಂತೆ ವೈದ್ಯಕೀಯ ವೆಚ್ಚದ ಅಗತ್ಯವೂ ಹೆಚ್ಚುತ್ತದೆ. ಆದರೆ, ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ. ಅನಿರೀಕ್ಷಿತ ಅನಾರೋಗ್ಯವು ನಿಮ್ಮ ಆರೋಗ್ಯ ನಿಧಿಯ ಮೇಲೆ ತೀವ್ರ ಪರಿಣಾಮ ಬೀರಬಹುದು. ಉದ್ಯೋಗದಾತರು ನೀಡುವ ಗುಂಪು ವಿಮಾ ಸೌಲಭ್ಯವು ಕೆಲಸವನ್ನು ತೊರೆದ ನಂತರ ಅನ್ವಯಿಸುವುದಿಲ್ಲ. ಆದ್ದರಿಂದ, ನೀವು ಇನ್ನೂ ಉದ್ಯೋಗದಲ್ಲಿರುವಾಗ ಪಾಲಿಸಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಹಿರಿಯ ನಾಗರಿಕರು ತಡಮಾಡದೆ ಆರೋಗ್ಯ ವಿಮೆ ಪಾಲಿಸಿ ತೆಗೆದುಕೊಳ್ಳುವುದು ಸೂಕ್ತ.
ಇದನ್ನು ಓದಿ:ಮುಂದಿನ ಭವಿಷ್ಯಕ್ಕಾಗಿ ಉದ್ಯೋಗದ ಆರಂಭದ ದಿನಗಳಲ್ಲೇ ಹೂಡಿಕೆ ಪ್ರಾರಂಭಿಸಿ!