ನವದೆಹಲಿ: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ನಿಂದ ಆರಂಭವಾದ ಬ್ಯಾಂಕಿಂಗ್ ಬಿಕ್ಕಟ್ಟು ಯುರೋಪ್ ತಲುಪಿದೆ. ಇದಾದ ನಂತರ ಜರ್ಮನಿಯ ದಂಡೆಯ ಮೇಲೂ ಬಿಕ್ಕಟ್ಟಿನ ಮೋಡಗಳು ಸುಳಿದಾಡುತ್ತಿವೆ. ಜರ್ಮನಿಯ ಅತಿದೊಡ್ಡ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ವಾಸ್ತವವಾಗಿ, ಶುಕ್ರವಾರ, ಡಾಯ್ಚ ಬ್ಯಾಂಕ್‌ನ ಷೇರು ಬೆಲೆಯಲ್ಲಿ 8 ಪ್ರತಿಶತದಷ್ಟು ಕುಸಿತವಾಗಿದೆ.
ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಹೂಡಿಕೆದಾರರಲ್ಲಿ ಅನಿಶ್ಚಿತತೆಯ ವಾತಾವರಣವಿದೆ. ಈ ಕಾರಣದಿಂದಾಗಿ ಶುಕ್ರವಾರ ಡಾಯ್ಚ ಬ್ಯಾಂಕ್‌ನ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಮೊದಲಿಗೆ ಅದರ ಷೇರುಗಳು 15 ಪ್ರತಿಶತದಷ್ಟು ಕುಸಿದು ನಂತರ ಸ್ವಲ್ಪ ಸುಧಾರಣೆ ಕಂಡುಬಂದಿರುವುದು ಗಮನಾರ್ಹ. ಆದರೆ ಕೊನೆಯಲ್ಲಿ ಅದರ ಷೇರುಗಳು 8 ಪ್ರತಿಶತದಷ್ಟು ಕುಸಿತದೊಂದಿಗೆ 8.54 ಯುರೋಗಳಲ್ಲಿ ಮುಚ್ಚಲ್ಪಟ್ಟವು.
ಬ್ಯಾಂಕ್ ಷೇರುಗಳೇಕೆ ಕುಸಿಯುತ್ತಿವೆ?: ಬ್ಯಾಂಕ್ ಷೇರುಗಳ ಕುಸಿತಕ್ಕೆ ಜಾಗತಿಕ ಬ್ಯಾಂಕ್‌ಗಳ ಮೇಲಿನ ಒತ್ತಡ ಮಾತ್ರ ಕಾರಣವಲ್ಲ. 2020 ಕ್ಕೆ ಹೋಲಿಸಿದರೆ ಬ್ಯಾಂಕ್‌ನ ಕ್ರೆಡಿಟ್-ಡೀಫಾಲ್ಟ್ ಸ್ವಾಪ್ ವಿಮೆಯ ವೆಚ್ಚವು ಹಲವು ಪಟ್ಟು ಹೆಚ್ಚಾಗಿದೆ. ಇದರಿಂದಾಗಿ ಬ್ಯಾಂಕ್‌ಗಳ ಷೇರುದಾರರಲ್ಲಿ ಅಪನಂಬಿಕೆ ಉಂಟಾಗಿದ್ದು, ಷೇರುಗಳ ಮಾರಾಟ ತೀವ್ರಗೊಂಡಿದೆ. ಕ್ರೆಡಿಟ್-ಡೀಫಾಲ್ಟ್ ಸ್ವಾಪ್ ವಿಮೆಯು ಡೀಫಾಲ್ಟ್ ಬದಲಿಗೆ ಬ್ಯಾಂಕ್ ಕಂಪನಿ ಅಥವಾ ಬ್ರ್ಯಾಂಡ್‌ಗೆ ನೀಡುವ ಒಂದು ರೀತಿಯ ವಿಮೆಯಾಗಿದೆ ಎಂದು ತಿಳಿದಿರಲಿ.
ಸಂಕಷ್ಟದಲ್ಲಿದೆ ಜರ್ಮನಿಯ ದೊಡ್ಡ ಬ್ಯಾಂಕ್: ಜರ್ಮನಿಯ ಆರ್ಥಿಕತೆಯಲ್ಲಿ ಡಾಯ್ಚ ಬ್ಯಾಂಕ್ ಪ್ರಮುಖ ಪಾತ್ರ ಹೊಂದಿದೆ. ಇದು ಒಟ್ಟು 1.4 ಟ್ರಿಲಿಯನ್ ಆಸ್ತಿ ಹೊಂದಿರುವ ಅತಿದೊಡ್ಡ ಬ್ಯಾಂಕ್ ಆಗಿದೆ. ಇದು ವಿಶ್ವದ ಸುರಕ್ಷಿತ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಈ ಬ್ಯಾಂಕ್ ಜರ್ಮನಿಯ ಕೆಲಸವನ್ನು ನೋಡಿಕೊಳ್ಳುವುದು ಮಾತ್ರವಲ್ಲದೇ ಇತರ ಹಲವು ದೇಶಗಳೊಂದಿಗೆ ವ್ಯವಹಾರ ಸಹ ಮಾಡುತ್ತದೆ. ಈ ವ್ಯವಹಾರದಲ್ಲಿ ಇದು ಸಾಮಾನ್ಯವಾಗಿ ಅತ್ಯಧಿಕ ಕಾರ್ಪೊರೇಟ್ ಸಾಲ ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಡಾಯ್ಚ ಬ್ಯಾಂಕ್ನಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಉಂಟಾದರೆ ಅದು ಇಡೀ ಯುರೋಪ್ ಆವರಿಸಬಹುದು.
ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾಗುವುದರೊಂದಿಗೆ ಆರಂಭವಾದ ಬ್ಯಾಂಕಿಂಗ್ ಬಿಕ್ಕಟ್ಟು ನಿಧಾನವಾಗಿ ಎಲ್ಲ ದೊಡ್ಡ ಬ್ಯಾಂಕ್ಗಳನ್ನು ಆವರಿಸುತ್ತಿದೆ. ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್ ಎಂಬ ಎರಡು ಬ್ಯಾಂಕ್‌ಗಳು ದಿವಾಳಿಯಾಗಿರುವುದರಿಂದ ಇದು 2008 ರಂತಹ ಜಾಗತಿಕ ಆರ್ಥಿಕ ಹಿಂಜರಿತದ ಆರಂಭ ಎಂಬ ಆತಂಕವಿದೆ.
ಸ್ವಿಟ್ಜರ್ಲೆಂಡ್‌ನ ಕ್ರೆಡಿಟ್ ಸ್ವಿಸ್ ಬ್ಯಾಂಕ್ ಕೂಡ ತೊಂದರೆಯಲ್ಲಿದೆ. ಈಗ ಜರ್ಮನಿಯ ದೊಡ್ಡ ಬ್ಯಾಂಕ್ ಕೂಡ ಸಂಕಷ್ಟದಲ್ಲಿದೆ. ಅದರ ಷೇರುಗಳಲ್ಲಿ ಭಾರಿ ಕುಸಿತ ಕಂಡು ಬರುತ್ತಿದೆ. ಆದ್ರೂ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಯುರೋಪಿನ ಬ್ಯಾಂಕಿಂಗ್ ವ್ಯವಸ್ಥೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಹೂಡಿಕೆದಾರರು ಭಯಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ತಲುಪಲಿದೆ ಎಂಬುದು ಕಾದು ನೋಡಬೇಕು.
ಇದನ್ನೂ ಓದಿ: ಹಣಕಾಸು ಬಿಕ್ಕಟ್ಟಿನ ಸಿಲಿಕಾನ್ ವ್ಯಾಲಿ ಬ್ಯಾಂಕ್ ಖರೀದಿಸಿದ ಫಸ್ಟ್ ಸಿಟಿಜನ್ಸ್ ಬ್ಯಾಂಕ್