ಕೋಲ್ಕತ್ತಾ (ಪಶ್ಚಿಮ ಬಂಗಾಳ): ತಾನು ಏನೇ ಮಾಡಿದರೂ ಸಮಾಜದ ಏಳ್ಗೆಗೆ ಅನುಕೂಲವಾಗಬೇಕು ಎಂಬುದು ಆಕೆಯ ಆಸೆಯಾಗಿತ್ತು. ಇದಕ್ಕಾಗಿ ಆರಂಭದಲ್ಲಿ ಖರ್ಚಿಗಾಗಿ ಒಂದಿಷ್ಟು ದುಡ್ಡು ಹಾಗು ಮಕ್ಕಳಿಗೆ ಸಹಾಯ ಮಾಡಲೆಂದು ಟ್ಯೂಷನ್ ಕೆಲಸ ಶುರು ಮಾಡ್ತಾರೆ. ಈ ಪ್ರಯತ್ನದಲ್ಲಿ ಯಶಸ್ಸು ಕೂಡಾ ಸಿಗುತ್ತದೆ. ಇದರಿಂದ ಕೈ ಸೇರಿದ ಆದಾಯವನ್ನು ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡುತ್ತಾ ಇಂದು ನೂರು ಕೋಟಿ ರೂಪಾಯಿಗೂ ಮೀರಿ ವ್ಯವಹಾರ ನಡೆಸುವ ಉದ್ಯಮ ಮುನ್ನಡೆಸುತ್ತಿದ್ದಾರೆ.
ಈ ಯಶಸ್ವಿ ಮಹಿಳೆಯ ಹೆಸರು ತ್ರಿನಾದಾಸ್. ಕೋಲ್ಕತ್ತಾ ನಿವಾಸಿ. ಇವರ ತಂದೆ ಉದ್ಯಮಿ. ಸಮಾಜಕ್ಕೆ ಸಹಾಯ ಮಾಡುವುದನ್ನು ನಾನು ತಂದೆಯನ್ನು ನೋಡಿ ಕಲಿತೆ ಎನ್ನುತ್ತಾರೆ ತ್ರಿನಾ. ತಂದೆ ಪ್ರತೀ ವಾರವೂ ಸಮೀಪದ ಹಳ್ಳಿಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಶಿಕ್ಷಣ, ವೈದ್ಯಕೀಯ ಸೇವೆಗಳನ್ನು ಜನರಿಗೆ ಒದಗಿಸುತ್ತಿದ್ದರು. ತ್ರಿನಾ ಸಹ ತಂದೆಯಂತೆ ಕೈಲಾದಷ್ಟು ಸಹಾಯ ಮಾಡಲು ಶುರು ಮಾಡಿದ್ದಾರೆ.
ಒಂದು ದಿನ ತ್ರಿನಾ ಹತ್ತಿರದ ಹಲ್ದಿಯಾ ಎಂಬ ಹಳ್ಳಿಗೆ ಭೇಟಿ ನೀಡಿದ್ದರು. ಅಲ್ಲಿ ಇಂಟರ್ ಓದುತ್ತಿದ್ದ ಮಕ್ಕಳು ತಮಗೆ ಟ್ಯೂಷನ್ ಹೇಳಿಕೊಡುವಂತೆ ಕೇಳಿದ್ದಾರೆ. ತ್ರಿನಾ ಬಿ.ಟೆಕ್ ಓದಿದವರು. ವಾರಾಂತ್ಯದಲ್ಲಿ ಬಂದು ಮಕ್ಕಳಿಗೆ ಟ್ಯೂಷನ್ ಹೇಳುತ್ತಾ, ಮಕ್ಕಳ ಪೋಷಕರಿಂದ ತನ್ನ ಖರ್ಚಿಗೆಂದು ಸ್ವಲ್ಪ ಫೀಸು ತೆಗೆದುಕೊಳ್ಳುತ್ತಿದ್ದರು. ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಬದಲಾವಣೆ, ಸಂಖ್ಯೆಯೂ ಹೆಚ್ಚತೊಡಗಿತು. ನಂತರದ ದಿನಗಳಲ್ಲಿ 'ಬಿ-ಜೀನಿಯಸ್' ಎಂಬ ಸಂಸ್ಥೆ ಹುಟ್ಟು ಹಾಕಿ ಕೆಲಸ ಮುಂದುವರಿಸಿದರು.
ಒಂದು ವರ್ಷ ಕಳೆಯುತ್ತಿದ್ದಂತೆ ಟ್ಯೂಷನ್ಗೆ ಬೇಡಿಕೆ ಹೆಚ್ಚಾಯ್ತು. ವರ್ಷದಲ್ಲಿ 1,800 ವಿದ್ಯಾರ್ಥಿಗಳು ಇವರ ಟ್ಯೂಷನ್ಗೆ ಬರಲು ಶುರು ಮಾಡಿದರು. ಇದಕ್ಕಾಗಿ ಕೆಲವು ಶಿಕ್ಷಕರನ್ನೂ ನೇಮಿಸಿದರು. ಇದೆಲ್ಲ ನಡೆದಿದ್ದು 2012ರಲ್ಲಿ. ತಿಂಗಳಿಗೆ 8-10 ಲಕ್ಷ ರೂಪಾಯಿ ಸಂಪಾದನೆ ಕೈ ಸೇರುತ್ತಿತ್ತು. ಇತರ ಹಳ್ಳಿ ಮತ್ತು ಪಟ್ಟಣಗಳಲ್ಲಿ ಫ್ರಾಂಚೈಸಿಗಳನ್ನು ಸ್ಥಾಪಿಸಿದ ತ್ರಿನಾ ಮೂರು ವರ್ಷಗಳಲ್ಲಿ ನೈಜೀರಿಯಾ, ದಕ್ಷಿಣ ಆಫ್ರಿಕಾ ಮತ್ತು ನೇಪಾಳದಂತಹ 8 ದೇಶಗಳಿಗೆ ಸೇವೆ ವಿಸ್ತರಿಸಿದರು. 2016ರಲ್ಲಿ ಎಬೋಲಾ ಕಾಯಿಲೆಯಿಂದ ಆಫ್ರಿಕಾ ಖಂಡದ ದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಯಿತು. ಆಗ ಅಲ್ಲಿನ ಮಕ್ಕಳಿಗೆ ಉಚಿತವಾಗಿ ಬೋಧನೆ ಮುಂದುವರಿಸುತ್ತಾರೆ. ಇದಕ್ಕಾಗಿ ತ್ರಿನಾ ಜಾಗತಿಕ ವಿದ್ಯಾರ್ಥಿ ಉದ್ಯಮಿ ಎಂಬುದೂ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದರು.
ಒಬಾಮರಿಂದಲೂ ಅನುದಾನ: ತ್ರಿನಾ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. 2017ರಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲು ಕೃತಕ ಬುದ್ಧಿಮತ್ತೆಯೊಂದಿಗೆ ಬೋಧನೆ (TAI) ಪ್ರಾರಂಭಿಸಿದರು. ಈ ಮೂಲಕ ಕಷ್ಟಕರ ಪರಿಕಲ್ಪನೆಗಳು ಮಾತ್ರವಲ್ಲದೆೇ ಸಮಸ್ಯೆ ಪರಿಹಾರ, ತಾರ್ಕಿಕ ಮತ್ತು ಸಾರ್ವಜನಿಕ ಭಾಷಣದಂತಹ ಅನೇಕ ಕೌಶಲ್ಯಗಳಿಗೆ ತರಬೇತಿ ನೀಡುತ್ತಿದ್ದಾರೆ.
ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್ ಮತ್ತು ಭಾರತದ ಐಐಟಿಯಂತಹ ಪ್ರಸಿದ್ಧ ಶಾಲೆಗಳಲ್ಲಿ ಓದಿದವರನ್ನು ಇಲ್ಲಿಗೆ ಉಪನ್ಯಾಸ ನೀಡಲು ಆಹ್ವಾನಿಸಲಾಗುತ್ತಿದೆ. ಇದೀಗ ಸಂಸ್ಥೆ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಲಕ್ಷ ಲಕ್ಷಾಂತರ ವಿದ್ಯಾರ್ಥಿಗಳನ್ನು ಸಂಪಾದಿಸಿದೆ. ಪ್ರಪಂಚದಾದ್ಯಂತ 130 ಕೇಂದ್ರಗಳನ್ನು ಹೊಂದಿದೆ ಮತ್ತು ಬರಾಕ್ ಒಬಾಮಾ ಅವರಿಂದಲೂ ಅನುದಾನ ಪಡೆದಿದೆ. ತ್ರಿನಾ ತನ್ನ ಸ್ನೇಹಿತರ ಜೊತೆಗೂಡಿ 'ಟ್ಯಾಲೆಂಟ್ ಲ್ಯಾಬ್ಸ್' ಆರಂಭಿಸಿದ್ದಾರೆ. ಇದು ಮಾನವ ಸಂಪನ್ಮೂಲ ಸಂಸ್ಥೆ. ಒಂದು ವರ್ಷದೊಳಗೆ ಕಂಪನಿ 20 ಕೋಟಿ ರೂಪಾಯಿ ವಹಿವಾಟು ನಡೆಸಿದೆ.
ಕೊರೊನಾ ಸಮಯದಲ್ಲಿ ಸೆಕ್ಯುರಿಟಿ ಗಾರ್ಡ್ ಮತ್ತು ಆಫೀಸ್ ಹುಡುಗರಂತಹ ಸಣ್ಣ ಉದ್ಯೋಗಿಗಳು ಹೆಚ್ಚು ಪರಿಣಾಮ ಬೀರುತ್ತಾರೆ ಎಂಬುದನ್ನು ತ್ರಿನಾ ಗಮನಿಸಿದ್ದಾರೆ. ಈ ಪೈಕಿ ಹಲವರಿಗೆ ಮರು ಉದ್ಯೋಗ ಕಲ್ಪಿಸಿದ್ದಾರೆ. ಇದೇ ಯೋಚನೆಯಿಂದ ಉದ್ಯೋಗಿಗಳ ಪೂರೈಕೆಗಿಂತ ಕಂಪನಿಗಳಿಗೆ ಸೇವೆಗಳನ್ನು ಮಾತ್ರ ಒದಗಿಸುವ 'ಗಿಗ್‌ಚೈನ್' ಪ್ರಾರಂಭಿಸಿದ್ದಾರೆ. ಈಗ ಈ ಕಂಪನಿಯ ಮೌಲ್ಯ 102 ಕೋಟಿ ರೂಗೂ ಅಧಿಕ. ತ್ರಿನಾ ಅವರ ವಯಸ್ಸು ಈಗ 32 ವರ್ಷ. ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡುತ್ತಾ ಬೆಂಬಲ ನೀಡುತ್ತಾರೆ. ತಂದೆಯ ಸಹಾಯ ಪಡೆಯದೇ ತ್ರಿನಾ ಬೆಳೆದು ಬಂದ ಹಾದಿ ಅನೇಕರಿಗೆ ಮಾದರಿ.
ಇದನ್ನೂ ಓದಿ: ಕರ್ನಾಟಕದ ಹಾಲಿ ಶಾಸಕರ ಅಪರಾಧ ಹಿನ್ನೆಲೆ, ಶಿಕ್ಷಣದ ಮಾಹಿತಿ ತಿಳಿಯಿರಿ..