ನವದೆಹಲಿ : ಸಾರಿಗೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರ್ಯಾಶ್ ಟೆಸ್ಟ್ಗಳಲ್ಲಿ ಕಾರುಗಳು ಯಾವ ರೀತಿಯ ಪ್ರದರ್ಶನ ನೀಡುತ್ತವೆ ಎಂಬುದನ್ನು ಆಧರಿಸಿ ಕಾರುಗಳಿಗೆ ಸ್ಟಾರ್ ರೇಟಿಂಗ್ ನೀಡುವ ಭಾರತ್ ಎನ್ಸಿಎಪಿ (Bharat NCAP) ನೀತಿಯನ್ನು ದೇಶದಲ್ಲಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ಭಾರತ್ ಹೊಸ ಕಾರು ಮೌಲ್ಯಮಾಪನ ಯೋಜನೆಯು ಗ್ರಾಹಕ ಕೇಂದ್ರಿತವಾಗಿರಲಿದೆ. ಸ್ಟಾರ್ ರೇಟಿಂಗ್ ಆಧರಿಸಿ ಗ್ರಾಹಕರು ತಮಗಿಷ್ಟವಾದ ಅತಿ ಹೆಚ್ಚು ಸೇಫ್ ಆಗಿರುವ ಕಾರ್ ಕೊಳ್ಳಬಹುದು. ಭಾರತದ ಒರಿಜಿನಲ್ ಇಕ್ವಿಪಮೆಂಟ್ ತಯಾರಕರು ಅತಿ ಹೆಚ್ಚು ಸುರಕ್ಷಿತವಾಗಿರುವ ವಾಹನಗಳನ್ನು ತಯಾರಿಸಲು ಈ ಯೋಜನೆಯು ಆರೋಗ್ಯಕರ ಪೈಪೋಟಿ ನಿರ್ಮಾಣ ಮಾಡಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಭಾರತೀಯ ಕಾರುಗಳಿಗೆ ಕ್ರ್ಯಾಶ್ ಟೆಸ್ಟ್ ಆಧರಿತ ಸ್ಟಾರ್ ರೇಟಿಂಗ್ ನೀಡುವುದು ಅಗತ್ಯವಾಗಿದೆ. ವಾಹನ ನಿರ್ಮಾಣದ ಗುಣಮಟ್ಟ ಹಾಗೂ ಪ್ರಯಾಣಿಕರಿಗೆ ಸುರಕ್ಷತಾ ಗುಣಮಟ್ಟದ ಖಾತರಿಗೆ ಹಾಗೂ ಭಾರತೀಯ ವಾಹನಗಳ ರಫ್ತು ಗುಣಮಟ್ಟವನ್ನು ಹೆಚ್ಚಿಸಲು ಸ್ಟಾರ್ ರೇಟಿಂಗ್ ಅತ್ಯಂತ ಮುಖ್ಯವಾಗಿದೆ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ತಿಳಿಸಿದ್ದಾರೆ.
ಭಾರತ್ ಎನ್ಸಿಎಪಿ ಟೆಸ್ಟಿಂಗ್ ಮಾನದಂಡಗಳು ಭಾರತದ ನೀತಿ-ನಿಯಮಗಳಿಗೆ ಒಳಪಟ್ಟಿವೆ. ಅಲ್ಲದೇ, ಜಾಗತಿಕ ಕ್ರ್ಯಾಶ್ ಟೆಸ್ಟ್ ಮಾನದಂಡಗಳಿಗೂ ಸಮಾನವಾಗಿರಲಿವೆ. ವಾಹನ ತಯಾರಕರು ದೇಶದಲ್ಲಿಯೇ ತಮ್ಮದೇ ಆದ ಕ್ರ್ಯಾಶ್ ಟೆಸ್ಟಿಂಗ್ ಕೇಂದ್ರಗಳನ್ನು ಆರಂಭಿಸಲು ಈ ಹೊಸ ಯೋಜನೆಯಿಂದ ಸಾಧ್ಯವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.