ನವದೆಹಲಿ: ಬಹುತೇಕ ಎಲ್ಲ ವಲಯಗಳಲ್ಲೂ ಉದ್ಯೋಗ ಕಡಿತಗಳು ನಡೆಯುತ್ತಿದ್ದು, ನೇಮಕಾತಿಗಳು ಸಹ ಕಡಿಮೆಯಾಗಿವೆ. ಇಂಥ ಸಂದರ್ಭದಲ್ಲಿ ಭಾರತದ ಬಹುತೇಕ ಉದ್ಯೋಗಿಗಳು (ಶೇ 47) ಈಗ ತಾವಿರುವ ಉದ್ಯೋಗದಲ್ಲಿಯೇ ಮುಂದುವರಿಯುವುದು ಸುರಕ್ಷಿತ ಎಂದು ಭಾವಿಸಿದ್ದಾರೆ ಎಂದು ವರದಿ ತಿಳಿಸಿದೆ. ಉದ್ಯೋಗ ಪೋರ್ಟಲ್ ಇಂಡೀಡ್ ಪ್ರಕಾರ, ಜನವರಿ-ಮಾರ್ಚ್ ಅವಧಿಯಲ್ಲಿ ಕೇವಲ 53 ಪ್ರತಿಶತದಷ್ಟು ಕಂಪನಿಗಳು ಮಾತ್ರ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಹಿಂದಿನ ತ್ರೈಮಾಸಿಕದಲ್ಲಿ (ಅಕ್ಟೋಬರ್‌ನಿಂದ ಡಿಸೆಂಬರ್ 2022) ಇದು ಶೇಕಡಾ 64 ಆಗಿತ್ತು.
ಸದ್ಯದ ಅನಿಶ್ಚಿತತೆಗಳ ನಡುವೆ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ಒಟ್ಟಾರೆಯಾಗಿ ಜಾಗರೂಕತೆಯಿಂದ ಮುಂದುವರಿಯಬೇಕೆಂಬ ಭಾವನೆಯಲ್ಲಿದ್ದಾರೆ. ಆದಾಗ್ಯೂ, BFSI ಮತ್ತು ಹೆಲ್ತ್‌ಕೇರ್‌ನಂತಹ ಕೆಲವು ಕ್ಷೇತ್ರಗಳಲ್ಲಿ ಗಮನಾರ್ಹ ನೇಮಕಾತಿಗಳು ನಡೆಯುತ್ತಿವೆ. ಈ ಕ್ಷೇತ್ರಗಳಲ್ಲಿ ಉತ್ತಮ ಭವಿಷ್ಯವಿದೆ ಎಂಬುದು ಇದರಿಂದ ಸಾಬೀತಾಗುತ್ತಿದೆ ಎಂದು ಇಂಡೀಡ್ ಇಂಡಿಯಾದ ಮಾರಾಟ ವಿಭಾಗದ ಮುಖ್ಯಸ್ಥ ಶಶಿ ಕುಮಾರ್ ಹೇಳಿದ್ದಾರೆ.
ಹೆಚ್ಚುವರಿಯಾಗಿ 2023 ರಲ್ಲಿ ಗಿಗ್ ಆರ್ಥಿಕತೆಯ ಸ್ವೀಕಾರವು ಉದ್ಯೋಗ ಮಾರುಕಟ್ಟೆಯನ್ನು ಬಲಪಡಿಸುವ ನಿರೀಕ್ಷೆಯಿದೆ. ಉದ್ಯೋಗದಾತರು ಈಗ ಈ ಪ್ರತಿಭೆಯನ್ನು ಉಳಿಸಿಕೊಳ್ಳುವ ಮತ್ತು ಆಕರ್ಷಿಸುವ ಮಾರ್ಗಗಳನ್ನು ರೂಪಿಸುವತ್ತ ಗಮನಹರಿಸಬೇಕು ಎಂದು ಶಶಿ ಕುಮಾರ್ ತಿಳಿಸಿದರು. ಶೇಕಡಾ 37 ರಷ್ಟು ಉದ್ಯೋಗಾಕಾಂಕ್ಷಿಗಳು 2023 ರಲ್ಲಿ ತಮ್ಮ ವೃತ್ತಿಜೀವನದ ಬೆಳವಣಿಗೆಗೆ ಆದ್ಯತೆ ನೀಡಲು ಬಯಸುತ್ತಿದ್ದಾರೆ. ಭಾರತದಲ್ಲಿ BFSI ವಲಯವು ಅತಿ ಹೆಚ್ಚು ನೇಮಕಾತಿಗಳಿಗೆ ಸಾಕ್ಷಿಯಾಗಿದ್ದು, ಈ ತ್ರೈಮಾಸಿಕದಲ್ಲಿ ಕ್ಷೇತ್ರದ ಕಂಪನಿಗಳ ಪೈಕಿ ಶೇಕಡಾ 71 ರಷ್ಟು ಕಂಪನಿಗಳು ನೇಮಕಾತಿ ಮಾಡಿಕೊಳ್ಳುತ್ತಿವೆ. ಹೆಲ್ತ್‌ಕೇರ್ (ಶೇ 64) ಮತ್ತು ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ (ಶೇ 57) ಗಣನೀಯವಾಗಿ ನೇಮಕಾತಿ ಮಾಡಿಕೊಂಡ ಇತರ ಎರಡು ಕ್ಷೇತ್ರಗಳಾಗಿವೆ.
ಇದಕ್ಕೆ ವ್ಯತಿರಿಕ್ತವಾಗಿ, ಮಾಧ್ಯಮ ಮತ್ತು ಮನರಂಜನೆ (ಶೇ. 49), ಐಟಿ/ಐಟಿಇಎಸ್ (ಶೇ. 29) ಮತ್ತು ಉತ್ಪಾದನಾ (ಶೇ. 39) ವಲಯಗಳು ತ್ರೈಮಾಸಿಕದಲ್ಲಿ ಕಡಿಮೆ ನೇಮಕಾತಿ ಮಾಡಿಕೊಂಡಿವೆ. ಪ್ರಸ್ತುತ ಉದ್ಯೋಗಾಕಾಂಕ್ಷಿಗಳಿಗೆ ಕಚೇರಿಯಿಂದ ಕೆಲಸ ಮಾಡುವುದು ಮೆಚ್ಚಿನ ಕೆಲಸದ ವಿಧಾನವಾಗಿ ಹೊರಹೊಮ್ಮಿದೆ ಎಂದು ಸಂಶೋಧನೆಗಳು ತೋರಿಸಿವೆ. ಶೇಕಡಾ 57 ರಷ್ಟು ಜನರು ಕಚೇರಿಯಿಂದ ಕೆಲಸ ಮಾಡಲು ಬಯಸುತ್ತಾರೆ. ಮಾರ್ಚ್ ತ್ರೈಮಾಸಿಕದಲ್ಲಿ ಸೇಲ್ಸ್ ಅಸೋಸಿಯೇಟ್ ಹುದ್ದೆಗೆ (ಎಲ್ಲ ಕಂಪನಿಗಳು ಸೇರಿ ಶೇ 41) ಅತಿ ಹೆಚ್ಚು ನೇಮಕಾತಿಗಳು ನಡೆದಿವೆ. ನಂತರದ ಸ್ಥಾನದಲ್ಲಿ ಪ್ರಾಜೆಕ್ಟ್ ಇಂಜಿನಿಯರ್ (23 ಶೇಕಡಾ) ಮತ್ತು ಮಾರ್ಕೆಟಿಂಗ್ ವಿಶ್ಲೇಷಕ (20 ಶೇಕಡಾ) ಹುದ್ದೆಗಳಿಗೆ ಹೆಚ್ಚು ನೇಮಕಾತಿ ನಡೆದಿವೆ ಎಂದು ವರದಿ ಉಲ್ಲೇಖಿಸಿದೆ.
ಅಕ್ಸೆಂಚರ್ ಇತ್ತೀಚೆಗೆ 19,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಅಲ್ಲದೆ ಕಂಪನಿಯು ಹೊಸ ಉದ್ಯೋಗಿಗಳು ಕೆಲಸಕ್ಕೆ ಸೇರಲು ಒಂದು ವರ್ಷದವರೆಗೆ ವಿಳಂಬ ಮಾಡುತ್ತಿದೆ ಎಂದು ಈಗ ಬೆಳಕಿಗೆ ಬಂದಿದೆ. ಆಕ್ಸೆಂಚರ್ ಹೊಸ ನೇಮಕಾತಿಗಳ ಪ್ರಾರಂಭ ದಿನಾಂಕಗಳನ್ನು ಬದಲಾಯಿಸುತ್ತಿದೆ. ಕಂಪನಿಯು ತನ್ನ ವ್ಯವಹಾರಕ್ಕಾಗಿ ಇದೀಗ ಅವರ ಅಗತ್ಯವಿಲ್ಲ ಎಂದು ಭಾವಿಸಿರುವುದೇ ಇದಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಉದ್ಯೋಗಿಗಳ ಯೋಗಕ್ಷೇಮಕ್ಕೆ 600 ಕೋಟಿ ಖರ್ಚು ಮಾಡಲಿದೆ PwC India!