ನವದೆಹಲಿ: ಭಾರತದಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಲ್ಲಿ 3 ಮಿಲಿಯನ್ ಡಾಲರ್ ಆರಂಭಿಕ ಹೂಡಿಕೆ ಮಾಡುವುದಾಗಿ ಇ-ಕಾಮರ್ಸ್ ದೈತ್ಯ ಅಮೆಜಾನ್ ಸೋಮವಾರ ತಿಳಿಸಿದೆ. ಏಷ್ಯಾ ಪೆಸಿಫಿಕ್ (ಎಪಿಎಸಿ) ನಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಿಗೆ ಕಂಪನಿಯು ನಿಗದಿಪಡಿಸಿದ 15 ಮಿಲಿಯನ್ ಡಾಲರ್ ನಿಧಿಯ ಭಾಗವಾಗಿ ಈ ಹೂಡಿಕೆ ಮಾಡಲಾಗುವುದು. ಭಾರತದಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಿಗಾಗಿ ನಿಧಿಯ ಎಪಿಎಸಿ ಪಾಲಿನ ಮೊದಲ 3 ಮಿಲಿಯನ್ ಡಾಲರ್ ಬಳಸಲಾಗುವುದು ಎಂದು ಅಮೆಜಾನ್ ಹೇಳಿದೆ.
"ತನ್ನ ಮೊದಲ ಯೋಜನೆಯ ಭಾಗವಾಗಿ ಅಮೆಜಾನ್ ಪಶ್ಚಿಮ ಘಟ್ಟಗಳಲ್ಲಿ ಸಮುದಾಯಗಳು ಮತ್ತು ಪರಿಸರ ಸಂರಕ್ಷಣಾ ಕಾರ್ಯಾಚರಣೆಗಳಿಗಾಗಿ ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ (ಸಿಡಬ್ಲ್ಯೂಎಸ್) ನೊಂದಿಗೆ ಕೆಲಸ ಮಾಡಲಿದೆ. ಪಶ್ಚಿಮ ಘಟ್ಟಗಳು ವಿಶ್ವದ ಅತಿದೊಡ್ಡ ಕಾಡು ಪ್ರದೇಶ ಹೊಂದಿದ್ದು, ಏಷ್ಯಾದ ಆನೆ, ಹುಲಿಗಳು ಸೇರಿದಂತೆ ಭಾರತದ ಎಲ್ಲ ವನ್ಯಜೀವಿ ಪ್ರಭೇದಗಳ ಪೈಕಿ ಶೇಕಡಾ 30 ಕ್ಕಿಂತ ಹೆಚ್ಚು ಪ್ರಭೇದಗಳಿಗೆ ಇದು ನೆಲೆಯಾಗಿದೆ" ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ವೈಲ್ಡ್ ಕಾರ್ಬನ್ ಹೆಸರಿನ ಯೋಜನೆಯನ್ನು ಆರಂಭಿಸಲು ಸಿಡಬ್ಲ್ಯೂಎಸ್ ಗೆ ಅಮೆಜಾನ್ 1 ಮಿಲಿಯನ್ ಡಾಲರ್ ನೆರವು ನೀಡಲಿದೆ. ವೈಲ್ಡ್ ಕಾರ್ಬನ್ ಯೋಜನೆಯಡಿ 10 ಸಾವಿರ ಸಂಖ್ಯೆಯ ಹಣ್ಣು ಬಿಡುವ, ಮರಮುಟ್ಟು ಮತ್ತು ಔಷಧೀಯ ಮರಗಳನ್ನು ನೆಡಲು ಮತ್ತು ನಿರ್ವಹಿಸಲು ರೈತರಿಗೆ ಸಹಾಯ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. "ಏಷ್ಯಾ-ಪೆಸಿಫಿಕ್ ಪ್ರದೇಶವು ವಿಶಾಲವಾದ ಕಾಡು ಮತ್ತು ಕರಾವಳಿ ಪರಿಸರಗಳಿಗೆ ನೆಲೆಯಾಗಿದೆ. ಆದರೆ, ಇದು ಹವಾಮಾನ ಬದಲಾವಣೆ, ಜೀವವೈವಿಧ್ಯ ನಷ್ಟ ಮತ್ತು ಭೂ ಸವಕಳಿಯಿಂದ ಹಾನಿಗೀಡಾಗುತ್ತಿದೆ." ಎಂದು ಅಮೆಜಾನ್ ಹೇಳಿದೆ.
"ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಈ ಪ್ರದೇಶವನ್ನು ಮತ್ತು ಇಲ್ಲಿನ ಜೀವವೈವಿಧ್ಯತೆ ಸಂರಕ್ಷಿಸಲು ನಮಗೆ ದೊಡ್ಡ ಪ್ರಮಾಣದ ಸ್ಥಳೀಯ ಕ್ರಮದ ಅಗತ್ಯವಿದೆ ಮತ್ತು ಇದಕ್ಕಾಗಿ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ" ಎಂದು ಅಮೆಜಾನ್ ನ ಸುಸ್ಥಿರತೆ ವಿಭಾಗದ ಜಾಗತಿಕ ಉಪಾಧ್ಯಕ್ಷ ಕಾರಾ ಹರ್ಸ್ಟ್ ಹೇಳಿದರು.
2019 ರಲ್ಲಿ ಅಮೆಜಾನ್ ದಿ 'ಕ್ಲೈಮೇಟ್ ಪ್ಲೆಡ್ಜ್' ಎಂಬ ಅಭಿಯಾನವನ್ನು ಆರಂಭಿಸಿದೆ. ಪ್ಯಾರಿಸ್ ಒಪ್ಪಂದಕ್ಕೆ 10 ವರ್ಷಗಳ ಮೊದಲು 2040 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಬಿಡುಗಡೆ ಗುರಿಯನ್ನು ತಲುಪುವುದು ಇದರ ಉದ್ದೇಶವಾಗಿದೆ. ಬ್ಲೂಪೈನ್ ಎನರ್ಜಿ, ಸಿಎಸ್ಎಂ ಟೆಕ್ನಾಲಜೀಸ್ ಇಂಡಿಯಾ, ಗೋಡಿ, ಗ್ರೀನ್ಕೊ, ಎಚ್ಸಿಎಲ್, ಇನ್ಫೋಸಿಸ್, ಮಹೀಂದ್ರಾ ಲಾಜಿಸ್ಟಿಕ್ಸ್, ಟೆಕ್ ಮಹೀಂದ್ರಾ ಮತ್ತು ಯುಪಿಎಲ್ ಸೇರಿದಂತೆ ಒಂಬತ್ತು ಭಾರತೀಯ ಕಂಪನಿಗಳು ಸೇರಿದಂತೆ 55 ಕೈಗಾರಿಕೆಗಳು ಮತ್ತು 38 ದೇಶಗಳಲ್ಲಿನ 400 ಕ್ಕೂ ಹೆಚ್ಚು ಕಂಪನಿಗಳು ಈ ಅಭಿಯಾನಕ್ಕೆ ಕೈ ಜೋಡಿಸುವುದಾಗಿ ಪ್ರತಿಜ್ಞೆಗೆ ಸಹಿ ಹಾಕಿವೆ.
2022 ರಲ್ಲಿ ಅಮೆಜಾನ್ ಭಾರತದಲ್ಲಿ ಆರು ಯುಟಿಲಿಟಿ-ಸ್ಕೇಲ್ ಯೋಜನೆಗಳನ್ನು ಪ್ರಾರಂಭಿಸಿದೆ. ಕಂಪನಿಯು 2025 ರ ವೇಳೆಗೆ ತನ್ನ ಜಾಗತಿಕ ಕಾರ್ಯಾಚರಣೆಗಳಿಗೆ ಶೇಕಡಾ 100 ರಷ್ಟು ನವೀಕರಿಸಬಹುದಾದ ಇಂಧನವನ್ನೇ ಬಳಸುವ ಹಾದಿಯಲ್ಲಿದೆ ಎಂದು ಹೇಳಿಕೊಂಡಿದೆ. ಈ ಯೋಜನೆಗಳಲ್ಲಿ ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿರುವ ಮೂರು ಪವನ-ಸೌರ ಹೈಬ್ರಿಡ್ ಯೋಜನೆಗಳು ಮತ್ತು ರಾಜಸ್ಥಾನದ ಮೂರು ಸೌರ ಫಾರ್ಮ್ ಗಳು ಸೇರಿವೆ.
ಇದನ್ನೂ ಓದಿ : ಟ್ರಂಪ್ ಮತ್ತೊಮ್ಮೆ ಅಧ್ಯಕ್ಷೀಯ ಅಭ್ಯರ್ಥಿಯಾಗುವುದಿಲ್ಲ; ನಿಕ್ಕಿ ಹ್ಯಾಲೆ