ನವದೆಹಲಿ: ವಿಮಾನಯಾನ ಸೇವೆಗೆ ಮತ್ತೊಂದು ಸಂಸ್ಥೆ ಸೇರ್ಪಡೆಯಾಗಿದೆ. ಮುಂಬೈ-ಅಹಮದಾಬಾದ್ ಮಾರ್ಗದ ನಡುವೆ ಭಾನುವಾರ ಮೊದಲ ವಿಮಾನ ಸಂಚರಿಸುವ ಮೂಲಕ ಆಕಾಸಾ ಏರ್ಲೈನ್ಸ್ ಅಧಿಕೃತವಾಗಿ ಕಾರ್ಯಾರಂಭಿಸಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿಮಾನ ಹಾರಾಟಕ್ಕೆ ಚಾಲನೆ ಕೊಟ್ಟರು.
ಆಕಾಸಾ ವಿಮಾನವು ಮೊದಲ ಹಂತದಲ್ಲಿ ಮುಂಬೈ-ಅಹಮದಾಬಾದ್ ನಗರಗಳ ನಡುವೆ ವಾರಕ್ಕೊಮ್ಮೆ ಸಂಚರಿಸಲಿದೆ. ಹೀಗೆ 28 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಆ.13 ರಿಂದ ಬೆಂಗಳೂರು ಮತ್ತು ಕೊಚ್ಚಿ ನಡುವೆ 28 ವಾರಾಂತ್ಯ ವಿಮಾನಗಳು ಸಂಚರಿಸಲಿವೆ. ತಕ್ಷಣವೇ ಜಾರಿಗೆ ಬರುವಂತೆ ಟಿಕೆಟ್ ಮಾರಾಟ ಆರಂಭಿಸಲಾಗಿದೆ. ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಆದ www.akasaair.com ಮೂಲಕ ವಿಮಾನಗಳ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು.
ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರು ಆಕಾಸಾ ಏರ್ಲೈನ್ಸ್ ಆರಂಭಿಸಿದ್ದಾರೆ. ಜುಲೈನಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ವಿಮಾನ ಹಾರಾಟವನ್ನು ಅನುಮೋದಿಸಿ, ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಿತ್ತು.
"ಅಂತಿಮವಾಗಿ ವಿಮಾನಗಳು "ಆಕಾಸಾ"ದಲ್ಲಿ ಹಾರಾಡುತ್ತಿವೆ. ಎಲ್ಲ ವಿಮಾನಗಳಂತೆಯೇ ನಾವು ಅತಿ ಸುರಕ್ಷಿತ ಮತ್ತು ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುತ್ತೇವೆ. ಇದನ್ನು ಜನರು ಸ್ವೀಕರಿಸುವುದಾಗಿ ಭಾವಿಸುತ್ತೇವೆ" ಎಂದು ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ವಿನಯ್ ದುಬೆ ಹೇಳಿದರು. ಮುಂದಿನ ನಾಲ್ಕು ವರ್ಷದಲ್ಲಿ ಸುಮಾರು 70 ವಿಮಾನಗಳನ್ನು ನಿರ್ವಹಿಸಲು ಏರ್ಲೈನ್ಸ್ ಯೋಜಿಸಿದೆ.
ಇದನ್ನೂ ಓದಿ: ಇಸ್ರೋದಿಂದ ಅತೀ ಚಿಕ್ಕ ರಾಕೆಟ್ ಉಡ್ಡಯನ ಯಶಸ್ವಿ; ಅಂತಿಮ ಹಂತದಲ್ಲಿ ದತ್ತಾಂಶ ನಷ್ಟ