ನವದೆಹಲಿ: ಬಂದರುಗಳ ನಿರ್ವಹಣೆಯಿಂದ ತನ್ನ ವ್ಯವಹಾರವನ್ನು ವಿಸ್ತರಿಸಿರುವ ಅದಾನಿ ಗ್ರೂಪ್ ಮುಂಬರುವ ದಿನಗಳಲ್ಲಿ ಪ್ರಬಲ ಬೆಳವಣಿಗೆ ನಿರೀಕ್ಷೆ ಹೊಂದಿದೆ. ಅದಾನಿ ಸಮೂಹ ಸಂಸ್ಥೆ EBITDA (ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯಕ್ಕೆ ಮುಂಚಿನ ಗಳಿಕೆ) 2ರಿಂದ 3 ವರ್ಷಗಳಲ್ಲಿ 90,000 ಕೋಟಿ ರೂ.ಗೆ ಬೆಳೆಯುವ ಗುರಿ ಹೊಂದಿದೆ. ಇದು ಬಲವಾದ ವ್ಯಾಪಾರ ಬೆಳವಣಿಗೆಯ ಮೇಲೆ ಅಂದ್ರೆ ತೆರಿಗೆ ಪೂರ್ವ ಲಾಭದಲ್ಲಿ 20 ಪ್ರತಿಶತದಷ್ಟು ಬೆಳವಣಿಗೆ ಸಾಧಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಹಿಂಡೆನ್‌ಬರ್ಗ್ ವರದಿ ವಿಚಾರ: ಅಮೆರಿಕನ್ ಶಾರ್ಟ್ ಸೆಲ್ಲರ್ ಫರ್ಮ್ ಹಿಂಡೆನ್‌ಬರ್ಗ್ ಈ ವರ್ಷದ ಆರಂಭದಲ್ಲಿ, ಜನವರಿ 24ರಂದು ಅದಾನಿ ಗ್ರೂಪ್ ಕುರಿತು ತನ್ನ ವರದಿ ಮಂಡಿಸಿತ್ತು. ಇದರಲ್ಲಿ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಷೇರುಗಳಲ್ಲಿನ ವಂಚನೆಯಂತಹ 86 ಗಂಭೀರ ಆರೋಪಗಳನ್ನು ಅದಾನಿ ಸಂಸ್ಥೆಯ ಮೇಲೆ ಮಾಡಿತ್ತು. ಈ ವರದಿಯ ನಂತರ ಅದಾನಿ ಗ್ರೂಪ್ ಭಾರಿ ನಷ್ಟ ಅನುಭವಿಸಿತ್ತು. ಈಗ ಕಂಪನಿಯು ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಹೂಡಿಕೆದಾರರ ವಿಶ್ವಾಸವನ್ನು ಮರಳಿ ಗಳಿಸಲು ಈ ತಿಂಗಳ ಅವಧಿಗೆ ಮುಂಚಿತವಾಗಿ ಗುಂಪು ಒಟ್ಟು 2.65 ಶತಕೋಟಿ ಡಾಲರ್ (ಭಾರತೀಯ ಕರೆನ್ಸಿ ಪ್ರಕಾರ 265 ಕೋಟಿ ರೂ.) ಸಾಲ ಮರುಪಾವತಿಸಿದೆ. ಇದನ್ನು ಹೂಡಿಕೆದಾರರಿಗೆ ತೋರಿಸಲು ಅದಾನಿ ಸಮೂಹವು ಮುಂದಾಗಿದೆ.
ತೆರಿಗೆ ಪೂರ್ವ ಲಾಭ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಅದಾನಿ ಸಮೂಹವು ಈಗ ವಿಮಾನ ನಿಲ್ದಾಣಗಳು, ಸಿಮೆಂಟ್, ನವೀಕರಿಸಬಹುದಾದ ಇಂಧನ, ಸೌರ ಫಲಕಗಳು, ಸಾರಿಗೆ, ಲಾಜಿಸ್ಟಿಕ್ಸ್, ವಿದ್ಯುತ್ ಪ್ರಸರಣಗಳಂತಹ ವಲಯಗಳಲ್ಲಿ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ. ಸಮೂಹದ ಹಲವಾರು ಹೊಸ ಮೂಲಸೌಕರ್ಯ ಹೂಡಿಕೆಗಳು ಮುಂಬರುವ ವರ್ಷಗಳಲ್ಲಿ ಲಾಭಗಳನ್ನು ನೀಡಲು ಪ್ರಾರಂಭಿಸುತ್ತವೆ. ಮುಂದಿನ ವರ್ಷಗಳಲ್ಲಿ ತನ್ನ EBITDA ಅನ್ನು ಶೇಕಡಾ 20ಕ್ಕಿಂತ ಹೆಚ್ಚು ಬೆಳೆಯುವ ನಿರೀಕ್ಷೆ ಇದೆ ಎಂದು ಕಂಪನಿ ತಿಳಿಸಿದೆ.
ಒಡಿಶಾ ರೈಲು ದುರಂತ- ಸಂತ್ರಸ್ತ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಅದಾನಿ : ಒಡಿಶಾದ ಭೀಕರ ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡಿದ್ದ ಸಂತ್ರಸ್ತ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅದಾನಿ ಗ್ರೂಪ್ ಮುಂದಾಗುವುದಾಗಿ ತಿಳಿಸಿತ್ತು. ಈ ಕುರಿತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಜೂನ್ 4ರಂದು ಪ್ರಕಟಿಸಿದ್ದರು. ರೈಲು ಅಪಘಾತದ ಘಟನೆಯ ಸುದ್ದಿಯಿಂದ ತಾನು ದುಃಖಿತನಾಗಿದ್ದೇನೆ. ಸಂತ್ರಸ್ತರಿಗೆ ಹಾಗೂ ಅವರ ಕುಟುಂಬಗಳಿಗೆ ಶಕ್ತಿಯನ್ನು ತುಂಬುವುದು ಹಾಗೂ ಮಕ್ಕಳಿಗೆ ಒಳ್ಳೆಯ ನಾಳೆಗಳನ್ನು ಒದಗಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಗೌತಮ್ ಅದಾನಿ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ದುರ್ಘಟನೆಯಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಸಮೂಹವು ವಹಿಸಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Stock Market: ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ ಭಾರತೀಯ ಷೇರು ಮಾರುಕಟ್ಟೆ