ಬೆಂಗಳೂರು: ವಿಧಾನಸಭೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ಗ್ರಾಮೀಣಾವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಗ್ರಾಮೀಣಾವೃದ್ಧಿ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ.
ಗ್ರಾಮ ಪಂಚಾಯಿತಿಗಳಿಗೆ ದೊರೆತಿದ್ದೇನು?: ಗ್ರಂಥಾಲಯಗಳು ಇಲ್ಲದೇ ಇರುವ 300 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲಾಗಿದೆ. ಮೂರು ವರ್ಷಗಳಲ್ಲಿ 5,213 ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ. ಉಳಿದ ಗ್ರಾಮ ಪಂಚಾಯಿತಿಗಳಲ್ಲಿ 2023ರ ಡಿಸೆಂಬರ್ ತಿಂಗಳೊಳಗೆ ಘಟಕಗಳನ್ನು ಸ್ಥಾಪಿಸಲಾಗುವುದು.
ಗ್ರಂಥ ಪಾಲಕರ ಗೌರವಧನ ಹೆಚ್ಚಳ: ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಗ್ರಂಥ ಪಾಲಕರ ಗೌರವಧನವನ್ನು 1000 ರೂ. ಹೆಚ್ಚಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು. 200 ಕೋಟಿ ರೂ. ವೆಚ್ಚದಲ್ಲಿ ಪ್ರತಿವರ್ಷ 2 ಸಾವಿರ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಮೂಲಕ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಪುನರುಜ್ಜೀವನಕ್ಕೆ ವಿಶೇಷ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮೆಗಾ ಡೈರಿ ಸ್ಥಾಪನೆಗೆ ಅನುದಾನ: ರಾಜ್ಯದಲ್ಲಿ ಹಾಲು ಉತ್ಪಾದನೆ ಮತ್ತು ಹೈನುಗಾರಿಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಮೆಗಾ ಡೈರಿ ಸ್ಥಾಪನೆಗಾಗಿ ಅನುದಾನ ಒದಗಿಸಿದೆ. ಈ ಮೂಲಕ ಗ್ರಾಮೀಣ ಭಾಗಗಳಲ್ಲಿ ಹಾಲು ಉತ್ಪಾದನೆ ಮತ್ತು ಹೈನುಗಾರಿಕೆ ಪ್ರೋತ್ಸಾಹ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಉತ್ಪಾದನೆ ಹೆಚ್ಚಿಸಲು, ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿದಿನ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾ ಡೈರಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡಲಾಗುವುದು. ಜೊತೆಗೆ ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪಿಸಲು ಸರ್ಕಾರದಿಂದ 90 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ: ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂಪಾಯಿ ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೊನೆಯ ಬಜೆಟ್ ಆಗಿರುವುದಿಂದ, ಒಟ್ಟಾರೆ ಕೃಷಿ ಹಾಗೂ ತೋಟಗಾರಿಕೆ ವಲಯಗಳಿಗೆ 9,456 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ. ಇನ್ನೇನು ವಿಧಾನಸಭಾ ಚುನಾವಣೆಯ ಸಮೀಪಿಸುತ್ತಿರುವ ಬೆನ್ನಲ್ಲೆ, ಬಿಜೆಪಿಯು ಮತದಾರರನ್ನು ತನ್ನತ್ತ ಸೆಳೆಯಲು ಪೂರಕವಾಗಿದೆ ಬಜೆಟ್.
ಸಮುದಾಯ ಆರೋಗ್ಯ ಕೇಂದ್ರ ಅಭಿವೃದ್ಧಿಗೆ ಆದ್ಯತೆ: 100 ಸಮುದಾಯ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗಾಗಿ 781 ಕೋಟಿ ರೂಪಾಯಿಯನ್ನು ಆರೋಗ್ಯ ಕ್ಷೇತ್ರಕ್ಕೆ ಅನುದಾನ ನೀಡಲಾಗಿದೆ. ಜಯದೇವ ಆಸ್ಪತ್ರೆ ಜೊತೆಗೆ 45 ಆಸ್ಪತ್ರೆ ಹಾಗೂ ಸಮುದಾಯ ಕೇಂದ್ರಗಳು ಮೇಲ್ದರ್ಜೆಗೆ ಏರಿಸಲು ಪ್ರಮುಖ ಒತ್ತು ಕೊಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಬಜೆಟ್ನಲ್ಲಿ ಐಐಟಿ ಮಾದರಿಯಲ್ಲೇ ಕೆಐಟಿಗಳನ್ನು ಉನ್ನತೀಕರಿಸಲು ವಿಶೇಷ ಒತ್ತು..