ಹೈದರಾಬಾದ್: ತೆಲಂಗಾಣದ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ. ವಾಸದ ಮನೆಯ ಪ್ಲಾಟ್, ಮನೆಗಳು ಮತ್ತು ಅಪಾರ್ಟಮೆಂಟ್ ಫ್ಲ್ಯಾಟ್ ಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 2021 - 22ರ ಹಣಕಾಸು ವರ್ಷದಲ್ಲಿ ತೆಲಂಗಾಣ ರಿಯಲ್ ಎಸ್ಟೇಟ್ ಕ್ಷೇತ್ರ 1 ಲಕ್ಷ ಕೋಟಿ ರೂಪಾಯಿಗಳ ದಾಖಲೆ ಪ್ರಮಾಣದ ವಹಿವಾಟು ನಡೆಸಿದೆ. ಕಳೆದ ಆರು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ದುಪ್ಪಟ್ಟಾಗಿರುವುದು ಗಮನಾರ್ಹ.
ಹೈದರಾಬಾದ್ ಮೆಟ್ರೊಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿ ವಲಯದಲ್ಲೇ ಅತಿ ಹೆಚ್ಚು ರಿಯಲ್ ಎಸ್ಟೇಟ್ ವಹಿವಾಟುಗಳು ನಡೆದಿವೆ. ಗ್ರೇಟರ್ ಹೈದರಾಬಾದ್ ಪ್ರದೇಶದಲ್ಲಿ ಕೃಷಿಯೇತರ ಭೂಮಿಗಳ ನೋಂದಣಿಯಿಂದಲೇ ಮೂರನೇ ಒಂದರಷ್ಟು ಆದಾಯ ಬಂದಿರುವುದು ಗಮನಿಸಬೇಕಾದ ಸಂಗತಿ. ತೆಲಂಗಾಣದ ಶೇ 80 ರಷ್ಟು ರಿಯಲ್ ಎಸ್ಟೇಟ್ ವ್ಯವಹಾರ ಹೈದರಾಬಾದ್ ಸುತ್ತಮುತ್ತಲಿನಲ್ಲಿಯೇ ಇದೆ.
ರಾಜ್ಯದ ಪತ್ರಾಂಕ ಮತ್ತು ನೋಂದಣಿ ಇಲಾಖೆಯ ಅಂಕಿ - ಅಂಶಗಳ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ 1.05 ಲಕ್ಷ ಕೋಟಿ ರೂಪಾಯಿ ಮೊತ್ತದ 7.46 ಲಕ್ಷ ಪ್ಲಾಟುಗಳು, ಮನೆಗಳು ಮತ್ತು ಫ್ಲ್ಯಾಟ್ಗಳು ಮಾರಾಟವಾಗಿವೆ. ಈ ವಹಿವಾಟುಗಳಿಂದ ಸರ್ಕಾರಕ್ಕೆ 7,560 ಕೋಟಿ ರೂಪಾಯಿ ಆದಾಯ ಬಂದಿದೆ.
ಸರ್ಕಾರ ನಿಗದಿಪಡಿಸಿದ ಮಾರುಕಟ್ಟೆ ಮೌಲ್ಯಕ್ಕಿಂತ ಶೇ 45ರಷ್ಟು ಹೆಚ್ಚು ಬೆಲೆಯಲ್ಲಿ ಆಸ್ತಿಗಳು ಮಾರಾಟವಾಗಿವೆ. ಈ ಲೆಕ್ಕಾಚಾರದ ಪ್ರಕಾರ ನೋಡಿದರೆ, ವಾಸ್ತವದಲ್ಲಿ ಈ ವಹಿವಾಟಿನ ಮೊತ್ತ ಇನ್ನೂ ಬೃಹತ್ತಾಗಿರಬಹುದು ಎಂದು ಊಹಿಸಬಹುದು. ಕಳೆದ ಆರು ವರ್ಷಗಳಲ್ಲಿ ಕೃಷಿಯೇತರ ಆಸ್ತಿಗಳ ನೋಂದಣಿ ದುಪ್ಪಟ್ಟಾಗಿದೆ ಹಾಗೂ ಸರ್ಕಾರಕ್ಕೆ ಬರುವ ಆದಾಯ ಮೂರು ಪಟ್ಟು ಹೆಚ್ಚಾಗಿದೆ.
2020-21 ರಲ್ಲಿ ಕೋವಿಡ್ ಲಾಕ್ಡೌನ್ ಕಾರಣದಿಂದ ನೋಂದಣಿ ಕಡಿಮೆಯಾಗಿದ್ದವು. ಆದರೆ, ನಂತರದ ವರ್ಷ 2021-22ರಲ್ಲಿ ದಾಖಲೆ ಮಟ್ಟದ ವಹಿವಾಟುಗಳು ನಡೆದಿವೆ. ಮನೆಗಳು ಮತ್ತು ಫ್ಲ್ಯಾಟ್ಗಳಿಗಿಂತ ಪ್ಲಾಟ್ಗಳು ಹೆಚ್ಚು ಮಾರಾಟವಾಗಿವೆ. ನೋಂದಣಿಗಳಿಂದಲೇ ಸರ್ಕಾರಕ್ಕೆ ಒಟ್ಟಾರೆ 9237 ಕೋಟಿ ರೂಪಾಯಿ ಆದಾಯ ಬಂದಿದೆ.
ಇದರಲ್ಲಿ ಪ್ಲಾಟ್, ಮನೆಗಳು ಮತ್ತು ಫ್ಲ್ಯಾಟ್ಗಳ ಮಾರಾಟ ಹಾಗೂ ಖರೀದಿಯಿಂದ 7,560 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿದೆ. ಗಿಫ್ಟ್, ಸೆಟ್ಲಮೆಂಟ್, ಜಿಪಿಎ ಮತ್ತು ಇತರ ಮೂಲಗಳಿಂದ ಉಳಿದ ಆದಾಯ ಬಂದಿದೆ. ಬರಿ ಫ್ಲ್ಯಾಟ್ಗಳ ಮಾರಾಟದಿಂದಲೇ ಸರ್ಕಾರಕ್ಕೆ 2,841 ಕೋಟಿ ರೂಪಾಯಿ ಆದಾಯ ಬಂದಿದೆ. ಅಕ್ರಮ ಬಡಾವಣೆಗಳಲ್ಲಿನ ಪ್ಲಾಟ್ಗಳ ಸಕ್ರಮ ಕೋರಿ 25 ಲಕ್ಷ ಅರ್ಜಿಗಳು ಬಂದಿವೆ.
ಇದನ್ನು ಓದಿ: Gold and silver price.. ಆಭರಣ ಖರೀದಿಸುವ ಮುನ್ನ ಇಂದಿನ ಚಿನ್ನ, ಬೆಳ್ಳಿ ದರ ತಿಳಿಯಿರಿ