ನವದೆಹಲಿ: ಸೆಪ್ಟೆಂಬರ್‌ನಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇ.10.66ಕ್ಕೆ ಇಳಿದಿದ್ದು, ಇದು ಕಳೆದ ಆರು ತಿಂಗಳಲ್ಲೇ ಕನಿಷ್ಠವಾಗಿದೆ. ಕಚ್ಚಾ ಪೆಟ್ರೋಲಿಯಂ ಬೆಲೆ ಏರಿಕೆಯಾದರೂ ಆಹಾರದ ಬೆಲೆಯನ್ನು ಮಿತಗೊಳಿಸಲು ಇದು ಸಹಕಾರಿಯಾಗಿದೆ.
ಹೋಲ್‌ಸೇಲ್ ಪ್ರೈಸ್ ಇಂಡೆಕ್ಸ್- ಡಬ್ಲ್ಯುಪಿಐ, ಹಣದುಬ್ಬರವು ಏಪ್ರಿಲ್ ಆರಂಭದಿಂದಲೂ ಸತತ ಆರನೇ ತಿಂಗಳಲ್ಲಿ ಎರಡಂಕಿಯಲ್ಲಿದೆ. ಮಾರ್ಚ್‌ನಲ್ಲಿ ಕಡಿಮೆ ಹಣದುಬ್ಬರ (ಶೇ.7.89) ದಾಖಲಾಗಿತ್ತು.
2021 ಸೆಪ್ಟೆಂಬರ್‌ನಲ್ಲಿ ಅಧಿಕ ಹಣದುಬ್ಬರದ ದರವು ಪ್ರಾಥಮಿಕವಾಗಿ ಖನಿಜ ತೈಲಗಳು, ಮೂಲ ಲೋಹಗಳು, ಆಹಾರೇತರ ವಸ್ತುಗಳು, ಆಹಾರ ಉತ್ಪನ್ನಗಳು, ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ರಾಸಾಯನಿಕಗಳು ಹಾಗೂ ರಾಸಾಯನಿಕ ಉತ್ಪನ್ನಗಳು ಇತ್ಯಾದಿಗಳ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯ, ಆಗಸ್ಟ್‌ನಲ್ಲಿ ಹಣದುಬ್ಬರ ಶೇ.11.39 ರಷ್ಟಿದ್ದರೆ, 2020ರ ಸೆಪ್ಟೆಂಬರ್‌ನಲ್ಲಿ ಶೇ 1.32 ರಷ್ಟಿತ್ತು. ಆಹಾರ ಉತ್ಪನ್ನಗಳ ಹಣದುಬ್ಬರವು ಸತತ ಐದನೇ ತಿಂಗಳಲ್ಲಿ ಇಳಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಶೇ.(-)4.69 ರಷ್ಟು ದಾಖಲಾಗಿದ್ದು, ಆಗಸ್ಟ್‌ನಲ್ಲಿ ಶೇ. (-) 1.29ರಷ್ಟು ದಾಖಲಾಗಿತ್ತು. ಮಾಂಸ ಮತ್ತು ಮೀನು ಕ್ರಮವಾಗಿ ಶೇ.9.42, ಮತ್ತು ಶೇ.5.18 ಬೆಲೆಯಲ್ಲಿ ಏರಿಕೆಯಾಗಿದೆ.
ಈರುಳ್ಳಿ ಶೇ. (-) 1.91 ಮತ್ತು ಆಲೂಗಡ್ಡೆ ಶೇ. (-) 48.95ಕ್ಕೆ ಸೇರಿದಂತೆ ತರಕಾರಿಗಳ ಹಣದುಬ್ಬರವೂ (-) 32.45 ರಷ್ಟಿತ್ತು. ಇಂಧನ ಮತ್ತು ವಿದ್ಯುತ್ ಸೆಪ್ಟೆಂಬರ್‌ನಲ್ಲಿ ಶೇ. 24.91 ಹಣದುಬ್ಬರವನ್ನು ಕಂಡಿದೆ. ಹಿಂದಿನ ತಿಂಗಳಲ್ಲಿ ಶೇ.26.09 ರಷ್ಟಿತ್ತು. ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಲ್ಲಿ ಇದು ಶೇ.43.92 ರಷ್ಟಿತ್ತು, ಹಿಂದಿನ ತಿಂಗಳಲ್ಲಿ ಶೇ.40.03 ರಷ್ಟಿತ್ತು.
ಈ ಬಗ್ಗೆ ಮಾತನಾಡಿರುವ ಇಕ್ರಾ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್, 2021ರ ಆಗಸ್ಟ್‌ಗೆ ಹೋಲಿಸಿದರೆ 2021ರ ಸೆಪ್ಟೆಂಬರ್‌ನಲ್ಲಿ ಡಬ್ಲ್ಯುಪಿಐ ಹಣದುಬ್ಬರದಲ್ಲಿನ ಸತತ ಕುಸಿತವು ಪ್ರಾಥಮಿಕ ಆಹಾರ ಪದಾರ್ಥಗಳು ಶೇ. 4.7 ರಷ್ಟು ಕೆಳಮಟ್ಟಕ್ಕೆ ಇಳಿದಿರುವುದು ಮೂಲ ಪರಿಣಾಮವು ಇಂಧನ ಮತ್ತು ವಿದ್ಯುತ್ ಹಣದುಬ್ಬರದಲ್ಲಿ ಇಳಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.