ಹೈದರಾಬಾದ್: ಬೆಳ್ಳಿಯನ್ನು ಚಿನ್ನದ ಸೋದರ ಸಂಬಂಧಿ, ಬಡವರ ಚಿನ್ನ ಎಂದೂ ಕರೆಯಲಾಗುತ್ತದೆ. ಆದರೆ, ಕಳೆದ ಕೆಲವು ವಾರಗಳಿಂದ ಚಿನಿವಾರ ಪೇಟೆಯಲ್ಲಿ ಬೆಳ್ಳಿಯ ಬೆಲೆಯು ಬಂಗಾರಕ್ಕಿಂತ ವ್ಯಾಪಕ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.
ಭಾರತದಲ್ಲಿ ಕಳೆದ ವಾರದೊಳಗೆ ಬೆಳ್ಳಿ ಪ್ರತಿ ಕೆ.ಜಿ. ಮೇಲೆ 9,000 ರೂ. ಅಥವಾ ಶೇ 17.5ರಷ್ಟು ಏರಿಕೆಯಾಗಿದೆ. ಈ ವರ್ಷದ ಮಾರ್ಚ್‌ನಲ್ಲಿನ ಮಟ್ಟಕ್ಕಿಂತ ಸುಮಾರು ಶೇ 70ರಷ್ಟು ಗಗನಕ್ಕೇರಿದೆ. ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆಯು ಗುರುವಾರದ ವಹಿವಾಟಿನಂದು ಪ್ರತಿ ಕೆ.ಜಿ. 62,400 ರೂ.ಗೆ ತಲುಪಿದೆ. ಇದು ಒಂಭತ್ತು ವರ್ಷಗಳಲ್ಲಿ ಗರಿಷ್ಠ ಮಟ್ಟದ ದರವಾಗಿದೆ.
ಅಮೂಲ್ಯ ಲೋಹ ಮತ್ತು ಕೈಗಾರಿಕಾ ಲೋಹವಾದ ಬೆಳ್ಳಿ, ಎರಡೂ ರಂಗಗಳಲ್ಲಿ ಲಾಭ ಗಳಿಸಿರುವುದರಿಂದ ಇತ್ತೀಚಿನ ಬೆಲೆಗಳಲ್ಲಿ ನಾಟಕೀಯ ಏರಿಕೆ ದಾಖಲಿಸಿದೆ. ಜಾಗತಿಕ ಕೊರೊನಾ ಸಾಂಕ್ರಾಮಿಕ, ಅಮೆರಿಕ-ಚೀನಾ ನಡುವಿನ ವ್ಯಾಪಾರ ಯುದ್ಧ ಮತ್ತು ಅನಿಶ್ಚಿತತೆಯ ನಡುವೆ ಬೆಳ್ಳಿಯ ಮೇಲಿನ ಹೂಡಿಕೆ ಹೆಚ್ಚಾಗಿದೆ. ಆರಂಭದಲ್ಲಿ ಚಿನ್ನದ ಟ್ರ್ಯಾಕಿಂಗ್ನಿಂದಾಗಿ ಬೆಳ್ಳಿ ಕೂಡ ಲಾಭ ಮಾಡಿಕೊಂಡಿದೆ. ಭಾರತದ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ 10 ಗ್ರಾಂ. ಚಿನ್ನ ಇತ್ತೀಚೆಗೆ 50,700 ರೂ. ದಾಟಿದೆ.
ಸೌರ ಫಲಕಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಬಳಸಲಾಗುವ ಬೆಳ್ಳಿ, ಕೈಗಾರಿಕಾ ಬೇಡಿಕೆಯಲ್ಲಿ ವೇಗ ಪಡೆದಿದೆ. ಮಂಗಳವಾರದಂದು 27 ಯುರೋಪಿಯನ್ ಯೂನಿಯನ್ ರಾಷ್ಟ್ರಗಳ ನಾಯಕರು ವಿಶ್ವದ ಅತಿದೊಡ್ಡ ಗ್ರೀನ್ ಉತ್ತೇಜಕ ಪ್ಯಾಕೇಜ್ ಒಂದನ್ನು ಘೋಷಿಸಿದರು.
ಇಯು ಸದಸ್ಯರು ಈ ಪ್ಯಾಕೇಜ್‌ನಲ್ಲಿ ಹವಾಮಾನ ಬದಲಾವಣೆಯ ವಿರುದ್ಧ 630 ಬಿಲಿಯನ್ ಡಾಲರ್ ಖರ್ಚು ಮಾಡಲು ಮೀಸಲಿಟ್ಟರು. ಇದರ ನಡುವೆ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ತನ್ನ 2 ಟ್ರಿಲಿಯನ್ ಡಾಲರ್ ಯೋಜನೆಯ ಕ್ಲೀನ್ ಎನರ್ಜಿಗಾಗಿ ಘೋಷಿಸಿದ್ದಾರೆ. ಇವೆಲ್ಲವೂ ಸೌರ ಫಲಕಗಳು ಕೇಂದ್ರಿತ ಯೋಜನೆಗಳಾಗಿವೆ.
ಬೆಳ್ಳಿ, ದ್ಯುತಿವಿದ್ಯುಜ್ಜನಕ ಕೋಶಗಳ ಉತ್ಪಾದನೆಯಲ್ಲಿ ಪ್ರಮುಖ ಅಂಶವಾಗಿದೆ. ಇದನ್ನು ಸೌರ ಫಲಕ ಅಥವಾ ವಾಹನ ಘಟಕಗಳಲ್ಲಿ ಬಳಸಲಾಗುತ್ತದೆ. ಹಸಿರು ಇಂಧನದ ತಂತ್ರಜ್ಞಾನ ವಿಕಸನ ಮತ್ತು ವಾಹನ ಉದ್ಯಮದಲ್ಲಿ ಹೆಚ್ಚುತ್ತಿರುವ ವಿದ್ಯುದೀಕರಣವು ಈ ಲೋಹಕ್ಕೆ ವ್ಯಾಪಕ ಬೇಡಿಕೆಯನ್ನು ತರುತ್ತಿದೆ ಎಂದು ವಿಶ್ವಾದ್ಯಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಿನ್ನದ ಬೆಲೆಯಲ್ಲಿನ ದೃಢತೆ, ಕೋವಿಡ್-19 ಲಸಿಕೆ ಮತ್ತು ಅಮೆರಿಕ ಡಾಲರ್ ದುರ್ಬಲತೆಯ ನಡುವೆ ವಿಶ್ವದಾದ್ಯಂತ ಕೈಗಾರಿಕಾ ಚಟುವಟಿಕೆಗಳ ಪುನರಾರಂಭದಲ್ಲಿ ಬೆಳ್ಳಿ ಪ್ರಮುಖ ಪಾತ್ರ ವಹಿಸಿದೆ. ಇತ್ತೀಚಿನ ವಹಿವಾಟಿನ ಅವಧಿಗಳಲ್ಲಿ ಬೆಳ್ಳಿ ಬೆಲೆ ರೇಸಿನಲ್ಲಿದೆ ಎನ್ನುತ್ತಾರೆ ಏಂಜಲ್ ಬ್ರೋಕಿಂಗ್‌ನ ಸರಕು ಮತ್ತು ಕರೆನ್ಸಿಗಳ ಸಹಾಯಕ ಉಪಾಧ್ಯಕ್ಷ (ಸಂಶೋಧನೆ) ಪ್ರಥಮೇಶ್ ಮಲ್ಯ.
ಐಷೇರ್ಸ್ ಇಟಿಎಫ್ ಟ್ರಸ್ಟ್‌ನಲ್ಲಿ ಬೆಳ್ಳಿಯ ಹೂಡಿಕೆಯ ಬೇಡಿಕೆಯ ಏರಿಕೆ ಸ್ಪಷ್ಟವಾಗಿದೆ. ಇದರಲ್ಲಿ ಹಿಡುವಳಿಗಳ ದಾಖಲೆಯ ಗರಿಷ್ಠ 16,379.08 ಟನ್‌ಗಳಷ್ಟಿದೆ. ಇದು ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಈ ವರ್ಷ ಬೆಳ್ಳಿ ಉತ್ಪಾದನೆಯು ಸ್ಥಗಿತಗೊಂಡಿದೆ. ನಿರ್ಮಾಣ ವಿಳಂಬ ಮತ್ತು ಸಾಮಾಜಿಕ ಅಂತರದ ಕ್ರಮಗಳು ಬೆಳ್ಳಿಯ ಗಣಿಗಾರಿಕೆಯ ಕುಸಿತಕ್ಕೆ ಕಾರಣವಾಗಿವೆ. ವಾರ್ಷಿಕ ಜಾಗತಿಕ ಬೆಳ್ಳಿ ಉತ್ಪಾದನೆಯ ಶೇ 65.8ರಷ್ಟು ಏಪ್ರಿಲ್ 27ರವರೆಗೆ ಸ್ಥಗಿತಗೊಂಡಿದೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ.
ತಾಂತ್ರಿಕ ಅಂಶಗಳು
ಬೆಳ್ಳಿ ಬೆಲೆ ರೇಸ್ನಲ್ಲಿ ಮೂಲಭೂತ ಕಾರಣಗಳಲ್ಲದೇ ಇತರ ತಾಂತ್ರಿಕ ಅಂಶಗಳೂ ಇವೆ. ಬೆಳ್ಳಿ ಒಂದು ಸರಕು. ಅದು ಕೈಗಾರಿಕಾ ಉದ್ದೇಶಗಳಿಗಾಗಿ ಹೆಚ್ಚು ಬಳಕೆಯಾಗುತ್ತದೆ. ಬೆಳ್ಳಿಯ ಬೆಲೆಯಲ್ಲಿ ಇತ್ತೀಚಿನ ರ್ಯಾಲಿಯಲ್ಲಿ ಏರಿಕೆಯಾಗಿದೆ (ಪ್ರತಿ ಔನ್ಸ್ಗೆ 18 ಡಾಲರ್ಗೂ ಅಧಿಕ). ಕೇಂದ್ರ ಬ್ಯಾಂಕ್ಗಳು ಕ್ರಮೆಣ ಬೆಳ್ಳಿಯನ್ನು ಗಣನೆಗೆ ತೆಗೆದುಕೊಂಡು, ಸುಲಭ ಹಣದ ನೀತಿಯಡಿ (ಅಮೆರಿಕ, ಯುರೋಪ್, ಏಷ್ಯಾ, ಜಪಾನ್) ಸಿಲ್ವರ್ ಹಿಂದೆ ಬೆನ್ನಟ್ಟುತ್ತಿವೆ. ಪೇಟೆಯಲ್ಲಿ ಬೆಳ್ಳಿ ತನ್ನ ಪಾಲನ್ನು ಅತ್ಯಂತ ವೇಗವಾಗಿ ಪಡೆಯುತ್ತಿದೆ ಎಂಬುದು ಮಲ್ಯ ಅವರ ವಿಶ್ಲೇಷಣೆ.
ಗೋಲ್ಡ್-ಟು- ಸಿಲ್ವರ್ ಅನುಪಾತವು ಈಗಲೂ ಬೆಳ್ಳಿಯೇ ಅನುಕೂಲಕರ ಎಂದು ಹೂಡಿಕೆದಾರರು ಭಾವಿಸಿದ್ದಾರೆ. ಚಿನ್ನದಿಂದ ಬೆಳ್ಳಿಯ ಅನುಪಾತ ಒಂದು ಔನ್ಸ್ ಚಿನ್ನ ಖರೀದಿಸಲು ತೆಗೆದುಕೊಳ್ಳುವ ಬೆಳ್ಳಿಯ ಔನ್ಸ್ ಸಂಖ್ಯೆ ಪ್ರತಿನಿಧಿಸುತ್ತದೆ. ಇದರರ್ಥ ಬೆಳ್ಳಿ ಚಿನ್ನಕ್ಕಿಂತ ಅಗ್ಗದ ಬೆಲೆಗೆ ಲಭ್ಯವಿದೆ ಎಂಬುದು.
ಚಿನ್ನದಿಂದ ಬೆಳ್ಳಿಯ ಅನುಪಾತ ಬುಧವಾರ ಶೇ 83ರಷ್ಟಿತ್ತು. ಮಾರ್ಚ್‌ನಲ್ಲಿ 120 ಮಟ್ಟದಿಂದ ಇಳಿದಿದ್ದರೂ ದೀರ್ಘಾವಧಿಯ ಸರಾಸರಿ 66ಕ್ಕೆ ಹೋಲಿಸಿದರೆ ಇನ್ನೂ ಹೆಚ್ಚಾಗಿದೆ. ಇದು ಬೆಳ್ಳಿಯ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ ಸೂಚಿಸುತ್ತದೆ.
ಮುಂಬರುವ ವಾರಗಳಲ್ಲಿ ಬೆಲೆಯ ಆವೇಗ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ. ದೀಪಾವಳಿಯವರೆಗೆ ಬೆಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ 67,000 ರೂ.ಗಳವರೆಗೆ ವಿಸ್ತರಿಸಬಹುದು. ಅಂತಿಮವಾಗಿ ಹಿಂದಿನ ಗರಿಷ್ಠ 74,000 ರೂ.ಗಳತ್ತ ಸಾಗಬಹುದು ಎಂಬುದು ಮಲ್ಯ ಅವರ ಅಭಿಮತ.