ನವದೆಹಲಿ: ಸಗಟು ಬೆಲೆ ಸೂಚ್ಯಂಕದ (ಡಬ್ಲ್ಯುಪಿಐ) 2020ರ ಜನವರಿಯಲ್ಲಿ ತಿಂಗಳಲ್ಲಿ ಸಗಟು ಹಣದುಬ್ಬರ ಶೇ. 3.1ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಅಧಿಕೃತ ಅಂಕಿಅಂಶಗಳು ತಿಳಿಸಿವೆ.
2019ರ ಜನವರಿಯಲ್ಲಿನ ಬೆಲೆಗಳಿಗೆ ಹೋಲಿಸಿದರೆ 2020ರ ಜನವರಿಯಲ್ಲಿ ಶೇ. 3.1ರಷ್ಟು ಏರಿಕೆಯಾಗಿದೆ. 2019ರ ಡಿಸೆಂಬರ್ ಮಾಸಿಕದಲ್ಲಿ ಡಬ್ಲ್ಯುಪಿಐ ಶೇ. 2.59ರಷ್ಟಿತ್ತು. 2019ರ ಜನವರಿಯಲ್ಲಿ ಇದು ಶೇ. 2.76ರಷ್ಟಾಗಿತ್ತು.
ದ್ವಿದಳ ಧಾನ್ಯಗಳು, ಆಲೂಗಡ್ಡೆ, ಈರುಳ್ಳಿ ಮತ್ತು ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ 2020ರ ಜನವರಿಯಲ್ಲಿ ಆಹಾರ ಪದಾರ್ಥಗಳ ದರದಲ್ಲಿ ಶೇ. 11.51ರಷ್ಟು ಏರಿಕೆಯಾಗಿದೆ.
ತಯಾರಿಕ ಉತ್ಪನ್ನಗಳು ಡಬ್ಲ್ಯುಪಿಐನಲ್ಲಿ ಶೇ. 64.23ರಷ್ಟು ಹೊಂದಿವೆ. ಈ ಸೂಚ್ಯಂಕವು ಹಿಂದಿನ ತಿಂಗಳಲ್ಲಿ ಶೇ. 0.4ರಷ್ಟು ಏರಿಕೆಯಾಗಿ, ಶೇ. 118 ರಿಂದ 118.5ಕ್ಕೆ ತಲುಪಿದೆ.
ಕಳೆದ ಒಂಬತ್ತು ತಿಂಗಳಲ್ಲಿ ಸಗಟು ಹಣದುಬ್ಬರು ಜನವರಿ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. 2019ರ ಏಪ್ರಿಲ್ನಲ್ಲಿ ಡಬ್ಲ್ಯುಪಿಐ ಶೇ. 3.24ರಷ್ಟು ಏರಿಕೆಯಾಗಿತ್ತು.
ಇತ್ತೀಚೆಗೆ ಬಿಡುಗಡೆಯಾದ ಗ್ರಾಹಕ ಬೆಲೆ ಸೂಚ್ಯಂಕವು 2020ರ ಜನವರಿಯಲ್ಲಿ ಶೇ. 7.59 ರಷ್ಟಿತ್ತು. ಇದು 2014ರ ಮೇ ತಿಂಗಳಲ್ಲಿ ಗರಿಷ್ಠ 8.33 ರಷ್ಟಿತ್ತು. ಈ ಬಳಿಕ ಜನವರಿಯಲ್ಲಿ ಗರಿಷ್ಠ ಮಟ್ಟ ತಲುಪಿದೆ.