ವಾಷಿಂಗ್ಟನ್: ವಿಶ್ವವ್ಯಾಪಿ ಷೇರು ಮಾರುಕಟ್ಟೆಗಳು ಮತ್ತೆ ಕುಸಿದಿದ್ದು, ಕರೊನಾ ವೈರಸ್ ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪ್ರಮಾಣದ ಹಾನಿ ಉಂಟುಮಾಡುತ್ತಿದೆ. 2011ರ ಬಳಿಕ ಇದೇ ಮೊದಲ ಬಾರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಕುಸಿತವಾಗಿದೆ. ಇವತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸೂಚ್ಯಂಕ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲೇ ಬರೋಬ್ಬರಿ ಸಾವಿರ ಅಂಶಗಳಷ್ಟು ಕುಸಿದು ಹೂಡಿಕೆದಾರರು 5 ಲಕ್ಷ ಕೋಟಿ ರೂ ಕಳೆದುಕೊಳ್ಳುವಂತೆ ಮಾಡಿತು!
ಇದು ಕೇವಲ ಭಾರತದ ಕಥೆಯಷ್ಟೇ! ಅಮೆರಿಕದ ಸ್ಟಾಕ್ ಮಾರುಕಟ್ಟೆಯ ಮೇಲೂ ಕರೊನಾ ಕೆಟ್ಟ ಪ್ರಭಾವ ಬೀರಿದ್ದು ಎಸ್&ಪಿ 500 ಸೂಚ್ಯಂಕ ಕುಸಿತ ಕಂಡಿದೆ. ಇಲ್ಲಿ ಷೇರುಗಳ ಮಾರಾಟ ಪ್ರಮಾಣವು ಶೇ.4.4 ರಷ್ಟು ಇಳಿದಿದೆ.
ಅಮೆರಿಕದ ಡೌ ಜೋನ್ಸ್ ಸೂಚ್ಯಂಕ ಸುಮಾರು 1,200 ಅಂಕಗಳಷ್ಟು ಕುಸಿತ ಕಂಡಿದೆ. ಎಸ್ & ಪಿ 500 ಇದೀಗ ವಾರದ ಹಿಂದಿನಿಂದಲೂ ಸಾರ್ವಕಾಲಿಕವಾಗಿ ಗರಿಷ್ಠ ಮಟ್ಟದಿಂದ ಶೇ 12 ರಷ್ಟು ಕುಸಿದಿದೆ. ಅನೇಕ ವರ್ಷಗಳ ಬಳಿಕ ಇತಿಹಾಸ ಕುಸಿತ ಕಂಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
2008ರ ಆರ್ಥಿಕ ಹಿಂಜರಿತದ ನಂತರ ಒಂದು ವಾರದಲ್ಲಿ ಜಾಗತಿಕ ಮಾರುಕಟ್ಟೆಗಳು ಈ ಮಟ್ಟದಲ್ಲಿ ಕುಸಿದಿರುವುದು ಇದೇ ಮೊದಲು ಎಂದು ವಿಶ್ಲೇಷಕರು ಹೇಳುತ್ತಾರೆ.
ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರಗಳ ಕಡಿತ ಮತ್ತು ಯುಎಸ್-ಚೀನಾ ವಾಣಿಜ್ಯ ಸಮರ ಜನವರಿಯಲ್ಲಿ ಪ್ರಾಥಮಿಕ ಒಪ್ಪಂದಕ್ಕೆ ಬಂದ ನಂತರ ಕಂಪನಿಯ ಲಾಭಗಳಿಕೆಗೆ ಕಡಿಮೆ ಅಪಾಯ ಎಂಬ ವಿಶ್ವಾಸದಲ್ಲಿ ಹೂಡಿಕೆದಾರರಿದ್ದರು. ಆದ್ರೆ ಏಕಾಏಕಿ ಮಾರುಕಟ್ಟೆ ಕುಸಿತದಿಂದ ಹೂಡಿಕೆದಾರರು ಇದೀಗ ದಿವಾಳಿಯತ್ತ ಕಾಲಿಡುತ್ತಿದ್ದಾರೆ.
ಕೊರೊನಾ ವೈರಸ್ ಭೀತಿಯೇ ಈ ಪರಿ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿನಿಂದ ಬಲಿಯಾಗುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿರುವುದು ಹೂಡಿಕೆದಾರರನ್ನು ತಲ್ಲಣಗೊಳಿಸಿದೆ. ಚೀನಾದ ಅನೇಕ ಕಡೆ ಬಹಳಷ್ಟು ವಿದೇಶಿ ಕಂಪನಿಗಳನ್ನು ಮುಚ್ಚಲಾಗಿದೆ. ಈ ಕಂಪನಿಗಳಲ್ಲಿ ಉತ್ಪಾದನೆ ಬಹುತೇಕ ನಿಂತುಹೋಗಿದೆ. ಚೀನಾದ ಉತ್ಪನ್ನಗಳನ್ನು ನಂಬಿಕೊಂಡಿರುವ ಹಲವು ರಾಷ್ಟ್ರಗಳಿಗೂ ಹೊಡೆತಬೀಳುತ್ತಿದೆ. ಹೀಗಾಗಿ, ಷೇರುಪೇಟೆಯ ಹೂಡಿಕೆದಾರರು ಗಾಬರಿಗೊಂಡು ಆತುರಾತುರವಾಗಿ ತಮ್ಮ ಷೇರುಗಳು ಮತ್ತು ಹೂಚಿಕೆಯನ್ನು ಹಿಂಪಡೆಯುತ್ತಿದ್ದಾರೆ.
ಚೀನಾ ದೇಶಕ್ಕೆ ತೆರಳದಂತೆ ತನ್ನ ಪ್ರಜೆಗಳಿಗೆ ಅನೇಕ ದೇಶಗಳು ಪ್ರಯಾಣ ನಿರ್ಬಂಧ ವಿಧಿಸಿವೆ. ಚೀನಾದಲ್ಲಿ ಮಾರಣಾಂತಿಕ ವೈರಸ್ ಹಾವಳಿ ಮಿತಿಮೀರಿ ಹರಡುತ್ತಿದ್ದು,ಜಾಗತಿಕ ಆರ್ಥಿಕ ಮುಗ್ಗಟ್ಟು ಉಲ್ಬಣಗೊಳ್ಳುತ್ತಿದೆ. ತೈಲ ಬೆಲೆಗಳಲ್ಲಿ ಭಾರಿ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುವ ಸಂಭವವಿದೆ.