ಮುಂಬೈ: ದುರ್ಬಲ ಆರ್ಥಿಕ ಅನಿಶ್ಚಿತತೆಯ ಮಧ್ಯೆ ಕೆಲ ಸಮಯದವರೆಗೆ ಚಿನ್ನದ ಫ್ಯೂಚರ್ ಬೆಲೆ 50,000 ರೂ.ಗಿಂತಲೂ ಹೆಚ್ಚಾಗಿತ್ತು. ಈಗ ಇಳಿಕೆಯತ್ತ ಮುಖ ಮಾಡಿದ್ದು, ಕೊರೊನಾ ವೈರಸ್ ಲಸಿಕೆಗಳ ಬಗೆಗಿನ ಆಶಾವಾದದಿಂದಾಗಿ 49,000 ರೂ.ಗಿಂತ ಕಡಿಮೆ ಧಾರಣೆಗೆ ಇಳಿಕೆ ಆಗಿದೆ.
ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ನಲ್ಲಿ (ಎಂಸಿಎಕ್ಸ್) ಡಿಸೆಂಬರ್‌ನ ಚಿನ್ನದ ಒಪ್ಪಂದ ಪ್ರಸ್ತುತ 10 ಗ್ರಾಂ.ಗೆ 48,975 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ವಹಿವಾಟಿನ ಅಂತ್ಯಕ್ಕಿಂತ 505 ರೂ. ಅಥವಾ ಶೇ 1.02ರಷ್ಟು ಕಡಿಮೆಯಾಗಿದೆ.
ಜೊತೆಗೆ ಬೆಳ್ಳಿಯ ದೇಶೀಯ ಫ್ಯೂಚರ್ ದರ ಮಂಗಳವಾರ ತನ್ನ ಕೆಳಮುಖ ಪ್ರವೃತ್ತಿ ಮುಂದುವರೆಸಿದೆ. ಎಂಸಿಎಕ್ಸ್‌ನ ಡಿಸೆಂಬರ್ ಒಪ್ಪಂದವು ಪ್ರಸ್ತುತ ಪ್ರತಿ ಕೆ.ಜಿ.ಗೆ 59,825 ರೂ.ಗಳಷ್ಟಿದೆ. ಇದು ಹಿಂದಿನ ಅಂತ್ಯಕ್ಕಿಂತ 700 ರೂ ಅಥವಾ ಶೇ 1.16ರಷ್ಟು ಕಡಿಮೆಯಾಗಿದೆ.
ಗೂಳಿಯ ನಾಗಾಲೋಟಕ್ಕೆ ಹಳೆಯ ದಾಖಲೆ ಪುಡಿಪುಡಿ: ಹೊಸ ಎತ್ತರಕ್ಕೇರಿದ ಸೆನ್ಸೆಕ್ಸ್, ನಿಫ್ಟಿ!
ಏಂಜಲ್ ಬ್ರೋಕಿಂಗ್ ಲಿಮಿಟೆಡ್‌ನ ಸರಕು ಮತ್ತು ಕರೆನ್ಸಿ ಸಂಶೋಧನೆಯ ಡಿವಿಪಿ ಅನುಜ್ ಗುಪ್ತಾ ಮಾತನಾಡಿ, ಜಾಗತಿಕ ಈಕ್ವಿಟಿ ಮಾರುಕಟ್ಟೆಯಲ್ಲಿನ ಚೇತರಿಕೆ ಮತ್ತು ಕೊರೊನಾ ವೈರಸ್ ಲಸಿಕೆಯ ಸಕರಾತ್ಮಕ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈ ಕುಸಿತ ಕಂಡುಬಂದಿದೆ ಎಂದು ಹೇಳಿದರು.
ಈ ತಿಂಗಳಲ್ಲಿ ಚಿನ್ನದ ಇಟಿಎಫ್ ಹಿಡುವಳಿಯು 1 ಮಿಲಿಯನ್ ಔನ್ಸ್ಗಿಂತಲೂ ಕಡಿಮೆಯಾಗುತ್ತಿದೆ. ಚಿನ್ನ ಮತ್ತು ಬೆಳ್ಳಿಯ ಪ್ರವೃತ್ತಿ ಈಗ ಕಡಿಮೆಯಾಗಿದೆ. ಇದರ ಮೇಲಿನ ಸುರಕ್ಷಿತ ಧಾಮದ ಬೇಡಿಕೆಯ ನಿರೀಕ್ಷೆಯು ಮಂಕಾಗಬಹುದು ಎಂದರು.