ಲಂಡನ್: ಉಕ್ರೇನ್ ವಿರುದ್ಧ ಕಳೆದ 13 ದಿನಗಳಿಂದ ಯುದ್ಧ ಮಾಡುತ್ತಿರುವ ರಷ್ಯಾ ಮೇಲೆ ಅಮೆರಿಕ, ಬ್ರಿಟನ್ ಸೇರಿ ಹಲವು ದೇಶಗಳು, ಅಂತಾರಾಷ್ಟ್ರೀಯ ಕಂಪನಿಗಳು ಘೋಷಿಸುತ್ತಿರುವ ನಿರ್ಬಂಧಗಳ ಸರಣಿ ಮುಂದುವರೆದಿದೆ.
ಇಂಧನ ಪೂರೈಕೆಯ ಜಾಗತಿಕ ದೈತ್ಯ ಶೆಲ್ ಕಂಪನಿ ಕೂಡ ರಷ್ಯಾದಿಂದ ತೈಲ ಹಾಗೂ ನೈಸರ್ಗಿಕ ಅನಿಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ರಷ್ಯಾದೊಂದಿಗೆ ತನ್ನ ಸಂಬಂಧಗಳನ್ನು ಕಡಿದುಕೊಳ್ಳಲು ಕಂಪನಿ ನಿರ್ಧರಿಸಿದೆ.
ಅಂತಾರಾಷ್ಟ್ರೀಯ ಒತ್ತಡದ ಮಧ್ಯೆ ರಷ್ಯಾದಲ್ಲಿ ತನ್ನ ಸೇವಾ ಕೇಂದ್ರಗಳು, ವಿಮಾನ ಇಂಧನಗಳು ಹಾಗೂ ಇತರೆ ಕಾರ್ಯಾಚರಣೆಗಳನ್ನು ನಿಲ್ಲಿಸುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ನೈಸರ್ಗಿಕ ಅನಿಲ ಹಾಗೂ ದ್ರವೀಕೃತ ನೈಸರ್ಗಿಕ ಅನಿಲ ಸೇರಿದಂತೆ ರಷ್ಯಾದ ಎಲ್ಲಾ ಹೈಡ್ರೋಕಾರ್ಬನ್‌ಗಳಿಂದ ಹಂತ ಹಂತವಾಗಿ ಎಲ್ಲಾ ಸೇವೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಕಂಪನಿ ವಿವರಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರದೊಂದಿಗೆ ತೈಲ ಖರೀದಿ ವ್ಯವಹಾರ ಮುಂದುವರೆಸುತ್ತಿದ್ದ ಶೆಲ್ ಕಂಪನಿಯನ್ನು ಉಕ್ರೇನ್ ವಿದೇಶಾಂಗ ಸಚಿವರು ಟೀಕಿಸಿದ್ದರು.
ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಶೆಲ್ ಸೇರಿ ಇತರೆ ಕಂಪನಿಗಳ ಮೇಲೆ ಒತ್ತಡ ಹೇರುವಂತೆ ಸಾರ್ವಜನಿಕರಿಗೆ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಟ್ವೀಟ್ ಮೂಲಕ ಕರೆ ನೀಡಿದ್ದರು. ಅಲ್ಲದೆ, ರಷ್ಯಾದ ತೈಲವು ನಿಮಗೆ ಉಕ್ರೇನ್ ರಕ್ತದ ವಾಸನೆಯನ್ನು ನೀಡುವುದಿಲ್ಲವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ಇದಾಗ ಕೆಲವೇ ದಿನಗಳಲ್ಲಿ ಶೆಲ್ ರಷ್ಯಾ ಸರ್ಕಾರ ವಿರುದ್ಧ ತನ್ನ ವ್ಯಾಪಾರ ಕಡಿತಕ್ಕೆ ಮುಂದಾಗಿದೆ.
ಅಮೆರಿಕ, ಬ್ರಿಟನ್ ಮತ್ತು ಯುರೋಪಿಯನ್ ಯೂನಿಯನ್ ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಆದರೆ ಜಾಗತಿಕ ಇಂಧನ ಸರಬರಾಜಿನ ಮೇಲೆ ಬೀರುವ ಪರಿಣಾಮದ ಕಾರಣದಿಂದ ರಷ್ಯಾದಿಂದ ತೈಲ ಹಾಗೂ ಅನಿಲ ಆಮದುಗಳಿಗೆ ನಿಷೇಧ ಹೇರಿರಲಿಲ್ಲ. ಆದ್ರೀಗ ತೈಲ ಆಮದು ಮಾಡಿಕೊಳ್ಳುವುದಕ್ಕೆ ಬೈಡನ್ ಸರ್ಕಾರ ನಿರ್ಬಂಧ ವಿಧಿಸಿದೆ.
ಇದನ್ನೂ ಓದಿ: ತೈಲ ಖರೀದಿ ನಿರ್ಬಂಧಿಸಿದರೆ ಬ್ಯಾರೆಲ್ ತೈಲ 300 ಡಾಲರ್‌ಗೆ ಏರಿಕೆ ಆಗುತ್ತೆ: ರಷ್ಯಾ ಎಚ್ಚರಿಕೆ