ಮುಂಬೈ: ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಲಸಿಕೆ ಶೇ 90ರಷ್ಟು ಯಶಸ್ಸು ಸಾಧಿಸಿದ್ದಾಗಿ ಅಮೆರಿಕದ ಫೈಜರ್ ಮತ್ತು ಬಯೋ ಆ್ಯಂಡ್ ಟೆಕ್ ಕಂಪನಿಗಳು ಜಂಟಿ ಹೇಳಿಕೆಯು ದೇಶಿ ಷೇರುಪೇಟೆಯು ದಾಖಲೆಯ ಏರಿಕೆ ಕಂಡಿದೆ.
ಸತತ ಏಳನೇ ವಹಿವಾಟಿನದ ಅವಧಿಯಲ್ಲಿ ಹೂಡಿಕೆದಾರರು ತಮ್ಮ ಲಾಭದ ಹಾದಿಯನ್ನು ವಿಸ್ತರಿಸಿಕೊಂಡಿದ್ದಾರೆ. ಈಕ್ವಿಟಿ ಸೂಚ್ಯಂಕಗಳು ಮಂಗಳವಾರದ ವಹಿವಾಟಿನಂದು ಸತತ ಎರಡನೇ ಸೇಷನ್ನಲ್ಲಿ ದಾಖಲೆಯ ಹೊಸ ಎತ್ತರಕ್ಕೆ ತಲುಪಿದವು.
ಆರಂಭಿಕ ಪ್ರಯೋಗ ಫಲಿತಾಂಶಗಳ ಆಧಾರದ ಮೇಲೆ ತನ್ನ ಪ್ರಾಯೋಗಿಕ ಕೋವಿಡ್ -19 ಲಸಿಕೆ ಶೇ 90ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಫಿಜರ್ ಹೇಳಿಕ ಹೂಡಿಕೆದಾರರಲ್ಲಿ ಖರೀದಿಯ ಮನೋಭಾವವು ಹೆಚ್ಚಿಸಿತು. ಇದೊಂದು ಪ್ರಕಟಣೆ ಪೇಟೆಗೆ ದೊಡ್ಡ ಉತ್ತೇಜನ ನೀಡಿತು.
ಬಿಎಸ್‌ಇ ಸೆನ್ಸೆಕ್ಸ್ ದಿನದ ಅಂತ್ಯದ ವೇಳೆಗೆ 680.20 ಅಂಕ ಏರಿಕೆಯಾಗಿ 43,278 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 170 ಅಂಕ ಏರಿಕೆಯಾಗಿ 12,631.10 ಅಂಕಗಳ ಮಟ್ಟದಲ್ಲಿ ಕೊನೆಗೊಂಡವು. ಇದೇ ಮೊದಲ ಬಾರಿಗೆ ಈಕ್ವಿಟಿ ಬೆಂಚ್ ಮಾರ್ಕ್ಗಳು ಸಾರ್ವಕಾಲಿದ ಗರಿಷ್ಠ ಮಟ್ಟ ತಲುಪಿದವು.
ಇಂಡಿಯಾ ವಿಎಕ್ಸ್ ಷೇರು ಮೌಲ್ಯ ಶೇ 7ರಷ್ಟು ಏರಿಕೆ ಕಂಡು 21.57 ರೂ. ತಲುಪಿತು. ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ದಿನದ ಟಾಪ್ ಗೇನರ್ಗಳಾದವು.
ಕೊರೊನಾ ವೈರಸ್ ಲಸಿಕೆಯ ಯಶಸ್ವಿ ಪ್ರಕಟಣೆಗೆ ಜಾಗತಿಕ ಷೇರುಪೇಟೆಗಳು ಏರಿಕೆ ದಾಖಲಿಸಿದವು. ಜಪಾನ್‌ನ ನಿಕ್ಕಿ ಆರಂಭಿಕ ವಹಿವಾಟಿನಲ್ಲಿ 225 ಅಂಕ ಹೆಚ್ಚಳವಾಗಿ 29 ವರ್ಷಗಳ ಗರಿಷ್ಠ ಮಟ್ಟ ಮುಟ್ಟಿದೆ. ಯುರೋಪಿನಲ್ಲಿ ಷೇರುಗಳು ಎಂಟು ತಿಂಗಳ ಬಳಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ.