ಮುಂಬೈ: ಕೋವಿಡ್ 19ರ ನಿಯಂತ್ರಣಕ್ಕೆ ಎರಡನೇ ಹಂತದ ಲಾಕ್ಡೌನ್ ವಿಸ್ತರಣೆ ಆಗುತ್ತಿದ್ದಂತೆ ನಿನ್ನೆ ಮುಂಬೈ ಪೇಟೆ ಸೂಚ್ಯಂಕ ಸೆನ್ಸೆಕ್ಸ್ 310 ಅಂಕ ಕುಸಿತ ಕಂಡಿತ್ತು.
ಏಪ್ರಿಲ್ 20ರ ಬಳಿಕ ಕೆಲವು ಆರ್ಥಿಕ ಚಟುವಟಿಕೆಗಳಿಗೆ ವಿನಾಯ್ತಿ ನೀಡುವ ಮಾರ್ಗ ಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯದ ಹೊರಡಿಸಿದ ಬಳಿಕ ಮುಂಬೈ ಷೇರುಪೇಟೆಯಲ್ಲಿ ಚುರುಕಿನ ವಹಿವಾಟು ಕಂಡುಬಂದಿದೆ.
ಗುರುವಾರದ ವಹಿವಾಟಿನಂದು ಹಣಕಾಸು, ಇಂಧನ ಮತ್ತ ಪವರ್ ಸ್ಟಾಕ್ಗಳು ಮಂದಗತಿಯ ಜಾಗತಿಕ ಮಾರುಕಟ್ಟೆ ಮಧ್ಯೆಯೂ ಲಾಭ ಮಾಡಿಕೊಂಡಿವೆ. ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ ಹಾಗೂ ಎಸ್ಬಿಐ ಷೇರುಗಳು ದಿನದ ಗಳಿಕೆ ಕಂಡವು.
ದಿನದ ವಾಹಿನಾಟಿನ ಅಂತ್ಯದ ವೇಳೆಗೆ ಮುಂಬೈ ಪೇಟೆ ಸೂಚ್ಯಂಕ ಸೆನ್ಸೆಕ್ಸ್ 222.80 ಅಂಕ ಏರಿಕೆಯೊಂದಿಗೆ 30,602.61 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 67.50 ಅಂಕ ಜಿಗಿತದೊಂದಿಗೆ 8,992.80 ಅಂಗಳ ಮಟ್ಟದಲ್ಲಿ ಕೊನೆಗೊಂಡಿತು.
ಎಚ್‌ಸಿಎಲ್ ಟೆಕ್, ಕೋಟಕ್ ಬ್ಯಾಂಕ್, ಟೆಕ್ ಮಹೀಂದ್ರಾ, ಹೀರೋ ಮೊಟೊಕಾರ್ಪ್ ಮತ್ತು ಇನ್ಫೋಸಿಸ್ ಷೇರು ಮೌಲ್ಯದಲ್ಲಿ ಕುಸಿತ ಕಂಡುಬಂತು.
ಫಾರೆಕ್ಸ್ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದ್ದು, ಗುರುವಾರದ ವಹಿವಾಟಿನಂದು ಅಮೆರಿಕದ ಡಾಲರ್ ವಿರುದ್ಧ 43 ಪೈಸೆ ಕುಸಿದು 76.87ಕ್ಕೆ ತಲುಪಿದೆ. ಕೋವಿಡ್ 19 ನಿಯಂತ್ರಿಸಲು ರಾಷ್ಟ್ರವ್ಯಾಪಿ ವಿಧಿಸಲಾಗಿರುವ ಲಾಕ್ಡೌನ್ ಈ ಕುಸಿತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.