ಮುಂಬೈ : ಕೋವಿಡ್ ಮತ್ತು ಲಾಕ್‌ಡೌನ್ ಭೀತಿಯ ಮಧ್ಯೆ ಸೋಮವಾರ ಭಾರಿ ನಷ್ಟ ಅನುಭವಿಸಿದ ಮಾರುಕಟ್ಟೆಗಳು ಮಂಗಳವಾರ ನಿಟ್ಟುಸಿರು ಬಿಟ್ಟವು. ಬೆಳಗ್ಗೆ ಲಾಭದೊಂದಿಗೆ ಪ್ರಾರಂಭವಾದರೂ ಮಧ್ಯಾಹ್ನದವರೆಗೆ ಸೂಚ್ಯಂಕಗಳಲ್ಲಿ ಇಳಿಕೆಯ ಪ್ರವೃತ್ತಿ ಕಂಡು ಬಂತು. ಭಾರತದಲ್ಲಿ ಕೊರೊನಾ ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ಪ್ರಮುಖ ನಿರ್ಧಾರವು ಮಾರುಕಟ್ಟೆಯನ್ನು ಹೆಚ್ಚು ಸಕಾರಾತ್ಮಕವಾಗಿ ಚಲಿಸುವಂತೆ ಮಾಡಿದೆ.
ವಿವಿಧ ದೇಶಗಳಲ್ಲಿ ಈಗಾಗಲೇ ಅನುಮೋದನೆ ಪಡೆದ ಲಸಿಕೆಗಳನ್ನು ಅನುಮೋದಿಸುವ ಪ್ರಕ್ರಿಯೆಯನ್ನು ವೇಗಗೊಳಿಸುವ ನಿರ್ಧಾರದಿಂದ ಸೂಚ್ಯಂಕಗಳು ಲಾಭವನ್ನು ಗಳಿಸಿದವು. ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 660 ಅಂಕ ಏರಿಕೆಯಾಗಿ 48,544 ಅಂಕಗಳಿಗೆ ತಲುಪಿದರೆ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 194 ಅಂಕ ಗಳಿಸಿ 14,504 ಅಂಕಗಳಲ್ಲಿ ಕೊನೆಗೊಂಡಿತು.
ಬೆಳಗಿನ ವಹಿವಾಟಿನಲ್ಲಿ ಸೂಚ್ಯಂಕಗಳು ಲಾಭದೊಂದಿಗೆ ಪ್ರಾರಂಭವಾದವು. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 200 ಅಂಕ ಗಳಿಸಿ 48,120 ಅಂಕಗಳಿಗೆ ತಲುಪಿದೆ. ಏಷ್ಯಾದ ಮಾರುಕಟ್ಟೆಗಳು ಸಕಾರಾತ್ಮಕವಾಗಿ ಸಾಗಿದವು. ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‌ಸಿ ಮತ್ತು ಇತರರ ಷೇರುಗಳು ಕೆಳಮುಖ ಸಾಗಿದವು. ಒಂದು ಹಂತದಲ್ಲಿ 47,775 ಪಾಯಿಂಟ್‌ಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಸೆನ್ಸೆಕ್ಸ್, ವಿದೇಶಿ ಲಸಿಕೆಗಳ ಬಗ್ಗೆ ಕೇಂದ್ರದ ನಿರ್ಧಾರವನ್ನು ಸಕಾರಾತ್ಮಕ ಮಾರ್ಗದತ್ತ ತಿರುಗಿಸಿತು.
ಎಂ&ಎಂ, ಬಜಾಜ್ ಫಿನ್‌ಸರ್ವ್, ಟಾಟಾ ಮೋಟಾರ್ಸ್, ಬಜಾಜ್ ಫೈನಾನ್ಸ್, ಮಾರುತಿ ಸುಜುಕಿ, ಡಾ. ರೆಡ್ಡೀಸ್ ಲ್ಯಾಬ್ಸ್, ಟಿಸಿಎಸ್, ಟೆಕ್ ಮಹೀಂದ್ರಾ, ವಿಪ್ರೋ ಮತ್ತು ಹೆಚ್‌ಸಿಎಲ್ ಟೆಕ್ ಷೇರುಗಳು ಮಂಗಳವಾರ ಲಾಭ ಗಳಿಸಿವೆ.