ಮುಂಬೈ : ಜಾಗತಿಕ ಷೇರುಪೇಟೆಗಳಲ್ಲಿನ ಮಿಶ್ರ ಪ್ರತಿಕ್ರಿಯೆ ಹಿನ್ನೆಲೆ ಮುಂಬೈ ಮಾರುಕಟ್ಟೆಯಲ್ಲಿ ದಿನದ ಆರಂಭದಿಂದ ನಷ್ಟದಲ್ಲೇ ಸಾಗುತ್ತಿರುವ ಸೆನ್ಸೆಕ್ಸ್ 562 ಅಂಕಗಳ ಕುಸಿತ ಕಂಡು 55,896ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 175 ಅಂಕಗಳ ನಷ್ಟದ ಬಳಿಕ 16,714ರಲ್ಲಿದೆ.
ಟಾಟಾ ಸ್ಟೀಲ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಹೆಚ್‌ಸಿಎಲ್ ಟೆಕ್, ಟಿಸಿಎಸ್ ಹಾಗೂ ವಿಪ್ರೋ ನಷ್ಟ ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ. ಮತ್ತೊಂದೆಡೆ, ಮಾರುತಿ ಸುಜುಕಿ ಇಂಡಿಯಾ, ಮಹೀಂದ್ರಾ , ಅಲ್ಟ್ರಾಟೆಕ್ ಸಿಮೆಂಟ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್‌ಟೆಲ್ ಹಾಗೂ ಹೆಚ್‌ಡಿಎಫ್‌ಸಿ ಲಾಭದಲ್ಲಿ ಸಾಗಿವೆ.
ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 935.72 ಪಾಯಿಂಟ್‌ಗಳು ಜಿಗಿತ ಕಂಡು 56,486.02ರಲ್ಲಿ ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 240.85 ಪಾಯಿಂಟ್ ಏರಿಕೆಯಾಗಿ 16,871.30ಕ್ಕೆ ಬಂದು ನಿಂತಿತ್ತು. ಹಾಂಗ್ ಕಾಂಗ್ ಮತ್ತು ಶಾಂಘೈ ಷೇರು ಪೇಟೆಗಳು ಶೇ.2ರಷ್ಟು ನಷ್ಟದಲ್ಲಿವೆ. ಆದರೆ, ಟೋಕಿಯೋ ಪೇಟೆ ಮಧ್ಯ-ಸೆಷನ್ ವ್ಯವಹಾರಗಳ ಸಮಯದಲ್ಲಿ ಸ್ವಲ್ಪ ಚೇತರಿಕೆಯ ಹಾದಿಯಲ್ಲಿ ವಹಿವಾಟು ನಡೆಸುತ್ತಿದೆ.
ಡಾಲರ್ ಎದುರು ರೂ.ಮೌಲ್ಯ ಹೆಚ್ಚಳ : ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ. 3.73ರಷ್ಟು ಕಡಿಮೆ ಬಳಿಕ 102.9 ಡಾಲರ್‌ಗೆ ಇಳಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 21 ಪೈಸೆ ಹೆಚ್ಚಿಸಿಕೊಂಡು 76.33 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿನ್ನೆ 176.52 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರಿಂದ ದೇಶದ ಮಾರುಕಟ್ಟೆಗಳಲ್ಲಿ ಮಾರಾಟದ ಅಬ್ಬರ ಹೆಚ್ಚಳವಾಗಿತ್ತು. ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ 8 ತಿಂಗಳ ಗರಿಷ್ಠ ಮಟ್ಟವಾದ ಶೇ. 6.07ಕ್ಕೆ ತಲುಪಿದೆ.
ಇದನ್ನೂ ಓದಿ: ಹಣಕಾಸು ನಿರ್ವಹಣೆ ಬ್ಯಾಂಕ್ ಖಾತೆಗಳ ಮೇಲೂ ಅವಲಂಬನೆ!