ಮುಂಬೈ: ಕೇಂದ್ರ ಸರ್ಕಾರದಿಂದ ನಾಳೆ 2022-23ನೇ ಸಾಲಿನ ಬಜೆಟ್ ಮಂಡನೆ ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಆರ್ಥಿಕ ಸಮೀಕ್ಷೆಯ ವರದಿ ಮಂಡಿಸುತ್ತಿರುವ ಬೆನ್ನಲ್ಲೇ ಮುಂಬೈ ಷೇರುಪೇಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಜೆಟ್ ಅಧಿವೇಶನ ಆರಂಭವಾಗುತ್ತಿದಂತೆ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಸ್ವಲ್ಪ ಕಡಿಮೆಯಾಗಿದ್ದವು. ಬಳಿಕ ಸೆನ್ಸೆಕ್ಸ್ 712 ಅಂಕಗಳ ಏರಿಕೆಯೊಂದಿಗೆ 57,912ರಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ 216.95 ಅಂಕಗಳ ಜಿಗಿತದ ಬಳಿಕ 17,318.90ರಲ್ಲಿತ್ತು.
ಪ್ರಮುಖ ಕಂಪನಿಗಳ ಪೈಕಿ ಟೆಕ್ ಮಹೀಂದ್ರಾ ಶೇ. 2.85 ರಷ್ಟು ಷೇರುಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ಅಗ್ರ ಸ್ಥಾನದಲ್ಲಿದ್ದರೆ ವಿಪ್ರೋ, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್, ಅಲ್ಟ್ರಾಟೆಕ್ ಸಿಮೆಂಟ್ ಹಾಗೂ ಇನ್ಫೋಸಿಸ್ ನಂತರದ ಸ್ಥಾನದಲ್ಲಿದ್ದವು. ಮತ್ತೊಂದೆಡೆ ಎನ್‌ಟಿಪಿಸಿ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎಲ್&ಟಿ ನಷ್ಟದಲ್ಲಿದ್ದವು.
ಕಳೆದ ಎರಡು ವಾರಗಳಿಂದ ದೇಶೀಯ ಷೇರು ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡವು ಹೆಚ್ಚಾದ ಪರಿಣಾಮ ಸೂಚ್ಯಂಕಗಳು ಭಾರಿ ಕುಸಿತ ಕಂಡಿದ್ದವು. ಆದರೆ, ಈ ವಾರ ಮಾರುಕಟ್ಟೆಗೆ ಉತ್ತಮವಾಗಿ ಸಾಗುವ ನಿರೀಕ್ಷೆಯಿದೆ. ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿದ್ದು, ಇಂದು ಆರ್ಥಿಕ ಸಮೀಕ್ಷೆಯ ವರದಿ ಮಂಡನೆಯಾಗಲಿದೆ.
ಇದಾದ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಮಾರುಕಟ್ಟೆಯು ಬಜೆಟ್‌ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಬಜೆಟ್ ತರಲು ಸರ್ಕಾರಕ್ಕೆ ಸಾಧ್ಯವಾದರೆ ಈ ವಾರ ಸೆನ್ಸೆಕ್ಸ್ ಹಾಗೂ ನಿಫ್ಟಿ ಏರಿಕೆಯತ್ತ ಸಾಗಲಿದೆ.
ಏಷ್ಯಾದ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ
ಯುಕೆ ಸೆಂಟ್ರಲ್ ಬ್ಯಾಂಕ್ ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಮಂಡಳಿ ಸಭೆಗೂ ಮುನ್ನ ಏಷ್ಯಾದ ಮಾರುಕಟ್ಟೆಗಳಲ್ಲಿ ಇಂದು ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಯುಎಸ್ ಫೆಡರಲ್ ರಿಸರ್ವ್ ಮಾರ್ಗವನ್ನು ಅನುಸರಿಸಬಹುದು ಎನ್ನಲಾಗಿದೆ.
ಯುಎಸ್ ಸೆಂಟ್ರಲ್ ಬ್ಯಾಂಕ್ ಕಳೆದ ವಾರ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸುವುದಾಗಿ ಹೇಳಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್‌ನ ವಿಶ್ಲೇಷಕರು ಸಹ ಇದೇ ರೀತಿಯ ಅಂದಾಜುಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಹೂಡಿಕೆದಾರರು ಜಾಗರೂಕರಾಗಿದ್ದಾರೆ.
ಇಂದಿನ ವಹಿವಾಟಿನಲ್ಲಿ ಜಪಾನ್‌ನ ನಿಕ್ಕಿ ಮತ್ತು ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಶೇ.1.50 ರಷ್ಟು ಏರಿಕೆ ಕಂಡರೆ, ಆದರೆ ಚೀನಾದ ಶಾಂಘೈ ಕಾಂಪೋಸಿಟ್ ದೇಶೀಯ ಮಾರುಕಟ್ಟೆಯಲ್ಲಿ ಸ್ವಲ್ಪ ಒತ್ತಡ ಕಂಡುಬರುತ್ತಿದೆ. ದಕ್ಷಿಣ ಕೊರಿಯಾದ ಮಾರುಕಟ್ಟೆಗಳಿಗೆ ಇಂದು ರಜೆ ಇದೆ.
ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 1.31 ರಷ್ಟು ಏರಿಕೆಯಾಗಿ 91.21 ಡಾಲರ್‌ಗೆ ತಲುಪಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 15 ಪೈಸೆ ಏರಿಕೆಯಾಗಿ 74.92ಕ್ಕೆ ತಲುಪಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ