ಮುಂಬೈ: ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್ಎಂಸಿಜಿ), ಮಾಹಿತಿ ತಂತ್ರಜ್ಞಾನ, ಆರೋಗ್ಯ, ಸರಕು ವಲಯಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದು, ಸತತ ಮೂರನೇ ದಿನವೂ ಬಿಎಸ್‌ಇ ಸೆನ್ಸೆಕ್ಸ್ ಕುಸಿತ ದಾಖಲಿಸಿದೆ.
ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಏರಿಕೆಯೊಂದಿಗೆ ಮುನ್ನುಗಿದ್ದ ಸೆನ್ಸೆಕ್ಸ್, ಮಧ್ಯಾಹ್ನದ ವೇಳೆಗೆ 192 ಅಂಶಗಳ ಗರಿಷ್ಠ ಏರಿಕೆ ದಾಖಲಿಸಿತ್ತು. ಸರಕು, ಎಫ್ಎಂಸಿಜಿ, ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ, ಆರೋಗ್ಯ ರಕ್ಷಣೆ ವಲಯದ ಷೇರುಗಳು ತೀವ್ರವಾದ ಮಾರಾಟದ ಒತ್ತಡಕ್ಕೆ ಸಿಲುಕಿದವು. ತತ್ಪರಿಣಾಮ, ದಿನದಂತ್ಯಕ್ಕೆ ಮುಂಬೈ ಸೂಚ್ಯಂಕ ಸೆನ್ಸೆಕ್ಸ್ 18.17 ಅಂಕಗಳ ಇಳಿಕೆ ಕಂಡು 38,963.26 ಮಟ್ಟದಲ್ಲಿ ಮುಕ್ತಾಯವಾಗಿದೆ.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ 12.50 ಅಂಕಗಳ ಇಳಿಕೆಯೊಂದಿಗೆ 11,712.25 ಮಟ್ಟದಲ್ಲೂ ಕೊನೆಗೊಂಡಿತು. ಈ ಹಿಂದಿನ ಎರಡು ದಿನಗಳ ವಹಿವಾಟಿನಲ್ಲೂ ಸೆನ್ಸೆಕ್ಸ್ ಇಳಿಮುಖವಾಗಿತ್ತು.
ಡಾಲರ್ ಎದುರು ರೂಪಾಯಿ ಮೌಲ್ಯ 16 ಪೈಸೆಗಳ ಅಲ್ಪ ಏರಿಕೆ ಕಂಡಿದ್ದು, ₹ 69.21ನಲ್ಲಿ ವಹಿವಾಟು ನಿರತವಾಗಿದೆ.
ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್, ಎನ್ಟಿಪಿಸಿ, ಟಾಟಾ ಮೋಟರ್ಸ್, ಯೆಸ್ ಬ್ಯಾಂಕ್, ಬಜಾಜ್ ಆಟೋ, ಎಂಆ್ಯಂಡ್ಎಂ, ಕೋಟಕ್ ಬ್ಯಾಂಕ್, ಎಸ್ಬಿಐಎನ್, ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳ ಮೌಲ್ಯ ಹೆಚ್ಚಳವಾಗಿದ್ದರೇ ಕೋಲ್ ಇಂಡಿಯಾ, ಏಷಿಯನ್ ಪೆಯಿಂಟ್ಸ್, ಇಂಡಸ್ ಬ್ಯಾಂಕ್, ವೆದಲ್, ಐಟಿಸಿ, ಎಚ್ಡಿಎಫ್ಸಿ, ಬಜಾಜ್ ಫೈನಾನ್ಸ್ ಹಾಗು ಇನ್ಫೋಸಿಸ್ ಷೇರುಗಳ ಬೆಲೆ ಕ್ಷೀಣಿಸಿದ್ದವು.