ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಮಿಶ್ರ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ದೇಶದ ಷೇರುಪೇಟೆಯಲ್ಲಿಂದು ಕೂಡ ಕರಡಿ ಕುಣಿತ ಮುಂದುವರಿದಿದ್ದು, ದಿನದ ಆರಂಭದಲ್ಲೇ ಸೆನ್ಸೆಕ್ಸ್ 200 ಅಂಕ ಕುಸಿತ ಕಂಡು 57,904ರಲ್ಲಿ ವಹಿವಾಟು ನಡೆಸಿದರೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 67.55 ಅಂಕಗಳ ನಷ್ಟದೊಂದಿಗೆ 17,257ರಲ್ಲಿತ್ತು.
ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಟಿಸಿಎಸ್ ಹಾಗೂ ಹೆಚ್‌ಡಿಎಫ್‌ಸಿ ನಷ್ಟ ಅನುಭವಿಸಿದ ಪ್ರಮುಖ ಸಂಸ್ಥೆಗಳಾಗಿವೆ. ವಿದೇಶಿ ಹೂಡಿಕೆದಾರರು ಮಾರುಕಟ್ಟೆಯಿಂದ ನಿನ್ನೆ 763.18 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಮಾರಾಟದಲ್ಲಿ ಒತ್ತಡ ಹೆಚ್ಚಾಗುತ್ತಲೇ ಇದೆ.
ಮತ್ತೊಂದೆಡೆ 77 ದೇಶಗಳಲ್ಲಿ ಡೆಲ್ಟಾ ಗಿಂತ ವೇಗವಾಗಿ ಓಮಿಕ್ರಾನ್ ಹರಡುತ್ತಿದೆ. ಇದು ಕೂಡ ಮಾರುಕಟ್ಟೆಯಲ್ಲಿನ ನಕರಾತ್ಮಕ ಬೆಳವಣಿಗೆಗೆ ಕಾರಣವಾಗಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದ್ದಾರೆ.
ಜಾಗತಿಕ ಮಾರಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 22 ಪೈಸೆ ಕುಸಿತ ಕಂಡು 76 ರೂಪಾಯಿಗೆ ತಲುಪಿದೆ. ಪ್ರಸ್ತುತ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 297 ಅಂಕಗಳ ನಷ್ಟದೊಂದಿಗೆ 57,850ರಲ್ಲಿದ್ದರೆ, ನಿಫ್ಟಿ 92 ಅಂಕಗಳ ಕುಸಿತ ಕಂಡು 17,232ರಲ್ಲಿ ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: 3 ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯಿಂದ ₹8.02 ಲಕ್ಷ ಕೋಟಿ ಸಂಗ್ರಹ: ಸಚಿವೆ ಸೀತಾರಾಮನ್