ನವದೆಹಲಿ: ಗಣೇಶ್ ಚತುರ್ಥಿ, ದಸರಾ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತನ್ನ ಗ್ರಾಹಕರಿಗೆ ಭರ್ಜರಿ ಆಫರ್ಗಳನ್ನು ಘೋಷಿಸಿದೆ.
ಗ್ರಾಹಕರಿಗೆ ಹಬ್ಬದ ಉತ್ಸಾಹ ಹೆಚ್ಚಿಸಲು ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಕಡಿತ ಮಾಡಲಾಗಿದೆ. ಸಾಲ ಸಂಸ್ಕರಣಾ ಶುಲ್ಕದಲ್ಲಿ ಮನ್ನಾ, ಪೂರ್ವ- ಅನುಮೋದಿತ ಡಿಜಿಟಲ್ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಮತ್ತು ವಿವಿಧ ವರ್ಗಗಳಡಿ ಹಬ್ಬಿರುವ ಬಡ್ಡಿದರಗಳ ಇಳಿಕೆಯ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದಾಗಿದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಹಬ್ಬಗಳ ಕೊಡುಗೆಯಾಗಿ ನೀಡಲಾಗುತ್ತಿರುವ ಈ ಆಫರ್ಗಳ ವಾಯ್ದೆ ನಿರ್ದಿಷ್ಟಪಡಿಸಿಲ್ಲ. ಈ ಯೋಜನೆಗಳು ಕೆಲವು ದಿನಗಳ ಮಟ್ಟಿಗೆ ಮುಂದಿವರಿಯಲಿದೆ. ಹಬ್ಬದ ಅವಧಿಯಲ್ಲಿ ಎಸ್‌ಬಿಐ ಕಾರುಗಳ ಮೇಲಿನ ಸಾಲದ ಸಂಸ್ಕರಣಾ ಶುಲ್ಕ ಮನ್ನಾ ಮಾಡಿದೆ. ಕಾರುಗಳ ಮೇಲೆ ಶೇ 8.70ರಷ್ಟು ಬಡ್ಡ ದರ ವಿಧಿಸಲಾಗಿದೆ. ಗ್ರಾಹಕರು ಭವಿಷ್ಯದಲ್ಲಿ ಬಡ್ಡಿದರ ಏರಿಕೆಯ ಬಗ್ಗೆ ಚಿಂತಿಸಬೇಕಿಲ್ಲ ಎಂದು ಭರವಸೆ ನೀಡಿದೆ.
ಗ್ರಾಹಕರು ಆನ್ಲೈನ್ ಸೇವೆಯ ಯೋನೋ ಅಥವಾ ವೆಬ್ಸೈಟ್ ಮುಖೇನ ಕಾರುಗಳ ಸಾಲಕ್ಕೆ ಅರ್ಜಿ ನೀಡಿದರೇ ಬಡ್ಡಿಯಲ್ಲಿ 25 ಬೇಸಿಸ್ ಪಾಯಿಂಟ್ಗಳ ರಿಯಾಯಿತಿ ಸಿಗಲಿದೆ. ಮಾಸಿಕ ವೇತನದಾದರರು ಕಾರುಗಳು ಮೇಲೆ ಶೇ.90ರಷ್ಟು (ಆನ್ ರೋಡ್ ಬೆಲೆಯಲ್ಲಿ) ಸಾಲ ಸಿಗಲಿದೆ ಎಂದು ತಿಳಿಸಿದೆ.
ಯೋನೋ ಮೂಲಕ ವೇತನ ಖಾತೆ ಹೊಂದಿದವರಿಗೆ ₹ 5 ಲಕ್ಷದ ವರೆಗೆ ಸಾಲ. ಶೇ 8.25 ಬಡ್ಡಿದರದಲ್ಲಿ ₹ 50 ಲಕ್ಷದಿಂದ ₹ 1.50 ಕೋಟಿವರೆಗೆ ಶೈಕ್ಷಣಿಕ ಸಾಲ. ಶೇ 10.75ರ ಬಡ್ಡಿಯಲ್ಲಿ ₹ 20 ಲಕ್ಷದವರೆಗೆ ವೈಯಕ್ತಿಕ ಸಾಲ ಸೌಲಭ್ಯವಿದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ವಿವರಿಸಿದೆ.