ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ಮಹಾಭಾರತಲ್ಲಿ ಕರ್ಣನ ರಥದ ಚಕ್ರದ ರೀತಿ ಹಲವು ವಲಯಗಳು ಹೂತುಹೋಗಿವೆ. ಈ ಪೈಕಿ ಚಿಲ್ಲರೆ ವಹಿವಾಟು ವಲಯವೂ ಒಂದು. ಚಿಲ್ಲರೆ ವ್ಯಾಪಾರ ವಲಯದಲ್ಲಿ ಪ್ರಗತಿಗೆ ಮಿತಿಯೇ ಇಲ್ಲ ಎಂದು ಹಲವು ಅಧ್ಯಯನಗಳು ಈಗಾಗಲೇ ಸೂಚಿಸಿವೆ. ಆದರೆ, ಸಾಂಕ್ರಾಮಿಕ ರೋಗವು ಈ ವಲಯವನ್ನು ಹದಗೆಡಿಸಿಬಿಟ್ಟಿದೆ.
40 ಸಾವಿರ ವ್ಯಾಪಾರಿಗಳ ಸಂಘಟನೆಯಾಗಿರುವ ಅಖಿಲ ಭಾರತ ವ್ಯಾಪಾರಿಗಳ ಸಂಘಟನೆಯು, ಮೊದಲ 100 ದಿನಗಳ ಲಾಕ್‌ಡೌನ್ ಸಮಯದಲ್ಲಿ 15.5 ಲಕ್ಷ ಕೋಟಿ ನಷ್ಟ ಅನುಭವಿಸಿದ್ದೇವೆ ಎಂದು ಕಳೆದ ವರ್ಷದ ಜುಲೈನಲ್ಲಿ ಹೇಳಿದೆ. ಹಂತ ಹಂತವಾಗಿ ವಹಿವಾಟು ತೆರೆದಿದ್ದು, ಅಂಗಡಿಗಳು ಪುನಃ ತೆರೆದಿದ್ದರೂ, ವ್ಯಾಪಾರವು ಹಿಂದಿನ ಸ್ಥಿತಿಗೆ ವಾಪಸಾಗಬೇಕಿರುವ ಹಿನ್ನೆಲೆಯಲ್ಲಿ ಅನಿಶ್ಚಿತತೆ ಇನ್ನೂ ತಾಂಡವವಾಡುತ್ತಿದೆ.
ಚಿಲ್ಲರೆ ವಲಯವು ಸಮಸ್ಯೆಯನ್ನು ಹಿಮ್ಮೆಟ್ಟಿ ಸುಧಾರಿಸಿಕೊಳ್ಳಲು ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಬೆಂಬಲ ನೀಡಬೇಕು ಎಂದು ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘಟನೆ (ಆರ್‌ಎಐ) ಬೇಡಿಕೆ ಇಟ್ಟಿದೆ. ಮುಂದಿನ ಬಜೆಟ್‌ನಲ್ಲಿ ನೆರವು ಒದಗಿಸುವಂತೆ ಸಂಘಟನೆ ಬೇಡಿಕೆ ಸಲ್ಲಿಸಿದೆ.
ದೇಶದ ಆರ್ಥಿಕತೆಗೆ ಬಳಕೆಯೇ ಬಲ. ಇದನ್ನು ಸಾಧಿಸಲು ಚಿಲ್ಲರೆ ವ್ಯಾಪಾರ ಕ್ಷೇತ್ರವೇ ಅತ್ಯಂತ ಪ್ರಮುಖವಾಗಿದೆ. ಚಿಲ್ಲರೆ ವಹಿವಾಟು ಕ್ಷೇತ್ರಕ್ಕೆ ಸಂಬಂಧಿಸಿದ ನೀತಿ ನಿರೂಪಣೆಯಲ್ಲಿನ ಅಡ್ಡಿಯನ್ನು ನಿವಾರಿಸಬೇಕು ಮತ್ತು ಈ ವಲಯದ ಅಭಿವೃದ್ಧಿಗೆ ಅಗತ್ಯ ಹಣಕಾಸು ಲಭ್ಯವಾಗಬೇಕು ಎಂಬ ದೃಷ್ಟಿಯಿಂದ ಆರ್‌ಎಐ ಈ ಬೇಡಿಕೆ ಸಲ್ಲಿಸಿದೆ. ಅಲ್ಲದೆ, ರಾಷ್ಟ್ರೀಯ ಚಿಲ್ಲರೆ ವಹಿವಾಟು ನೀತಿಯನ್ನು ರೂಪಿಸಬೇಕು ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಅದನ್ನು ಜಾರಿ ಮಾಡಬೇಕು ಎಂದೂ ಆರ್‌ಎಐ ಬೇಡಿಕೆ ಸಲ್ಲಿಸಿದೆ.
ಚಿಲ್ಲರೆ ವಹಿವಾಟು ಕ್ಷೇತ್ರಕ್ಕೆ ಎಂಎಸ್‌ಎಂಇ ಮಾನ್ಯತೆ ನೀಡಬೇಕು ಮತ್ತು ಮುದ್ರಾ ಯೋಜನೆ ಅಡಿಯಲ್ಲಿ ಕಿರಾಣಿ ಅಂಗಡಿಗಳ ಡಿಜಿಟಲೀಕರಣಕ್ಕೆ ಹಣಕಾಸು ನೆರವು ಒದಗಿಸಬೇಕು ಎಂದು ಇದು ಆಗ್ರಹಿಸಿದೆ. ಸಮಗ್ರ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿಯನ್ನು ಜಾರಿಗೆ ತಂದರೆ, 2024ರ ವೇಳೆಗೆ ಸುಮಾರು 30 ಲಕ್ಷ ಉದ್ಯೋಗವನ್ನು ಸೃಷ್ಟಿಸಬಹುದು ಎಂದು ಅಧ್ಯಯನಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಿದೆ.
ವರದಿಗಳಪ್ರಕಾರ, 2017 ರಲ್ಲಿ 79,500 ಕೋಟಿ ರೂ. ಇಂದ 2026 ರಲ್ಲಿ 1.75 ಲಕ್ಷ ಕೋಟಿ ರೂ.ಗೆ ರಾಷ್ಟ್ರೀಯ ಚಿಲ್ಲರೆ ವಹಿವಾಟು ವಲಯ ಬೆಳೆಯಲಿದೆ. 2019 ರ ವಿಶ್ವ ಚಿಲ್ಲರೆ ವಹಿವಾಟು ಸೂಚ್ಯಂಕದಲ್ಲಿ ಎರಡನೇ ಸ್ಥಾನದಲ್ಲಿ ಭಾರತ ಇದೆ. ಜಿಡಿಪಿಯಲ್ಲಿ ಚಿಲ್ಲರೆ ವಹಿವಾಟು ಶೇ. 10 ರಷ್ಟನ್ನು ಒಳಗೊಂಡಿದೆ.
ಈ ವಲಯ ಸುಮಾರು ಶೇ. 8 ರಷ್ಟು ಉದ್ಯೋಗವನ್ನು ಸೃಷ್ಟಿಸಿದೆ. ಆದರೆ, ಶೇ. 88 ರಷ್ಟು ಚಿಲ್ಲರೆ ವಹಿವಾಟು ಅಸಂಘಟಿತ ವಲಯದ ವ್ಯಾಪ್ತಿಯಲ್ಲಿದೆ. ಇದೇ ಕಾರಣಕ್ಕೆ ಚಿಲ್ಲರೆ ವಲಯವು ಮಲೇಷ್ಯಾ ಮತ್ತು ಥಾಯ್ಲೆಂಡ್‌ಗೆ ಹೋಲಿಸಿದರೆ, ಜಿಡಿಪಿಗೆ ಹೆಚ್ಚು ಕೊಡುಗೆ ನೀಡಲು ಸಾಧ್ಯವಾಗಿಲ್ಲ.
ಲಾಕ್‌ಡೌನ್ ಸಮಯದಲ್ಲಿ ಹಣಕಾಸಿನ ಕೊರತೆಯಿಂದಾಗಿ ಸುಮಾರು 7 ಲಕ್ಷ ರಿಟೇಲ್ ಅಂಗಡಿಗಳು ಮುಚ್ಚಿವೆ. ಬೇಡಿಕೆ ಮತ್ತು ಪೂರೈಕೆ ಸರಣಿಯ ಸಮಸ್ಯೆಗಿಂತ ಸಮಸ್ಯೆ ತುಂಬಾ ಆಳವಾಗಿರುವುದನ್ನು ಇದು ಸೂಚಿಸುತ್ತಿದೆ. ಇನ್ನೊಂದೆಡೆ, ವಹಿವಾಟು ಸುಲಭವಾಗಿಸುವುದು, ನಿಯಮಗಳ ಉದಾರೀಕರಣ, ಈ ವಹಿವಾಟಿಗೆ ಸಂಬಂಧಿಸಿದ ಕಾರ್ಯಪಡೆಗೆ ಕೌಶಲಗಳನ್ನು ಒದಗಿಸುವುದು ಮತ್ತು ಇಂಟರ್ನೆಟ್‌ನ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳುವ ಉದ್ದೇಶದಿಂದ ರಾಷ್ಟ್ರೀಯ ಚಿಲ್ಲರೆ ವಹಿವಾಟು ನೀತಿಗೆ ಅಂತಿಮ ಸ್ಪರ್ಶವನ್ನು ಒದಗಿಸುವುದಾಗಿ ಕೇಂದ್ರ ಸರ್ಕಾರವು ಹೇಳುತ್ತಿದೆ.
ಚಿಲ್ಲರೆ ಅಂಗಡಿಯನ್ನು ಸ್ಥಾಪಿಸಲು 16 ರಿಂದ 25 ಲೈಸೆನ್ಸ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವ್ಯಾಪಾರಿಗಳ ಮಂಡಳಿಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನ ಲೈಸೆನ್ಸ್‌ಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಏಕಗವಾಕ್ಷಿ ಅನುಮತಿ ಒದಗಿಸಬೇಕು ಮತ್ತು ಇಂಟರ್ನೆಟ್ ಮೂಲಕ ಅನುಮತಿ ನೀಡುವಂತಾಗಬೇಕು ಎಂದು ವ್ಯಾಪಾರಿಗಳ ಮಂಡಳಿ ಆಗ್ರಹಿಸುತ್ತಿದೆ. ಕಾರ್ಯನಿರ್ವಹಣೆ ಬಂಡವಾಳ ಒದಗಿಸುವುದು ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಅನುಮತಿ ನೀಡುವಂತೆಯೇ ಅವು ಆಗ್ರಹಿಸುತ್ತಿವೆ.
ಗೋದಾಮುಗಳ ಕೊರತೆ, ಶೈತ್ಯಾಗಾರ ಸೌಲಭ್ಯಗಳು ಮತ್ತು ಸಾರಿಗೆ ಸೇವೆಗಳು ಸುಮಾರು ಶೇ. 8 ರಷ್ಟು ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ರಾಷ್ಟ್ರೀಯ ನೀತಿಯು ಇಂತಹ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡಾಗ ಮಾತ್ರ ಚಿಲ್ಲರೆ ವಹಿವಾಟು ವಲಯ ಚೇತರಿಸಿಕೊಳ್ಳಬಹುದು.