ನವದೆಹಲಿ : ಹೊಸ ಖಾತೆಗಳನ್ನು ಆರಂಭಿಸದಂತೆ ಪೇಟಿಎಂನ ಪೇಮೆಂಟ್ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ಹೇರಿರುವುದು ಮಾರುಕಟ್ಟೆಯಲ್ಲಿ ನಷ್ಟದಲ್ಲಿರುವ ಪೇಟಿಎಂಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಚೀನಾದ ಕಂಪನಿಯೊಂದಕ್ಕೆ ಸರ್ವರ್‌ನ ಮಾಹಿತಿ ಹಂಚಿಕೊಂಡಿದೆ ಎಂಬ ವರದಿಗಳನ್ನು ಆಧರಿಸಿ ಆರ್‌ಬಿಐ ಕ್ರಮ ಕೈಗೊಂಡಿದೆ. ಆದರೆ ಪೇಟಿಎಂ ಈ ವರದಿಗಳನ್ನು ನಿರಾಕರಿಸಿದ್ದು, ಚೀನಾ ಕಂಪನಿಗೆ ಸೋರಿಕೆಯಾದ ಡೇಟಾ ಬಗ್ಗೆ ಪ್ರಕಟವಾಗಿರುವ ಸುದ್ದಿಗಳೆಲ್ಲಾ ಸುಳ್ಳು. ಕಂಪನಿಯ ವಿರುದ್ಧ ಇಂತಹ ಲೇಖನಗಳು ಬರೆದ ಕಾರಣ ಆರ್‌ಬಿಐ ಕ್ರಮಕೈಗೊಂಡಿದೆ. ಪೇಮೆಂಟ್ಸ್ ಬ್ಯಾಂಕ್ ಸಂಪೂರ್ಣ ದೇಶೀಯ ಬ್ಯಾಂಕ್ ಎಂದು ಹೆಮ್ಮೆಪಡುತ್ತೇವೆ ಎಂದು ಸ್ಪಷ್ಟನೆ ನೀಡಿದೆ.
ಸಾರ್ವಜನಿಕರ ಡೇಟಾ ಕುರಿತು ಕಂಪನಿಯು ಆರ್‌ಬಿಐ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿದೆ. ಯಾವುದೇ ವಿದೇಶಿಗರಿಗೆ ನಮ್ಮ ಸರ್ವರ್‌ನ ಆಕ್ಸಸ್ ನೀಡಿಲ್ಲ ಎಂದು ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಟ್ವೀಟ್ ಮಾಡಿದ್ದಾರೆ.
100 ರೂ. ಹೂಡಿಕೆ ಮಾಡಿದ್ದವರಿಗೆ ಉಳಿದಿದ್ದು 31 ರೂ.
ಪೇಟಿಎಂ ಮೂಲ ಕಂಪನಿ '97 ಕಮ್ಯುನಿಕೇಷನ್'ನ ಷೇರುಗಳಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರು ನಷ್ಟದೊಂದಿಗೆ ಕಣ್ಣೀರು ಹಾಕುತ್ತಿದ್ದಾರೆ. ಕೇವಲ ನಾಲ್ಕು ತಿಂಗಳಲ್ಲಿ ಷೇರುಗಳು ಅದರ ವಿತರಣೆಯ ಬೆಲೆಯ ಶೇ.69ರಷ್ಟು ಕಳೆದುಕೊಂಡಿವೆ. ಅಂದರೆ 100 ರೂಪಾಯಿ ಹೂಡಿಕೆ ಮಾಡಿದರೆ ಹೂಡಿಕೆದಾರರ ಬಳಿ 31 ರೂಪಾಯಿ ಉಳಿದಿದೆ.
ನವೆಂಬರ್, 2021ರಲ್ಲಿ ಐಪಿಒಗೆ ಬಂದಾಗ ವಿತರಣೆಯ ಬೆಲೆ 2,150 ರೂ.ಗಳಿತ್ತು. ನಿನ್ನೆಯ ವಹಿವಾಟಿನ ಅಂತ್ಯದ ವೇಳೆಗೆ ಪೇಟಿಎಂನ ಷೇರಿನ ಮೌಲ್ಯ 675.35 ರೂ.ಗೆ ಇಳಿದಿದೆ. ನಿನ್ನೆ ಒಂದೇ ದಿನದಲ್ಲಿ ಶೇ.13ರಷ್ಟು ಕುಸಿತ ಕಂಡಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿನ ಮಾನಿಟರಿಂಗ್ ನ್ಯೂನತೆಗಳನ್ನು ಉಲ್ಲೇಖಿಸಿ ಆರ್‌ಬಿಐ ಹೊಸ ಖಾತೆಗಳನ್ನು ತೆರೆಯಲು ನಿರ್ಬಂಧಗಳನ್ನು ವಿಧಿಸಿದ್ದು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಪೇಟಿಎಂನ ಮಾರುಕಟ್ಟೆ ಮೌಲ್ಯವು 6,429.92 ಕೋಟಿ ರೂಪಾಯಿಗಳಷ್ಟು ಕುಸಿದ ಬಳಿಕ ಒಟ್ಟು ಮೌಲ್ಯ 43,798.08 ಕೋಟಿ ರೂಪಾಯಿಗಳಿಗೆ ತಲುಪಿದೆ.
ಇದನ್ನೂ ಓದಿ: ಒಮ್ಮೆ ಗಮನಿಸಿ.. ಪೆಟ್ರೋಲ್ ಬಂಕ್ನಲ್ಲಿ ನಿಮಗೆ ಸಿಗುವ ಉಚಿತಗಳು..