ನವದೆಹಲಿ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ಬೀದಿಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ 10,000 ರೂ.ವರೆಗೆ ಸಾಲ ಸೌಲಭ್ಯ ಯೋಜನೆ ಪರಿಚಯಿಸಲಾಗಿತ್ತು. ಇದಕ್ಕೆ ವರ್ತಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಪಿಎಂ ಸ್ವನಿಧಿ ಸಾಲಕ್ಕೆ 5 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಸಂಕಷ್ಟದಲ್ಲಿರುವ ಬೀದಿಬದಿಯ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ಪುನರಾರಂಭಿಸಲು ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರದ ಆತ್ಮನಿರ್ಭರ ಭಾರತದ ಪಿಎಂ ಸ್ವನಿಧಿ ಯೋಜನೆಯು ವ್ಯಾಪಾರಿಗಳಲ್ಲಿ ಉತ್ಸಾಹ ಮೂಡಿಸಿದೆ. ಈ ಯೋಜನೆಯಡಿ ಸಾಲ ಪ್ರಕ್ರಿಯೆ ಪ್ರಾರಂಭವಾದ 41 ದಿನಗಳಲ್ಲಿ ಒಂದು ಲಕ್ಷ ಜನರಿಗೆ ಸಾಲ ಮಂಜೂರಾಗಿದ್ದು, ಇನ್ನೂ ಐದು ಲಕ್ಷ ಬೀದಿಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪಿಎಂ ಸ್ವನಿಧಿ ಯೋಜನೆಯಡಿ 10,000 ರೂ. ಸಾಲ ಪಡೆಯುವ ವ್ಯಾಪಾರಿಗಳು ಒಂದು ವರ್ಷದ ಕಾಲಾವಧಿಯಲ್ಲಿ ಮಾಸಿಕ ಕಂತುಗಳಲ್ಲಿ ಸಾಲ ಮರುಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಆ್ಯಪ್ ಕೂಡ ಬಿಡುಗಡೆ ಮಾಡಲಾಗಿದೆ.